ಶಕ್ತಿ ಯೋಜನೆ ಎಫೆಕ್ಟ್: ಮುಜರಾಯಿ ದೇವಸ್ಥಾನಗಳ ಆದಾಯ ಡಬಲ್, ಯಾವ ದೇಗುಲಕ್ಕೆ ಎಷ್ಟು ಆದಾಯ?
ಬೆಂಗಳೂರು, ಫೆಬ್ರವರಿ 08: ಕರ್ನಾಟಕ ಕಾಂಗ್ರೆಸ್ ಸರ್ಕಾರದ 'ಶಕ್ತಿ' ಯೋಜನೆಯಿಂದಾಗಿ ರಾಜ್ಯದಲ್ಲಿ ಧಾರ್ಮಿಕ ಪ್ರವಾಸೋದ್ಯಮದಲ್ಲಿ ಭಾರಿ ಚೇತರಿಕೆ ಕಂಡಿದೆ. ಉಚಿತ ಬಸ್ ಪ್ರಯಾಣದಿಂದಾಗಿ ದೇಗುಲಗಳಿಗೆ ಮಹಿಳಾ ಭಕ್ತ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಹೀಗಾಗಿ ರಾಜ್ಯದ ಮುಜರಾಯಿ ಇಲಾಖೆ ದೇವಾಲಯಗಳ ಹುಂಡಿ ಕೂಡ ಭರ್ತಿಯಾಗುತ್ತಿದೆ.
ಮೊದ ಮೊದಲು ಶಕ್ತಿ ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಜನರೇ ಇಂದು ಮುಜರಾಯಿ ದೇಗುಲಗಳಿಗೆ ಹರಿದು ಬರುತ್ತಿರುವ ಹಣವನ್ನು ನೋಡಿ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣ ಇರುವ ಕಾರಣ ಮನೆ ಮಂದಿಯೇಲ್ಲಾ ದೇಗುಲಕ್ಕೆ ತೆರಳುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡರೇ ಈ ಬಾರಿ ದೇವಾಲಯಗಳ ಆದಾಯ ಒಂದೂವರೆ ಪಟ್ಟು ಹೆಚ್ಚಾಗಿದೆ.

ರಾಜ್ಯದ ಪ್ರತಿಷ್ಠಿತ ದೇವಾಲಯಗಳಲ್ಲಿ ಭಕ್ತರ ದಂಡು ಹರಿದುಬರುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ, ಚಾಮುಂಡೇಶ್ವರಿ ದೇವಾಲಯ, ಬನಶಂಕರಿ, ಕೊಲ್ಲೂರು ಮೂಕಾಂಬಿಕೆ, ಎಡೆಯೂರು ಸಿದ್ದಲಿಂಗೇಶ್ವರ, ಕಟೀಲು ದುರ್ಗಾಪರಮೇಶ್ವರಿ, ಸವದತ್ತಿ ರೇಣುಕಾಯಲ್ಲಮ್ಮ ಸೇರಿದಂತೆ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಭಕ್ತ ಸಂಖ್ಯೆ ಹೆಚ್ಚಿದ್ದು, ಆದಾಯವು ದುಪ್ಪಟ್ಟಾಗಿದೆ. ಹಾಗಾದರೇ, ಯಾವ ಯಾವ ದೇವಸ್ಥಾನದಲ್ಲಿ ಎಷ್ಟೇಷ್ಟು ಆದಾಯ ಸಂಗ್ರಹವಾಗಿದೆ ಎಂಬ ಮಾಹಿತಿ ಇಲ್ಲಿದೆ.
ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ
ಮುಜುರಾಯಿ ಇಲಾಖೆಗೆ ಒಳಪಟ್ಟಿರುವ ಅತ್ಯಂತ ಶ್ರೀಮಂತ ದೇವಸ್ಥಾನಗಳಲ್ಲಿ ಕುಕ್ಕೆ ಸುಬ್ರಮ್ಮಣ್ಯ ಸ್ವಾಮಿ ದೇವಸ್ಥಾನ ಕೂಡ ಒಂದು. 2021-22 ರಲ್ಲಿ 74.17 ಕೋಟಿ ಹಣ ಬಂದಿತ್ತು. ಈ ವರ್ಷ ಬರೋಬ್ಬರಿ 123 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ.
ಚಾಮುಂಡೇಶ್ವರಿ ದೇವಾಲಯ
ಇನ್ನು ಪ್ರಖ್ಯಾತ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಕೆಳೆದ ವರ್ಷ 21.92 ಕೋಟಿ ರೂಪಾಯಿ ಆದಾಯ ಬಂದಿತ್ತು. ಈ ವರ್ಷ ಅದು 52.40 ಕೋಟಿ ರೂಪಾಯಿ ಆದಾಯ ಬಂದಿದ್ದು, ಡಬಲ್ ಆಗಿದೆ.
ಬನಶಂಕರಿ ದೇವಸ್ಥಾನ
ಬೆಂಗಳೂರಿನ ಪ್ರಖ್ಯಾತ ಬನಶಂಕರಿ ದೇವಸ್ಥಾನದಲ್ಲಿ ಕಳೆದ ವರ್ಷ 5.95 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿತ್ತು. ಈ ವರ್ಷ ಅದು 10.58 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ.
ಕೊಲ್ಲೂರು ಮೂಕಾಂಬಿಕಾ
ದಕ್ಷಿಣ ಕನ್ನಡ ಜಿಲ್ಲೆಯ ಕೊಲ್ಲೂರು ಮೂಕಂಬಿಕಾ ದೇವಸ್ಥಾನಕ್ಕೆ ಕಳೆದ ವರ್ಷ 31.36 ಕೋಟಿ ರೂಪಾಯಿ ಆದಾಯ ಬಂದಿತ್ತು. ಈ ವರ್ಷ 59.47 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ.

