ಇನ್ನೂ ಪತ್ತೆಯಾಗಿಲ್ಲ ರಾಜಾಕಾಲುವೆಯಲ್ಲಿ ಕೊಚ್ಚಿಹೋದ ಶಾಂತಕುಮಾರ್
ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದ ತಿಗಳರಪಾಳ್ಯ ನಿವಾಸಿ ಶಾಂತಕುಮಾರ್, ಶನಿವಾರ ಸಂಜೆ ಚರಂಡಿಯೊಂದರ ದುರಸ್ಥಿ ಕಾರ್ಯದ ಮೇಲ್ವಿಚಾರಣೆ ಮಾಡುತ್ತಿದ್ದಾಗ ಅಚಾನಕ್ಕಾಗಿ ಚರಂಡಿಯಲ್ಲಿ ಬಿದ್ದಿದ್ದರು. ಆದರೆ ಅವರ ಪತ್ತೆ ಮಾತ್ರ ಇನ್ನೂ ಸಾಧ್ಯವಾಗಿಲ್ಲ
ಬೆಂಗಳೂರು, ಮೇ 22: ರಾಜಧಾನಿ ಬೆಂಗಳೂರಿನ ತಿಗಳರಪಾಳ್ಯ ರಾಜಾಕಾಲುವೆಯಲ್ಲಿ ಬಿದ್ದು, ಭಾರೀ ಮಳೆಗೆ ಕೊಚ್ಚಿಕೊಂಡು ಹೋದ ಬಿಬಿಎಂಪಿ ಕಾರ್ಮಿಕ ಶಾಂತಕುಮಾರ್ (24) ಇನ್ನೂ ಪತ್ತೆಯಾಗಿಲ್ಲ. ಚರಂಡಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದ ತಿಗಳರಪಾಳ್ಯ ನಿವಾಸಿ ಶಾಂತಕುಮಾರ್, ಶನಿವಾರ (ಮೇ 20) ಸಂಜೆ ಚರಂಡಿಯೊಂದರ ದುರಸ್ಥಿ ಕಾರ್ಯದ ಮೇಲ್ವಿಚಾರಣೆ ಮಾಡುತ್ತಿದ್ದಾಗ ಅಚಾನಕ್ಕಾಗಿ ಚರಂಡಿಯಲ್ಲಿ ಬಿದ್ದಿದ್ದರು.
ತಕ್ಷಣವೇ ಅವರನ್ನು ಮೇಲೆತ್ತುವುದಕ್ಕೆ ಅವರೊಂದಿಗಿದ್ದ ಮೂವರು ಕಾರ್ಮಿಕರು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ನಂತರ ಅಗ್ನಿಶಾಮಕ ದಳ, ರಾಜ್ಯ ವಿಪತ್ತು ನಿರ್ವಹಣಾ ಪಡೆಯ ನೆರವಿನಿಂದ ಅವರ ರಕ್ಷಣಾ ಕಾರ್ಯ ನಡೆಯಿತಾದರೂ ಅವರ ಪತ್ತೆ ಮಾತ್ರ ಇದುವರೆಗೂ ಸಾಧ್ಯವಾಗಿಲ್ಲ. ಕುರುಬರಹಳ್ಳಿ ಪೈಪ್ ಲೈನ್ ಬ್ರಿಡ್ಜ್, ಸುಮ್ಮನಹಳ್ಳಿ ಬ್ರಿಡ್ಜ್ ಬಳಿಯೂ ಶೋಧ ಕಾರ್ಯ ನಡೆದಿದ್ದು, ಅರ್ಥ್ ಮೂವಿಂಗ್ ಮಶಿನ್ ಗಳ ಮೂಲಕ ಚರಂಡಿಯೊಳಗೆ ಸುಮಾರು 2-3 ಕಿ.ಮೀ.ವರೆಗೂ ಶೋಧ ಕಾರ್ಯ ನಡೆದಿದೆ.[ಧಾರಾಕಾರ ಮಳೆಗೆ ರಾಜಕಾಲುವೆಯಲ್ಲಿ ಕೊಚ್ಚಿಹೋದ ಬಿಬಿಎಂಪಿ ಕಾರ್ಮಿಕ]

ಶನಿವಾರ ರಾತ್ರಿ ರಾಜಧಾನಿಯಲ್ಲಿ ಭಾರೀ ಮಳೆಯಾಗಿರುವುದರಿಂದ ಶಾಂತಕುಮಾರ್ ಪತ್ತೆ ಜಟಿಲ ಎನ್ನಿಸಿಸದೆ. ನಾವು ಅವರು ಬಿದ್ದ ರಾಜಾ ಕಾಲುವೆ ಸಾಗುವ ದಾರಿಯಲ್ಲೆಲ್ಲ ಹುಡುಕಿದ್ದೇವೆ. ಆದರೂ ಅವರಾಗಲೀ, ಅವರ ದೇಹವಾಗಲೀ ಪತ್ತೆಯಾಗಿಲ್ಲ. ಆದ್ದರಿಂದ ಮತ್ತೆ ಸೋಮವಾರವೂ ಶೋಧ ಕಾರ್ಯ ಮುಂದುವರಿಸುತ್ತೇವೆ ಎಂದು ಬಿಬಿಎಂಪಿ ಕಮಿಷನರ್ ಎನ್. ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಶನಿವಾರ ಸಂಜೆ ಬೆಂಗಳೂರಿನಲ್ಲಿ 40.8 ಮಿ.ಮೀ. ಮಳೆಯಾಗಿದ್ದು, ಗಂಟೆಗೆ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸಿ ಹಲವು ಅವಘಡಗಳಿಗೆ ಕಾರಣವಾಗಿದೆ. ನಗರದಲ್ಲಿ ಶನಿವಾರ 100ಕ್ಕೂ ಹೆಚ್ಚು ಬೃಹತ್ ಮರಗಳು ಧರೆಗುರುಳಿವೆ.
{promotion-urls}












Click it and Unblock the Notifications