ಸೌಮ್ಯ ರೆಡ್ಡಿ ಪರ ಸಿದ್ದರಾಮಯ್ಯ ಪ್ರಚಾರ: ತೆರೆದ ವಾಹನದಲ್ಲಿ ಭರ್ಜರಿ ರೋಡ್ ಶೋ
ಬೆಂಗಳೂರು ಏಪ್ರಿಲ್ 8: ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮತಯಾಚನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ದಿನದಿಂದ ಮತಯಾಚನೆ ಆರಂಭವಿಸಿದ ಕೈ ನಾಯಕರು ಇಂದು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಪರ ಪ್ರಚಾರ ಮಾಡಿದರು.
ತೆರೆದ ವಾಹನದಲ್ಲಿ ಭರ್ಜರಿ ರೋಡ್ ಶೋ ಮೂಲಕ ಮತಯಾಚನೆ ಮಾಡುವ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಜೊತೆಗೆ ರಾಮಲಿಂಗಾರೆಡ್ಡಿ ಕೂಡ ಸಾಥ್ ನೀಡಿದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಸೌಮ್ಯಾ ರೆಡ್ಡಿ ಅವರನ್ನು ಗೆಲ್ಲಿಸಿ ಎಂದು ಮತದಾರರಿಗೆ ಮನವಿ ಮಾಡಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವಿವಿಧೆಡೆ ರೋಡ್ ಶೋ ನಡೆಸಿ, ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರನ್ನು ಗರಿಷ್ಠ ಮತಗಳ ಅಂತರದಿಂದ ಗೆಲ್ಲಿಸಿಕೊಡಬೇಕೆಂದು ಕೇಳಿಕೊಂಡರು. ನಾವು ಬರೀ ಭಾವನಾತ್ಮಕವಾಗಿ ಜನರನ್ನು ಕೆರಳಿಸಿ ವಂಚಿಸಲ್ಲ. ನಿಮ್ಮ ಭಾವನೆಗಳನ್ನು ಗೌರವಿಸುತ್ತಲೇ ನಿಮ್ಮ ಬದುಕಿಗೆ ಸ್ಪಂದಿಸುತ್ತೇವೆ. ಆದ್ದರಿಂದ ಕಾಂಗ್ರೆಸ್ ಗೆಲ್ಲಿಸಿ ದೇಶ ಉಳಿಸಿ ಎಂದು ಸಿದ್ದರಾಮಯ್ಯ ಹೇಳಿದರು.
ತೇಜಸ್ವಿ ಸೂರ್ಯ ಸಂಸದರಾಗಿ ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ ಒಮ್ಮೆಯೂ ಧ್ವನಿ ಎತ್ತಿಲ್ಲ. ಮೋದಿ ಮುಖ ತೋರಿಸಿ ಓಟು ಕೇಳುವ ದುರ್ಗತಿ ಬಿಜೆಪಿ ಅವರಿಗೆ ಬಂದಿದೆ. ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಮತ ಕೇಳುವ ಮುಖ ಇಲ್ಲ. ಏಕೆಂದರೆ ಇವರು ಅಭಿವೃದ್ಧಿ ಕಾರ್ಯಗಳನ್ನೇ ಮಾಡಿಲ್ಲ ಎಂದು ಸಿದ್ದರಾಮಯ್ಯ ಟೀಕೆ ಮಾಡಿದರು.
