ಜಾವಗಲ್ ಶ್ರೀನಾಥ್ ರಿಂದ ಸಂಸ್ಕೃತ ಸಂಭಾಷಣೆ ಕೇಳಿ, ಇದು ಸಂಸ್ಕೃತ ಭಾರತೀ ಸಮ್ಮೇಳನ
ಬೆಂಗಳೂರು, ಜನವರಿ 4: ನಾನು ಶಾಲೆಯಲ್ಲಿ ಸಂಸ್ಕೃತ ಕಲಿತಿದ್ದೀನಿ. ಶ್ರೀಲಂಕಾ ಪ್ರವಾಸಕ್ಕೆ ಹೋಗಿದ್ದಾಗ ಅಲ್ಲಿನ ಸಿಂಹಳೀಯ ಭಾಷೆಯ ಹಲವು ಪದಗಳು ಸುಲಭವಾಗಿ ಅರ್ಥವಾದವು. ಅದು ನನ್ನ ಶಾಲಾ ದಿನಗಳ ನೆನಪಿನ ಕಾರಣಕ್ಕೆ. ಏಕೆಂದರೆ ಸಿಂಹಳೀಯ ಭಾಷೆಯಲ್ಲಿ ಸಂಸ್ಕೃತ ಒಳಗೊಂಡಿದೆ ಎಂದು ಕ್ರಿಕೆಟರ್ ಜಾವಗಲ್ ಶ್ರೀನಾಥ್ ಶುಕ್ರವಾರ ಹೇಳುವ ಮೂಲಕ ಹಲವರ ಹುಬ್ಬೇರುವಂತೆ ಮಾಡಿದರು.
ರಾಜರಾಜೇಶ್ವರಿ ನಗರದಲ್ಲಿ ಸಂಸ್ಕೃತ ಭಾರತೀ ಆಯೋಜಿಸಿರುವ ಮೂರು ದಿನಗಳ ಪ್ರಾಂತ ಸಮ್ಮೇಳನ ಕಾರ್ಯಕ್ರಮದ ಪೈಕಿ ಶುಕ್ರವಾರ ವಸ್ತುಪ್ರದರ್ಶನ ಉದ್ಘಾಟಿಸಿ, ಅವರು ಮಾತನಾಡಿದರು. ