ಹಿರಿಯ ಪತ್ರಕರ್ತ ಸಚ್ಚಿದಾನಂದ ಮೂರ್ತಿ (66) ನಿಧನ: ಗಣ್ಯರ ಸಂತಾಪ
ಬೆಂಗಳೂರು, ಅಕ್ಟೋಬರ್ 13: ಮಾಧ್ಯಮ ವಲಯದಲ್ಲಿ ಸಚ್ಚಿ ಎಂದೇ ಖ್ಯಾತಿ ಪಡೆದಿದ್ದ, ಕಳೆದ ವರ್ಷವಷ್ಟೇ ನಿವೃತ್ತಿ ಹೊಂದಿದ್ದ ಹಿರಿಯ ಪತ್ರಕರ್ತ ಸಚ್ಚಿದಾನಂದ ಮೂರ್ತಿ (66)ಅವರ ನಿಧನಕ್ಕೆ ಸಿಎಂ, ಮಾಜಿ ಸಿಎಂ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ನಿವೃತ್ತಿ ಆಗುವವರೆಗೂ ಮಲಯಾಳ ಮನೋರಮಾ ಗ್ರೂಪ್‌ನಲ್ಲೇ ಕಾರ್ಯ ನಿರ್ವಹಿಸಿದ್ದರು. ರಾಷ್ಟ್ರೀಯ, ಅಂತಾರಾಷ್ಟ್ರೀಯ ರಾಜಕೀಯ ವಿಶ್ಲೇಷಣೆಯಲ್ಲಿ ಸಿದ್ಧಹಸ್ತರಾಗಿದ್ದ ಸಚ್ಚಿದಾನಂದ ಮೂರ್ತಿ ಅವರ ನಿಧನ ಸುದ್ದಿ ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹೇಶ ಜೋಶಿ ಸಂತಾಪ ಸೂಚಿಸಿದರು.

ಸಚ್ಚಿದಾನಂದಮೂರ್ತಿಯವರು ದೆಹಲಿಯ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದ ಕೆಲವೇ ಕೆಲವು ಹಿರಿಯ ಕನ್ನಡಿಗ ಪತ್ರಕರ್ತರಲ್ಲಿ ಒಬ್ಬರಾಗಿದ್ದರು. ರಾಜ್ಯ-ರಾಷ್ಟ್ರಗಳ ವಿದ್ಯಮಾನಗಳ ಜ್ಞಾನಕೋಶದಂತಿದ್ದ ಸಚ್ಚಿದಾನಂದ ಮೂರ್ತಿಯವರ ಸಾವು ಮಾಧ್ಯಮರಂಗಕ್ಕೆ ತುಂಬಲಾರದ ನಷ್ಟ ವಾಗಿದೆ ಎಂದರು.
ನ್ಯೂ ಡೆಲ್ಲಿ ಅಂಕಣದ ದಿಂದ ಮನೆ ಮಾತಾಗಿದ್ದ 'ಸಚ್ಚಿ'
ಮಲಯಾಳ ಮನೋರಮಾ ಪತ್ರಿಕೆಯಲ್ಲಿ ಸಂಪಾದಕರಾಗಿದ್ದರು. ನ್ಯೂ ಡೆಲ್ಲಿ ಅಂಕಣದ ಮೂಲಕ ಮನೆಮಾತಾಗಿದ್ದರು. ದೂರದರ್ಶನದ ಮಹಾ ನಿರ್ದೇಶಕರಾಗಿ ದೆಹಲ್ಲಿಯಲ್ಲಿದ್ದಾಗ ಸಚ್ಚಿಯವರ ಜೊತೆ ನಿಕಟ ಸಂಬಂಧ ಹೊಂದಿದ್ದೆ. ರಾಜ್ಯದ ಯಾವುದೇ ಸಮಸ್ಯಗಳು ಇದ್ದರೂ ಅದಕ್ಕೆ ಕಳಕಳಿ ವ್ಯಕ್ತ ಪಡಿಸುತ್ತಿದ್ದರು. ಕೇಂದ್ರದ ರಾಜಕಾರಣಿಗಳ ಜೊತೆಗೆ ಆಪ್ತ ಸಂಬದ್ಧ ಇಟ್ಟುಕೊಂಡ ಸಚ್ಚಿದಾನಂದ ಮೂರ್ತಿ ಅವರು ಕನ್ನಡ ನಾಡಿನ ಅಭಿವೃದ್ಧಿ ಕಾರ್ಯಕ್ಕೆ ಒತ್ತಾಯಿಸುತ್ತಲೇ ಇರುತ್ತಿದ್ದರು ಎಂದು ಸ್ಮರಿಸಿದರು.
