ಬೆಂಗಳೂರು ಐಷಾರಾಮಿ ಕಾರು ಅಪಘಾತ; ಶಾಸಕರ ಪುತ್ರ ಸೇರಿ 6 ಸಾವು
ಬೆಂಗಳೂರು, ಆಗಸ್ಟ್ 31; ಬೆಂಗಳೂರು ನಗರದಲ್ಲಿ ತಡರಾತ್ರಿ ಐಷಾರಾಮಿ ಕಾರು ಅಪಘಾತಕ್ಕೀಡಾಗಿದೆ. ಒಟ್ಟು 7 ಜನರು ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪೊಲೀಸರು ಘಟನೆ ಬಗ್ಗೆ ತನಿಖೆಯನ್ನು ಕೈಗೊಂಡಿದ್ದಾರೆ. ಮೃತಪಟ್ಟವರಲ್ಲಿ ಹೊಸರು ಕ್ಷೇತ್ರದ ಶಾಸಕರ ಮಗ ಮತ್ತು ಸೊಸೆ ಸೇರಿದ್ದಾರೆ.
Recommended Video
ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಸಮೀಪ ಮಂಗಳವಾರ ಮುಂಜಾನೆ 1.45ರ ಸುಮಾರಿಗೆ ಐಷಾರಾಮಿ ಕಾರು ಅಪಘಾತ ನಡೆದಿದೆ. ಮೂವರು ಮಹಿಳೆಯರು, ನಾಲ್ವರು ಪುರುಷರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಹೊಸೂರು ಮೂಲದ ಕರುಣಾಸಾಗರ್ (28), ಕರುಣಾ ಸಾಗರ್ ಪತ್ನಿ ಬಿಂದು (28), ಕೇರಳ ಮೂಲದ ಅಕ್ಷಯ್ ಗೋಯಲ್, ಇಶಿತಾ (21), ಡಾ.ಧನುಶಾ (21) ಮತ್ತು ಹುಬ್ಬಳ್ಳಿಯ ರೋಹಿತ್ (23) ಮತ್ತು ಹರ್ಯಾಣದ ಉತ್ಸವ್ ಎಂದು ಗುರುತಿಸಲಾಗಿದೆ.
ರಸ್ತೆ ಅಪಘಾತದ ಬಗ್ಗೆ ಬೆಂಗಳೂರು ನಗರ ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಪ್ರತಿಕ್ರಿಯೆ ನೀಡಿದರು, "ಆಡಿ ಕಾರು ನೇರವಾಗಿ ಫುಟ್‌ಪಾತ್ ಮೇಲೆ ಹತ್ತಿ ರಭಸವಾಗಿ ಕಂಭಕ್ಕೆ ಡಿಕ್ಕಿಯಾಗಿದೆ. ಯಾರೂ ಸಹ ಸೀಟ್ ಬೆಲ್ಟ್ ಹಾಕಿರಲಿಲ್ಲ" ಎಂದು ಹೇಳಿದ್ದಾರೆ.

6 ಜನರು ಸ್ಥಳದಲ್ಲಿಯೇ ಸಾವು
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದ 6 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಒಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಪಘಾತ ನಡೆದಾಗ ಭಾರೀ ಶಬ್ದವಾಗಿದ್ದು ತಡರಾತ್ರಿಯಲ್ಲಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ರಸ್ತೆ ಅಪಘಾತದಲ್ಲಿ ಮೃತಪಟ್ಟ ಕರುಣಾಸಾಗರ್ (28) ತಮಿಳುನಾಡಿನ ಹೊಸೂರು ಕ್ಷೇತ್ರದ ಡಿಎಂಕೆ ಶಾಸಕ ವೈ. ಪ್ರಕಾಶ್ ಪುತ್ರ ಎಂದು ತಿಳಿದುಬಂದಿದೆ. ಸೋಮವಾರ ಸಂಜೆ 5.30ರ ಸುಮಾರಿಗೆ ಬೆಂಗಳೂರಿಗೆ ಕರುಣಾಸಾಗರ್ ಬಂದಿದ್ದರು. ರಾತ್ರಿ ಮನೆಯವರು ಕರೆ ಮಾಡಿ ಊಟಕ್ಕೆ ಬರುತ್ತೀಯಾ? ಎಂದು ವಿಚಾರಿಸಿದ್ದರು. ಆಗ ಬರುವುದಿಲ್ಲ ಎಂದು ಹೇಳಿದ್ದರು.

