ಬೆಂಗಳೂರು; ಶಾಲೆ, ಕಾರ್ಖಾನೆ ಸಮಯ ಬದಲಾವಣೆ ಇಲ್ಲ
ಬೆಂಗಳೂರು, ಡಿಸೆಂಬರ್ 19: ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಿಸುವ ಸಲುವಾಗಿ ಶಾಲಾ-ಕಾಲೇಜು ಮತ್ತು ಕಾರ್ಖಾನೆಗಳ ಸಮಯ ಬದಲಾವಣೆ ಮಾಡಲಾಗದು ಎಂದು ಕರ್ನಾಟಕ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ಈ ಕುರಿತು ಹೈಕೋರ್ಟ್ ನೀಡಿದ್ದ ಸಲಹೆಯಂತೆ ಸಂಬಂಧಿಸಿದವರ ಸಭೆ ನಡೆಸಲಾಗಿದೆ. ಆದರಲ್ಲಿ ಸಮಯ ಬದಲಾವಣೆಗೆ ಯಾರೂ ಒಪ್ಪಿಗೆ ನೀಡಿಲ್ಲ. ಸಮಯ ಬದಲಾವಣೆಯಿಂದ ಮಕ್ಕಳ ಮೇಲೆ ಹಲವು ಪರಿಣಾಮಗಳಾಗುತ್ತದೆ. ಹಾಗಾಗಿ ಸಮಯ ಬದಲಾವಣೆ ಮಾಡಲಾಗದು ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

ಸಮರ್ಪಣಾ ಸಾಂಸ್ಕೃತಿಕ ಮತ್ತು ಸಮಾಜ ಸೇವಾ ಸಂಘಟನೆ ಬಳ್ಳಾರಿ ರಸ್ತೆ ಅಗಲೀಕರಣ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸೋಮವಾರ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಳೆ ಮತ್ತು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಆಗ ಸರ್ಕಾರಿ ವಕೀಲರು, ನ್ಯಾಯಾಲಯದ ನಿರ್ದೇಶನದಂತೆ ಶಿಕ್ಷಣ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಸಂಬಂಧಿಸಿದವರೊಂದಿಗೆ ನಡೆಸಿರುವ ಹಲವು ಸುತ್ತಿನ ಮಾತುಕತೆಗಳ ಫಲಿತಾಂಶ ಒಳಗೊಂಡ ವರದಿಯನ್ನು ಸಲ್ಲಿಸಿದರು. ಅದನ್ನು ದಾಖಲಿಸಿಕೊಂಡ ನ್ಯಾಯಾಲಯ ವಿಚಾರಣೆಯನ್ನು ಜನವರಿ ತಿಂಗಳ ಮೊದಲ ವಾರಕ್ಕೆ ಮುಂದೂಡಿತು.
ಆದರೆ ವಾಹನ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿಇತರೆ ಏನೇನು ಕ್ರಮಗಳನ್ನು ಕೈಗೊಳ್ಳಬಹುದೆಂಬ ಬಗ್ಗೆ ವರದಿಯಲ್ಲಿ ಹಲವು ಅಂಶಗಳನ್ನು ಪ್ರಸ್ತಾಪಿಸಲಾಗಿದೆ.
ಬದಲಾವಣೆ ಅಗತ್ಯವಿಲ್ಲ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ತನ್ನ ವರದಿಯಲ್ಲಿ, ಬೆಂಗಳೂರು ನಗರದ ಸಂಚಾರ ದಟ್ಟಣೆಯು ಕೇವಲ ಶಾಲಾ ಸಮಯದ ದೆಸೆಯಿಂದ ಆಗಿರುವುದಿಲ್ಲ. ಸಂಚಾರ ದಟ್ಟಣೆಯ ಒಟ್ಟಾರೆ ವಾಹನಗಳ ಬಳಕೆ ವಿವಿಧ ಕಚೇರಿಗಳು, ಕೈಗಾರಿಕೆಗಳು ಮತ್ತು ಇತರೆ ಸ್ಥಳಗಳಿಗೆ ತೆರಳುವ ವಾಹನಗಳ ದೆಸೆಯಿಂದ ಉಂಟಾಗುತ್ತದೆ ಎಂದು ಹೇಳಿದ್ದಾರೆ.
ಸಂಚಾರ ದಟ್ಟಣೆಯನ್ನು ತಪ್ಪಿಸಲು ಶಾಲೆಗಳನ್ನು ಬೇಗನೆ ಆರಂಭಿಸಿದಲ್ಲಿ ಮಕ್ಕಳಿಗೆ ನಿದ್ರೆ, ಊಟ, ಉಪಚಾರ ನಿಗದಿತ ಸಮಯಕ್ಕೆ ಆಗದೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಒಟ್ಟಾರೆ ಅಭಿಪ್ರಾಯದಂತೆ ಪಸ್ತುತ ಇರುವ ಶಾಲಾ ಸಮಯದಲ್ಲಿಯಾವುದೇ ಬದಲಾವಣೆ ಅವಶ್ಯವಿಲ್ಲಎಂದು ತಿಳಿಸಿದ್ದಾರೆ.
ಶಾಲಾ ಆವರಣದ ಒಳಗೆ ನಿಲುಗಡೆಗೆ ಅವಕಾಶ ಒದಗಿಸಲು ಸಾಧ್ಯವಿರದೇ ಇರುವ ಶಾಲೆಗಳ ಸಮೀಪದಲ್ಲಿ ನಿರ್ದಿಷ್ಟ ಪಿಕ್ ಅಪ್ ಮತ್ತಯ ಡ್ರಾಪ್ ಪಾಯಿಂಟ್‌ಗಳನ್ನು ನಿಗದಿ ಮಾಡುವುದು. ಶಾಲೆಗಳ ಸಮೀಪದಲ್ಲಿಶಾಲಾ ಆರಂಭ ಮತ್ತು ಮುಕ್ತಾಯದ ಸಮಯದಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಮತ್ತು ಸ್ವ-ಇಚ್ಛೆಯುಳ್ಳ ಪಾಲಕರನ್ನು ಟ್ರಾಫಿಕ್ ವಾರ್ಡನ್‌ಗಳನ್ನಾಗಿ ನೇಮಿಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳುವುದು ವರದಿಯಲ್ಲಿ ಸೇರಿದೆ.
ಕಾರ್ಖಾನೆಗಳಿಂದ ತೊಂದರೆ ಇಲ್ಲ: ಕಾರ್ಮಿಕ ಇಲಾಖೆ ಸಂಬಂಧಿಸಿದ ಕೈಗಾರಿಕಾ ಸಂಘಟನೆಗಳ ಜತೆ ವಿಸ್ತೃತ ಮಾತುಕತೆ ನಡೆಸಿದ ಬಳಿಕ ಕಾರ್ಖಾನೆಗಳಿಂದ ವಾಹನ ದಟ್ಟಣೆ ಆಗುತ್ತಿಲ್ಲ, ಹಾಗಾಗಿ ಬದಲಾವಣೆ ಅಗತ್ಯವಿಲ್ಲಎಂದು ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಯಿಸಿನ್ ತಿಳಿಸಿದ್ದಾರೆ. ಕಾರ್ಖಾನೆಗಳ ಸಮಯದ ಬದಲಾವಣೆ ಮಾಡುವುದರಿಂದ ಸಂಚಾರ ದಟ್ಟಣೆಯ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications