8 ದಿನ ಸದನದಲ್ಲಿ ಏನಾಯ್ತು? ರಾಜ್ಯದ ಜನರ ಪ್ರಶ್ನೆಗೆ ಉತ್ತರಿಸಿ: ಆರ್. ಅಶೋಕ್ ವಿರುದ್ಧ ಶಿವರಾಜ್ ತಂಗಡಗಿ ಕಿಡಿ
ಬೆಂಗಳೂರು: ಮುಂಗಾರು ವಿಧಾನಮಂಡಲ ಅಧಿವೇಶನ ಸಮಯದಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ತಮ್ಮ ಭ್ರಷ್ಟರ ಪಟಾಲಂ ಜತೆ ನಡೆಸಿದ ಹಾರಾಟಕ್ಕೆ ಇಡೀ ಕಲಾಪವೇ ಬಲಿಯಾಗಿದೆ. ಕಳೆದ ಎಂಟು ದಿನಗಳಿಂದ ಬರ, ಉತ್ತರ ಕರ್ನಾಟಕ ಸಮಸ್ಯೆ, ನೀರಾವರಿ, ರೈತರ ಸಮಸ್ಯೆ, ಬೆಲೆ ಏರಿಕೆಗಳ ಬಗ್ಗೆ ಒಂದು ಮಾತೂ ಚರ್ಚಿಸದೆ ಸ್ವಪಕ್ಷೀಯರಿಂದಲೇ ಅಶೋಕ್ ಟೀಕೆಗೆ ಗುರಿಯಾಗಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ಸದನದಲ್ಲಿ ಚರ್ಚಿಸಲು ಬರಗಾಲ, ಕೆಪಿಎಸ್ ಸಿ ಅಕ್ರಮ, ಯೋಜನೆಗಳೆಂದು ಸಾಕಷ್ಟು ವಿಷಯಗಳಿವೆ, ಅದಕ್ಕೆ ಅವಕಾಶ ಕೊಡದೇ ಕಲಾಪ ಹಾಳು ಮಾಡಲಾಗುತ್ತಿದೆ. ಬಿಜೆಪಿ ಚರ್ಚೆಗೆ ಬರುತ್ತಿಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ ಬೆನ್ನಲ್ಲೆ ಸಚಿವರು ಎಕ್ಸ್ ಪೋಸ್ಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಎಂಟನೇ ದಿನವಾದ ಸೋಮವಾರ ಅಹೋರಾತ್ರಿ ಧರಣಿ ಹೆಸರಿನಲ್ಲಿ ಇಡೀ ಕಲಾಪವನ್ನೇ ಅನಿರ್ದಿಷ್ಟಾವಧಿಗೆ ಮುಂದೂಡುವಂತೆ ಅಶೋಕ್ ಮತ್ತು ತಂಡ ಮಾಡಿದರು. ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸದನದಲ್ಲೇ ಬಿಜೆಪಿಗೆ ಮಂಗಳಾರತಿ ಮಾಡಿದ್ದಾರೆ ಎಂದು ಹೇಳಿದರು.

ಸ್ವತಃ ಡಿನೋಟಿಫಿಕೇಷನ್ ಮಾಡಿಸಿ ಬಳಿಕ ಭೂಮಿ ವಾಪಸು ನೀಡಿದ, ಬಗರ್ ಹುಕುಂ ಹಗರಣದ ಪಿತಾಮಹ ಆರ್. ಅಶೋಕ್ ಅವರು, ಎಂಟೂ ದಿನ ಒಲ್ಲದ ಮನಸ್ಸಿನಿಂದಲೇ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿದಂತಿತ್ತು ಎಂದು ಅವರು ಕಾಲೆಳೆದರು.