ಮೃತಪಟ್ಟವರೆಲ್ಲರೂ ಸ್ನೇಹಿತರು
ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಶವಗಳಿದ್ದು, ಮರಣೋತ್ತರ ಪರೀಕ್ಷೆ ನಡೆಯಬೇಕಿದೆ. ಕಾರಿನಲ್ಲಿದ್ದವರು ಮದ್ಯ ಸೇವಿಸಿದ್ದರೆಯೇ? ಎಂಬುದು ಪರೀಕ್ಷೆ ಬಳಿಕ ತಿಳಿಯಲಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು, ಅಪಘಾತ ಸ್ಥಳದಿಂದ ಕಾರನ್ನು ಸ್ಥಳಾಂತರ ಮಾಡಲಾಗಿದೆ.
ಶವಗಳನ್ನು ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಇಡಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿದರು. ಹೊಸೂರು ಕ್ಷೇತ್ರದ ಡಿಎಂಕೆ ಶಾಸಕ ವೈ. ಪ್ರಕಾಶ್ ರಾಮಲಿಂಗಾ ರೆಡ್ಡಿಗೆ ಆಪ್ತರು ಎಂದು ತಿಳಿದುಬಂದಿದೆ. ಕರುಣಾಸಾಗರ್ ಶಾಸಕರ ಏಕೈಕ ಪುತ್ರ.

ಸಂಪೂರ್ಣ ಜಖಂಗೊಂಡ ಕಾರು
ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತದ ಭೀಕರತೆಗೆ ಕಾರಿನ ಎಡಭಾಗದ ಎರಡು ಟೈರ್‌ಗಳು ಸ್ಫೋಟಗೊಂಡು ರಸ್ತೆಗೆ ಹಾರಿ ಬಿದ್ದಿವೆ. ಕಾರಿನಲ್ಲಿದ್ದವರು ಸೀಟ್ ಬೆಲ್ಟ್ ಧರಿಸಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಕಾರು ಅಪಘಾತಗೊಂಡಾಗ ಏರ್ ಬ್ಯಾಗ್ ಸಹ ಓಪನ್ ಆಗಿಲ್ಲ.
ಆಡುಗೋಡಿ ಸಂಚಾರಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಅತಿಯಾದ ವೇಗವೇ ಘಟನೆಗೆ ಕಾರಣ ಎಂದು ಅಂದಾಜಿಸಲಾಗಿದೆ.

ಬೆಂಗಳೂರಿಗೆ ಬರುತ್ತರುವ ಶಾಸಕರು
ತಮಿಳುನಾಡು ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ಅಧಿವೇಶನದಲ್ಲಿ ಪಾಲ್ಗೊಳ್ಳಲು ಚೆನ್ನೈಗೆ ತೆರಳಿದ್ದ ಶಾಸಕ ವೈ. ಪ್ರಕಾಶ್ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಕರುಣಾಸಾಗರ್ ಪತ್ನಿ ಬಿಂದು ಸಹ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗುತ್ತದೆ. ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.
|
ಕಾರಿನ ಭೀಕರ ಅಪಘಾತ
ಕೋರಮಂಗಲದಲ್ಲಿ ನಡೆದಿರುವ ಐಷಾರಾಮಿ ಆಡಿ ಕಾರು ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತದ ಬಳಿಕ ಕಾರಿನ ಟೈರ್ ರಸ್ತೆಗೆ ಹಾರಿ ಬಂದು ಬಿದ್ದಿದೆ.












Click it and Unblock the Notifications