ಘಾಟಿ ಸುಬ್ರಹ್ಮಣ್ಯವು
ಬೆಂಗಳೂರಿನ ಹೊರವಲಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಬಳಿ ಇರುವ ಘಾಟಿ ಸುಬ್ರಹ್ಮಣ್ಯವು ಪುರಾತನ ಹಿಂದೂ ದೇವಾಲಯ. ಈ ದೇವಸ್ಥಾನದಲ್ಲಿ ಕಳೆದ ವರ್ಷ 7.89 ಕೋಟಿ ಆದಾಯ ಸಂಗ್ರಹವಾಗಿತ್ತು. ಈ ವರ್ಷ 12.25 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ.
ಸವದತ್ತಿ ರೇಣುಕಾ ಎಲ್ಲಮ್ಮ
ಉತ್ತರ ಕರ್ನಾಟಕದ ಪ್ರಸಿದ್ಧ ಸವದತ್ತಿ ಎಲ್ಲಮ್ಮ ಬೆಳಗಾವಿ ಜಿಲ್ಲೆಯಲ್ಲಿದೆ. ಈ ದೇವಸ್ಥಾನದಲ್ಲಿ ಕಳೆದ ವರ್ಷ 10.99 ಕೋಟಿ ಸಂಗ್ರಹವಾಗಿತ್ತು. ಈ ವರ್ಷ ಡಬಲ್ ಆದಾಯ ಹರಿದುಬಂದಿದ್ದು, 22.52 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಕಟೀಲು ದುರ್ಗಾಪರಮೇಶ್ವರಿ
ಮುಜರಾಯಿ ಇಲಾಖೆಯ ಪ್ರಮುಖ ದೇವಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ದುರ್ಗಾಪರಮೇಶ್ವರಿ. ಕಳೆದ ವರ್ಷ 19.57 ಕೋಟಿ ರೂಪಾಯಿ ಆದಾಯ ಗಳಿಸಿದ್ದ ಈ ದೇವಸ್ಥಾನಕ್ಕೆ ಈ ವರ್ಷ 32.10 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ.
ಎಡೆಯೂರು ಸಿದ್ದಲಿಂಗೇಶ್ವರ
ಕಲ್ಪತರು ನಾಡು ತುಮಕೂರು ಜಿಲ್ಲೆಯ ಕುಣಿಗಲ್ ತಾಲುಕಿನಲ್ಲಿರುವ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಳೆದ ವರ್ಷ 31.74 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿತ್ತು. ಈ ವರ್ಷ 36.48 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ.












Click it and Unblock the Notifications