ಕೋಲಾರ ಮೂಲದ ಸಚ್ಚಿದಾನಂದ ಮೂರ್ತಿಯವರು 1982ರಲ್ಲಿ 'ದಿ ವೀಕ್' ಸೇರಿದರು. ಮುಂದೆ ಅದೇ ಸಂಸ್ಥೆಯಲ್ಲಿ ಬಳಿಕ ಸ್ಥಾನಿಕ ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದ್ದರು. ನಾಲ್ಕು ದಶಕಗಳ ಕಾಲ ತಮ್ಮ ಸೇವೆಯನ್ನು ದೆಹಲಿಗೆ ಮೀಸಲಿಟ್ಟ ಸಚ್ಚಿ ಅವರು ಎಡಿಟರ್ಸ್ ಗಿಲ್ಡ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಸಚ್ಚಿದಾನಂದ ಮೂರ್ತಿ ಅವರು ಇತ್ತೀಚೆಗಷ್ಟೇ ಶ್ವಾಸಕೋಶ ಕಸಿ ಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ಕೆಲವು ದಿನಗಳಿಂದ ವೆಂಟಿಲೇಟರ್ನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಆದರೆ, ಇಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. 19ನೇ ವಯಸ್ಸಿನಲ್ಲಿ ಪತ್ರಕರ್ತರಾದ ಸಚ್ಚಿದಾನಂದ ಅವರು ಪತ್ರಿಕೋದ್ಯಮದಲ್ಲಿ 40 ವರ್ಷ ಸೇವೆ ಸಲ್ಲಿಸಿದ್ದಾರೆ. ಸುಮಾರು 35 ದೇಶಗಳನ್ನು ಸುತ್ತಿದ ಅತ್ಯುತ್ತಮ ಅನುಭವ ಅವರದು.
ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ರಾಜಕೀಯ ಮತ್ತು ಆಡಳಿತದ ಬಗ್ಗೆ ಪರಿಣಿತಿ ಹೊಂದಿದ್ದ ಅವರಿಗೆ ಪತ್ರಿಕೋದ್ಯಮದ ಅವರ ಸೇವೆಗಾಗಿ 'ದರ್ಲಭ್ ಸಿಂಗ್' ಸ್ಮಾರಕ ಪ್ರಶಸ್ತಿ ಮತ್ತು 'ಕರ್ನಾಟಕ ಮಾಧ್ಯಮ ಅಕಾಡೆಮಿಯ ವಿಶಿಷ್ಟ ಪ್ರಶಸ್ತಿ'ಗೆ ಭಾಜನರಾಗಿದ್ದರು ಎಂದು ಡಾ.ಮಹೇಶ ಜೋಶಿ ಹೇಳಿದರು.
ಕುಟುಂಬಸ್ಥರ ದುಃಖದಲ್ಲಿ ನಾನು ಭಾಗಿ: ಸಿದ್ದರಾಮಯ್ಯ
ಹಿರಿಯ ಪತ್ರಕರ್ತರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. 'ಮಲಯಾಳ ಮನೋರಮಾ' ಮತ್ತು 'ದಿ ವೀಕ್' ಪತ್ರಿಕೆಗಳ ಮಾಜಿ ಸ್ಥಾನೀಯ ಸಂಪಾದಕರಾಗಿದ್ದ ಕೆ.ಎಸ್.ಸಚ್ಚಿದಾನಂದಮೂರ್ತಿ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ನನಗೆ ಆತ್ಮೀಯರು ಮತ್ತು ಹಿತೈಷಿಗಳಾಗಿದ್ದ ಸಚ್ಚಿದಾನಂದಮೂರ್ತಿಯವರು ದೆಹಲಿಯ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದ ಕೆಲವೇ ಕೆಲವು ಹಿರಿಯ ಕನ್ನಡಿಗ ಪತ್ರಕರ್ತರಲ್ಲಿ ಒಬ್ಬರಾಗಿದ್ದರು.
ರಾಜ್ಯ-ರಾಷ್ಟ್ರಗಳ ವಿದ್ಯಮಾನಗಳ ಜ್ಞಾನಕೋಶದಂತಿದ್ದ ಸಚ್ಚಿದಾನಂದ ಮೂರ್ತಿಯವರ ಸಾವು ಮಾಧ್ಯಮರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬ ಮತ್ತು ಸ್ನೇಹಿತರ ದು:ಖದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಕಂಬನಿ ಮಿಡಿದರು.
ನಿಧನ ಸುದ್ದಿ ನೋವು ತಂದಿದೆ: ಎಚ್‌ಡಿ ಕುಮಾರಸ್ವಾಮಿ
ಸೂಕ್ಷ್ಮ, ಸಂವೇದನಾಶೀಲ ಹಾಗೂ ಜನಪರ ಪತ್ರಿಕೋದ್ಯಮದಲ್ಲಿ ಬಹುದೊಡ್ಡ ಹೆಸರಾಗಿದ್ದ ಹಿರಿಯ ಪತ್ರಕರ್ತ ಶ್ರೀ ಕೆ.ಎಸ್.ಸಚ್ಚಿದಾನಂದಮೂರ್ತಿ ಅವರ ನಿಧನದ ವಾರ್ತೆ ತಿಳಿದು ಬಹಳ ನೋವಾಯಿತು. ಅವರು ಸಂಪಾದಕರಾಗಿದ್ದ ಅವರ ಅಂಕಣ ಬರಹಗಳನ್ನು ನಾನು ಸಾಕಷ್ಟು ಓದಿದ್ದೇನೆ. 'ಸಚ್ಚಿ' ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಆ ಕುಟುಂಬಕ್ಕೆ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಸಂಪಾ ಸೂಚಿಸಿದರು.












Click it and Unblock the Notifications