ಡಿನೋಟಿಫಿಕೇಷನ್ ಹರಿಕಾರರಿಂದಲೇ ಸಾಥ್
ಇತ್ತೀಚೆಗಷ್ಟೇ ಗುತ್ತಿಗೆದಾರರಿಂದ 5 ಲಕ್ಷ ರು. ಲಂಚ ಪಡೆದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಶಿರಹಟ್ಟಿ ಬಿಜೆಪಿ ಶಾಸಕನ ಜೊತೆಗೂಡಿ ಆರ್. ಅಶೋಕ್ ಅವರು ಮಾಡಿದ ಹಾರಾಟ, ಹೋರಾಟ, ಚೀರಾಟಕ್ಕೆ ಬಿಜೆಪಿ ಸದಸ್ಯರೇ ನಸುನಗುತ್ತಿದ್ದರು. 'ಪರಶುರಾಮ ಥೀಮ್ ಪಾರ್ಕ್' ಕಂಚು ಖ್ಯಾತಿಯ ಸುನಿಲ್ ಕುಮಾರ್ ಸೇರಿದಂತೆ ಚೆಕ್‌ನಲ್ಲಿ ಲಂಚ ಪಡೆದ ಇತಿಹಾಸದವರು, ಡಿನೋಟಿಫಿಕೇಷನ್ ಹರಿಕಾರರು, ಹಗರಣಗಳ ಸಾಮ್ರಾಟರೇ ಅಶೋಕ್‌ಗೆ ಸಾಥ್ ನೀಡಿದ್ದರು. ವಿಧಾನಪರಿಷತ್‌ನಲ್ಲಿ ಜಾಮೀನು ರಹಿತ ಬಂಧನ ವಾರಂಟ್ ಪಡೆದಿರುವ ರವಿ ಕುಮಾರ್, ಚಡ್ಡಿ ಹೊತ್ತು ಹುದ್ದೆ ಗಿಟ್ಟಿಸಿದ ಛಲವಾದಿ ನಾರಾಯಣಸ್ವಾಮಿ ಅವರದ್ದು ಇದೇ ಕತೆ.
ಜನ ಕೇಳುತ್ತಿರುವ ಪ್ರಶ್ನೆಗಳೇನು ಗೊತ್ತಾ?
ಯಾವ ಪುರುಷಾರ್ಥಕಕ್ಕೆ ಬಿಜೆಪಿ, ಜೆಡಿಎಸ್ ಇಡೀ ಕಲಾಪವನ್ನು ಹಾಳುವೆಡವಿತು?. 100 ವರ್ಷದಲ್ಲೇ ರಾಜ್ಯ ಎದುರಿಸಿರುತ್ತಿರುವ ಅತ್ಯಂತ ಭೀಕರ ಬರದ ಬಗ್ಗೆ ಯಾಕೆ ಚರ್ಚಿಸಲಿಲ್ಲ?, ಎಸ್‌ಐಆರ್‌ನಿಂದ ಮತ ಕಳೆದುಕೊಂಡಿರುವ ಮತದಾರರ ಹಕ್ಕು ಉಳಿವಿಗಾಗಿ ಯಾಕೆ ತುಟಿ ಬಿಚ್ಚಲಿಲ್ಲ ಕೇಂದ್ರ ಸರ್ಕಾರದಿಂದ ಬರಬೇಕಾದ ಜಿಎಸ್‌ಟಿ ಪಾಲು, ಅನುದಾನ, ನೀರಾವರಿ ಯೋಜನೆಗಳ ಅನುಮತಿ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಎಂದು ಜನರ ಪ್ರಶ್ನಿಸುತ್ತಿದ್ದಾರೆ.
ಅಲ್ಲದೇ ರಾಜ್ಯವೇ ಬರಕ್ಕೆ ತುತ್ತಾಗಿರುವ ಹೊತ್ತಿನಲ್ಲಿ ಬಿಜೆಪಿಯವರು ವಿಪಕ್ಷ ಸ್ಥಾಣದಲ್ಲಿದ್ದುಕೊಂಡು ರೈತರಿಗೆ ಪರಿಹಾರಕ್ಕೆ ಯಾಕೆ ಒತ್ತಾಯಿಸಲಿಲ್ಲ?. ಜ್ವಲಂತ ಸಮಸ್ಯೆ ಬಿಟ್ಟು ಕಾಲಕ್ಷೇಪ ಮಾಡಿ, ಜನರ ಹಣ ಪೋಲು ಮಾಡಿದ್ದು ಯಾಕೆ? ಈ ಕುರಿತು ಬಿಜೆಪಿ ಮತ್ತು ದೊಸ್ತಿ ಪಕ್ಷ ಜೆಡಿಎಸ್ ಇಬ್ಬರು ನಾಯಕರು ಉತ್ತರಿಸಬೇಕಿದೆ ಎಂದು ತಂಗಡಗಿ ತಿವಿದಿದ್ದಾರೆ.


Click it and Unblock the Notifications
