ಸಿದ್ದರಾಮಯ್ಯ ಬೆಂಗಳೂರು ನಗರ ಪ್ರದಕ್ಷಿಣೆ, ಮುಖ್ಯಾಂಶಗಳು
ಬೆಂಗಳೂರು, ಮೇ 15 : ಬೆಂಗಳೂರು ನಗರದ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಬೆಂಗಳೂರು ನಗರ ಪ್ರದಕ್ಷಿಣೆ ನಡೆಸುತ್ತಿದ್ದಾರೆ. ನಗರದ ವಿವಿಧ ಸ್ಥಳಗಳಲ್ಲಿ ನಡೆಯುತ್ತಿರುವ ನಮ್ಮ ಮೆಟ್ರೋ, ರಸ್ತೆ, ಒಳಚರಂಡಿ ಕಾಮಗಾರಿಗಳನ್ನು ಅವರು ಪರಿಶೀಲಿಸುತ್ತಿದ್ದಾರೆ.
ಶುಕ್ರವಾರ ಬೆಳಗ್ಗೆ 9.30ರ ಸುಮಾರಿಗೆ ಗೃಹ ಕಚೇರಿ ಕೃಷ್ಣಾದಿಂದ ಸಿದ್ದರಾಮಯ್ಯ ಅವರು ಬಿಎಂಟಿಸಿಯ ವಜ್ರ ಬಸ್ ಮೂಲಕ ನಗರ ಪ್ರದಕ್ಷಿಣೆ ಆರಂಭಿಸಿದ್ದಾರೆ. ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ.ವಿಜಯ ಭಾಸ್ಕರ್ ಸೇರಿದಂತೆ ಹಲವು ಅಧಿಕಾರಿಗಳು ಮುಖ್ಯಮಂತ್ರಿಗಳ ಜೊತೆಗಿದ್ದಾರೆ.

ಮೊದಲು ಸಿಎಂ ಸಿದ್ದರಾಮಯ್ಯ ಅವರು ಇನ್‍ಫೆಂಟ್ರಿ, ಲ್ಯಾವೆಲ್ಲೆ ರಸ್ತೆಯಲ್ಲಿ ಸಂಚಾರ ನಡೆಸಿ ಟೆಂಡರ್ ಶ್ಯೂರ್ ಯೋಜನೆಯಡಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು. ಅಲ್ಲಿಂದ ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿನ ಕಾಮಗಾರಿಗಳನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. [ನಗರ ಪ್ರದಕ್ಷಿಣೆ ಮಾಡಿದ ಸಿಎಂ ಸಿದ್ದರಾಮಯ್ಯ]
* ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು ವೈದ್ಯರ ಹಾಜರಾತಿ ಕೊರತೆ ಕಂಡು ಅಸಮಾಧಾನ ವ್ಯಕ್ತಪಡಿಸಿದರು. 91 ಸಿಬ್ಬಂದಿಗಳ ಪೈಕಿ 51 ಜನರು ಮಾತ್ರ ಆಸ್ಪತ್ರೆಯಲ್ಲಿದ್ದರು. ಸಿಬ್ಬಂದಿಗಳಿಗೆ ಸರ್ಕಾರ ಸಂಬಳ ನೀಡುತ್ತಿದೆ, ಆಸ್ಪತ್ರೆಗೆ ಬರದೆ ಎಲ್ಲಿ ಹೋಗಿದ್ದಾರೆ ತಕ್ಷಣ ಅವರನ್ನು ಕರೆಸಿ ಎಂದು ಆಡಳಿತಾಧಿಕಾರಿಗೆ ಸಿಎಂ ಸೂಚನೆ ಕೊಟ್ಟರು.
* ಬೌರಿಂಗ್ ಆಸ್ಪತ್ರೆಯಲ್ಲಿ 10 ಡಯಾಲಿಸಿಸ್ ಯಂತ್ರಗಳು ಮಾತ್ರ ಇವೆ. ಸುಟ್ಟಗಾಯಕ್ಕೆ ಚಿಕಿತ್ಸೆ ನೀಡಲು ಸರಿಯಾದ ವ್ಯವಸ್ಥೆಗಳಿಲ್ಲ. ಅಗತ್ಯ ಅನುದಾನ ಬಿಡುಗಡೆ ಮಾಡಿ, ವ್ಯವಸ್ಥೆಗಳನ್ನು ಒದಗಿಸಲು ಸಹಕಾರ ನೀಡಬೇಕು ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
* ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಾಲಯ ಬಳಿಯ ರಾಜಾಕಾಲುವೆ ಕಾಮಗಾರಿಯನ್ನು ಸಿದ್ದರಾಮಯ್ಯ ವೀಕ್ಷಿಸಿದರು. ಕೆಲವು ಕಾರ್ಯಕರ್ತರು ಈ ವೇಳೆ ದೇಗುಲಕ್ಕೆ ತೆರಳಿದರೂ ಸಿಎಂವೊಳಗೆ ಹೋಗಲಿಲ್ಲ. ನಂತರ ನಾಯಂಡಹಳ್ಳಿಯಲ್ಲಿ ನಡೆಯುತ್ತಿರುವ ನಮ್ಮ ಮೆಟ್ರೋ ಕಾಮಗಾರಿಗಳನ್ನು ಮುಖ್ಯಮಂತ್ರಿಗಳು ವೀಕ್ಷಿಸಿದರು.
* ನಾಯಂಡನಹಳ್ಳಿಯಲ್ಲಿ ಕಾಮಗಾರಿ ವೀಕ್ಷಣೆ ಮಾಡುವ ವೇಳೆ ಬಿಡಿಎ ಆಯುಕ್ತ ಶ್ಯಾಂ ಭಟ್ ಸ್ಥಳದಲ್ಲಿರಲಿಲ್ಲ, ತಕ್ಷಣ ಅವರಿಗೆ ಫೋನ್ ಮಾಡಿದ ಸಿದ್ದರಾಮಯ್ಯ ಅವರು 'ರೀ ಶ್ಯಾಂಭಟ್ರೇ... ನಾನು ಇನ್ಸ್ ಪೆಕ್ಷನ್‌ಗೆ ಬಂದಿದ್ದೇನೆ. ನೀವು ಮನೆಯಲ್ಲಿ ಕುಳಿತುಕೊಂಡು ಏನು ಮಾಡುತ್ತಿದ್ದೀರಿ?' ಎಂದು ಪ್ರಶ್ನಿಸಿದರು.
* ಚುನಾವಣೆ ಗಿಮಿಕ್ : 'ಸಿದ್ದರಾಮಯ್ಯ ಅವರ ಬೆಂಗಳೂರು ನಗರ ಪ್ರದಕ್ಷಿಣೆ ಬಿಬಿಎಂಪಿ ಚುನಾವಣೆ ಗಿಮಿಕ್' ಎಂದು ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಮತ್ತು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, 'ಸುಪ್ರೀಂಕೋರ್ಟ್ ಚುನಾವಣೆ ನಡೆಸಿ ಎಂದ ಮೇಲೆ ಸರ್ಕಾರ ಎಚ್ಚೆತ್ತುಕೊಂಡಿದೆ. ಈಗ ಚುನಾವಣೆ ಎದುರಾಗಿರುವುದರಿಂದ ಬೆಂಗಳೂರು ನಗರ ಪ್ರದಕ್ಷಿಣೆ ಮಾಡುತ್ತಿದ್ದಾರೆ' ಎಂದು ಟೀಕಿಸಿದರು.












Click it and Unblock the Notifications