ಬೆಳಗಾವಿಯಲ್ಲಿ ಆರಂಭವಾಗಲಿದೆಯೇ ಐಫೋನ್ ಬಿಡಿಭಾಗಗಳ ತಯಾರಿಕಾ ಘಟಕ?: 250 ಕೋಟಿ ರೂ.ಹೂಡಿಕೆಗೆ ಪ್ರಸ್ತಾವ
ಬೆಳಗಾವಿ, ಜುಲೈ. 03: ಆಪಲ್ ಇನ್‌ಕಾರ್ಪೊರೇಟೆಡ್‌ನ ಐಫೋನ್‌ಗಳ ಬಿಡಿಭಾಗಗಳನ್ನು ತಯಾರಿಸಲು ಕಾರ್ಖಾನೆಯನ್ನು ಸ್ಥಾಪಿಸಲು ಬೆಳಗಾವಿಯಲ್ಲಿ ಸುಮಾರು 30 ಎಕರೆ ಭೂಮಿಯನ್ನು ನೀಡುವಂತೆ ಮಾಡುವಂತೆ ಬೆಂಗಳೂರು ಮೂಲದ ಎಲೆಕ್ಟ್ರಾನಿಕ್ಸ್ ಘಟಕ ತಯಾರಿಕಾ ಕಂಪನಿಯಾದ ಎಸ್‌ಎಫ್‌ಎಸ್ ಇಂಡಸ್ಟ್ರೀಸ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ ಪಾಟೀಲ್ ಅವರ ಕಚೇರಿಯಿಂದ ಪತ್ರಿಕಾ ಪ್ರಕಟಣೆ ಬಿಡುಗಡೆಯಾಗಿದ್ದು, ಎಸ್‌ಎಫ್‌ಎಸ್ ಮೀಸಲಿಟ್ಟ ಘಟಕದಲ್ಲಿ 250 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಇದು ಎಸ್‌ಟಿಇಎಂ (STEM) ಪದವೀಧರರಿಗೆ 500 ನೇರ ಉದ್ಯೋಗಗಳನ್ನು ಮತ್ತು ಇನ್ನೂ ಹಲವಾರು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.

"ಆಪಲ್ ಐಫೋನ್ ಉತ್ಪಾದಿಸುವ ಫಾಕ್ಸ್ಕಾನ್ ಕಂಪನಿಗೆ ಬಿಡಿಭಾಗಗಳನ್ನು ತಯಾರಿಸಿಕೊಡುವ ಎಸ್‍ಎಫ್‍ಎಸ್ ಕಂಪನಿಯು ಬೆಳಗಾವಿಯಲ್ಲಿ 250 ಕೋಟಿ ರೂ. ಬಂಡವಾಳ ಹೂಡಲು ಆಸಕ್ತಿ ತೋರಿದೆ. ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಫಾರಸ್ ಶಾ ನೇತೃತ್ವದ ನಿಯೋಗ ಬೆಳಗಾವಿಯಲ್ಲಿ ಘಟಕ ಸ್ಥಾಪಿಸಲು ಭೂಮಿ ಕೋರಿದ್ದು ಈ ಬಗ್ಗೆ ಪರಿಶೀಲಿಸಿ, ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದೆ" ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ ಪಾಟೀಲ್ ಟ್ವೀಟ್ ಮಾಡಿದ್ದಾರೆ.
ಎಸ್‍ಎಫ್‍ಎಸ್ ಬೆಳಗಾವಿಯಲ್ಲಿ ಏರೋಸ್ಪೇಸ್ ಬಿಡಿಭಾಗಗಳನ್ನು ತಯಾರಿಸುವ ಘಟಕದಲ್ಲಿ ಹೂಡಿಕೆ ಮಾಡಿದೆ. ಇದು ಆಪಲ್ ಮತ್ತು ಇತರ ಕಂಪನಿಗಳಿಗೆ ಮೊಬೈಲ್ ಬಿಡಿಭಾಗಗಳ ತಯಾರಿಕೆಯನ್ನು ಮಾಡುತ್ತದೆ. ಕಂಪನಿಯ ಸಿಎಫ್‌ಒ ಫರಾಸ್ ಶಾ ನೇತೃತ್ವದ ಕಂಪನಿ ಅಧಿಕಾರಿಗಳ ತಂಡವು ಇತ್ತೀಚೆಗೆ ಬೆಂಗಳೂರಿನಲ್ಲಿ ಸಚಿವ ಎಂಬಿ ಪಾಟೀಲ್ ಅವರನ್ನು ಭೇಟಿ ಮಾಡಿ ಯೋಜನೆಯ ಬಗ್ಗೆ ಮಾಹಿತಿ ನೀಡಿದೆ. ಎಸ್ ಎಫ್ ಎಸ್ ನಿರ್ದೇಶಕ ಪ್ರಶಾಂತ್ ಕೋರೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯುಕ್ತ ಗುಂಜನ್ ಕೃಷ್ಣ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.












Click it and Unblock the Notifications