ಮೂರು ಗಂಟೆ ತಡವಾಗಿ ಮೆಟ್ರೋ ರೈಲಿಗೆ ಚಾಲನೆ!
ಬೆಂಗಳೂರು, ಮಾ.1 : ಬಹುನಿರೀಕ್ಷಿತ ಸಂಪಿಗೆ ರಸ್ತೆ ಪೀಣ್ಯ ನಡುವಿನ ನಮ್ಮ ಮೆಟ್ರೋ ರೈಲು ಸಂಚಾರಕ್ಕೆ ಶುಕ್ರವಾರ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದು, ಮಾರ್ಚ್ 1ರ ಶನಿವಾರದಿಂದ ಸಾರ್ವಜನಿಕ ಸಂಚಾರ ಆರಂಭವಾಗಿದೆ. ನಮ್ಮ ಮೆಟ್ರೊ ಮೊದಲನೇ ಹಂತದ ಯೋಜನೆಯನ್ನು 2015ರ ಮಾರ್ಚ್ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಉದ್ಘಾಟನಾ ಸಮಾರಂಭದಲ್ಲಿ ಭರವಸೆ ನೀಡಿದ್ದಾರೆ.
ಶುಕ್ರವಾರ ಸಂಜೆ 6 ಗಂಟೆಗೆ ಸಿಎಂ ಸಿದ್ದರಾಮಯ್ಯ ರಾಜಾಜಿನಗರ ನಿಲ್ದಾಣದಲ್ಲಿ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಬೇಕಾಗಿತ್ತು. ನಿಗದಿತ ಸಮಯಕ್ಕಿಂತ ಮೂರು ಗಂಟೆ ತಡವಾಗಿ ಆಗಮಿಸಿದ ಮುಖ್ಯಮಂತ್ರಿಗಳು ರಾತ್ರಿ 9 ಗಂಟೆಗೆ ಕಾರ್ಯಕ್ರಮಕ್ಕೆ ಆಗಮಿಸಿದರು. ನಿಲ್ದಾಣದಲ್ಲಿದ್ದ ಎರಡು ರೈಲುಗಳ ಪೈಕಿ ಹಿಂಬದಿಯ ರೈಲಿಗೆ ಹಸಿರು ನಿಶಾನೆ ತೋರಿ ಮುಂದಿದ್ದ ರೈಲಿನ ಮೂಲಕ ಸಂಪಿಗೆ ರಸ್ತೆಯ ನಿಲ್ದಾಣವನ್ನು ತಲುಪಿದರು. [ಪೀಣ್ಯಕ್ಕೆ ಇನ್ನು 18 ನಿಮಿಷದಲ್ಲಿ ಹೋಗಿ]
ನಂತರ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಭವ್ಯ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮ ಮೆಟ್ರೊ ಮೊದಲನೇ ಹಂತದ ಯೋಜನೆಯನ್ನು 2015ರ ಮಾರ್ಚ್ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಎರಡನೇ ಹಂತದ ಯೋಜನೆಯನ್ನು ಐದು ವರ್ಷಗಳಲ್ಲಿ ಪೂರ್ಣಗೊಳಿಸಲು ಸಂಕಲ್ಪಿಸಲಾಗಿದೆ ಎಂದರು. ಚಿತ್ರಗಳಲ್ಲಿ ನಮ್ಮ ಮೆಟ್ರೋ ಉದ್ಘಾಟನಾ ಸಮಾರಂಭ [ನಮ್ಮ ಮೆಟ್ರೋದಲ್ಲಿ ಹಿಂದಿಯೇಕೆ]

ಮೆಟ್ರೋ ರೈಲಿಗೆ ಹಸಿರು ನಿಶಾನೆ
ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಶುಕ್ರವಾರ ಸಂಜೆ 9 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮುಂತಾದವರು ಸಂಪಿಗೆ ರಸ್ತೆ-ಪೀಣ್ಯ (ರೀಚ್ 3 ಮತ್ತು 3ಎ) ನಡುವಿನ 10.5 ಕಿ.ಮೀ ಉದ್ದದ ಮಾರ್ಗದಲ್ಲಿನ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು.

2ನೇ ಹಂತಕ್ಕೆ ಶಂಕುಸ್ಥಾಪನೆ
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನಮ್ಮ ಮೆಟ್ರೊ ಎರಡನೇ ಹಂತದ ಯೋಜನೆಗೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು. 26,405 ಕೋಟಿ ವೆಚ್ಚದ ಎರಡನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಕೇಂದ್ರ ಇದಕ್ಕೆ ಶೇ 20ರಷ್ಟು ಹಣ ನೀಡಲಿದೆ. ರಾಜ್ಯ ಸರ್ಕಾರ ಶೇ 34 ರಷ್ಟು ಹಣ ಭರಿಸಲಿದೆ. ಉಳಿದ ಶೇ 46 ಹಣವನ್ನು ಸಾಲವಾಗಿ ಪಡೆಯಬೇಕಿದೆ ಎಂದು ಸಿದ್ದರಾಮಯ್ಯ ಹೇಳಿದರು.

2015 ಮಾರ್ಚ್ ವೇಳೆಗೆ ಪೂರ್ಣ
ಮೊದಲ ಹಂತದಲ್ಲಿ 17 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಉಳಿದ 25 ಕಿ.ಮೀ. ಮಾರ್ಗದ ಕಾಮಗಾರಿ ಶೇ 78ರಷ್ಟು ಪೂರ್ಣಗೊಂಡಿದೆ. ನಮ್ಮ ಮೆಟ್ರೋ ಯೋಜನೆಯ ಮೊದಲನೇ ಹಂತದ ಕಾಮಗಾರಿಯನ್ನು ಮಾರ್ಚ್ 2015 ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸಮಾರಂಭದಲ್ಲಿ ಇದ್ದವರು
ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಜೊತೆಗೆ ಸಚಿವರಾದ ಆರ್.ರೋಷನ್ ಬೇಗ್, ಕೆ.ಜೆ.ಜಾರ್ಜ್, ಎಚ್.ಕೆ.ಪಾಟೀಲ್, ರಾಮಲಿಂಗಾ ರೆಡ್ಡಿ, ಡಾ.ಎಚ್.ಸಿ.ಮಹದೇವಪ್ಪ, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಸಂಸದ ಡಿ.ಕೆ.ಸುರೇಶ್, ಮೇಯರ್ ಬಿ.ಎಸ್.ಸತ್ಯನಾರಾಯಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಮೆಟ್ರೊ ನಿಗಮದ ಅಧ್ಯಕ್ಷ ಡಾ.ಸುಧೀರ್ ಕೃಷ್ಣ, ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಮುಂತಾದವರು ಉಪಸ್ಥಿತರಿದ್ದರು.

ಹಳಿಯ ಮೇಲೆ ಓಡುತ್ತಿದೆ ರೈಲು
ಸಂಪಿಗೆ ರಸ್ತೆ ಪೀಣ್ಯ ನಡುವಿನ 10.5 ಕಿಮೀ ನಡುವಿನ ಮಾರ್ಗದಲ್ಲಿ ಪೀಣ್ಯ ಇಂಡಸ್ಟ್ರಿ, ಪೀಣ್ಯ, ಯಶವಂತಪುರ ಇಂಡಸ್ಟ್ರಿ, ಯಶವಂತಪುರ, ಸ್ಯಾಂಡಲ್ ಸೋಪ್ ಕಾರ್ಖನೆ, ಮಹಾಲಕ್ಷ್ಮಿ, ರಾಜಾಜಿನಗರ, ಶ್ರೀರಾಂಪುರ, ಕುವೆಂಪು ರಸ್ತೆ ಮತ್ತು ಸಂಪಿಗೆ ರಸ್ತೆ ನಿಲ್ದಾಣಗಳಿವೆ. ಮಾರ್ಚ್ 1ರ ಶನಿವಾರದಿಂದ ಈ ಮಾರ್ಗದಲ್ಲಿ ಸಂಚಾರ ಆರಂಭವಾಗಿದೆ.












Click it and Unblock the Notifications