ಪ್ರಧಾನಿ ಮೋದಿಯವರು ಕಳೆದ ಹತ್ತು ವರ್ಷಗಳಲ್ಲಿ ಭಾರತೀಯರಿಗೆ ಕೊಟ್ಟ ಒಂದು ಮಾತನ್ನೂ ಉಳಿಸಿಕೊಂಡಿಲ್ಲ. ಕಪ್ಪುಹಣ ವಾಪಾಸ್ ತರಲಿಲ್ಲ. ಭಾರತೀಯರ ಖಾತೆಗೆ 15 ಲಕ್ಷ ಹಾಕಲಿಲ್ಲ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡಲಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂದ ಮೋದಿ ರೈತರ ಖರ್ಚು ಹೆಚ್ಚಾಗುವಂತೆ ಮಾಡಿದ್ದಾರೆ. ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ, ಬೇಳೆ ಕಾಳುಗಳ ಬೆಲೆ ಇಳಿಸಲಿಲ್ಲ. ಮತ್ತೆ ಅದೇ ಮುಖ ನೋಡಿ ಮತ ಹಾಕಿದರೆ ಆ ಮತಕ್ಕೆ ಘನತೆ ಬರುತ್ತದಾ? ಎಂದು ಪ್ರಶ್ನೆ ಮಾಡಿದರು.

ಸೌಮ್ಯರೆಡ್ಡಿ ಗೆದ್ದರೆ ನಾನು ಗೆದ್ದಂತೆ. ನಿಮ್ಮ ಹೃದಯದ ಮಾತು ಕೇಳಿ ಮತ ಹಾಕಿ. ಬರೀ ಭಾವನಾತ್ಮಕವಾಗಿ ಕೆರಳಿ ಮತ ಹಾಕಿದ್ದಕ್ಕೆ ಹತ್ತು ವರ್ಷದಲ್ಲಿ ದೇಶಕ್ಕೆ, ನಿಮಗೆ ಸಿಕ್ಕಿದ್ದೇನು? ಬೆಲೆಯೇರಿಕೆ, ಬಡತನ, ನಿರುದ್ಯೋಗ ಮಾತ್ರ ಎಮದು ಸಿದ್ದರಾಮಯ್ಯ ಮತಯಾಚನೆ ವೇಳೆ ಮನವರಿಕೆ ಮಾಡಿದರು.
ಬೊಮ್ಮನಹಳ್ಳಿಯಲ್ಲಿ ಕಳೆದ ದಿನ ಆಯೋಜಿಸಿದ್ದ ರೋಡ್ ಶೋದಲ್ಲಿ ಸೇರಿದ್ದ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನರನ್ನು ಉದ್ದೇಶಿಸಿ ಮಾತನಾಡಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸೌಮ್ಯಾ ರೆಡ್ಡಿ ಅವರು ನೂರಕ್ಕೆ ನೂರು ಗೆಲ್ಲುತ್ತಾರೆ. ವಿಧಾನಸಭೆ ಚುನಾವಣೆಯಲ್ಲಿ ಸೌಮ್ಯರೆಡ್ಡಿಗೆ ಅನ್ಯಾಯವಾಗಿದೆ.
ತೇಜಸ್ವಿ ಸೂರ್ಯ ಅವರನ್ನು ಸೋಲಿಸಿ ಸೌಮ್ಯರೆಡ್ಡಿಗೆ ನ್ಯಾಯ ಕೊಡುವ ಕೆಲಸವನ್ನು ಕ್ಷೇತ್ರದ ಜನರು ಮಾಡಬೇಕು. ಪದ್ಮನಾಭನಗರ ಮತ್ತು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ವ್ಯಕ್ತವಾದ ಭರ್ಜರಿ ಜನ ಬೆಂಬಲ ನೋಡಿದರೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ವಿರೋಧಿ ಅಲೆ ಜೋರಾಗಿದೆ ಎಂಬುದು ಕಾಣುತ್ತಿದೆ. ಸೌಮ್ಯರೆಡ್ಡಿ ಭಾರೀ ಅಂತರದಲ್ಲಿ ಗೆಲ್ಲುತ್ತಾರೆ. ಈ ಮಾತನ್ನು ನಾನು ಸುಮ್ಮನೆ ಹೇಳುತ್ತಿಲ್ಲ, ಇಂದಿನ ಜನಸಾಗರ ಇದಕ್ಕೆ ನಿದರ್ಶನವಾಗಿದೆ ಎಮದರು.












Click it and Unblock the Notifications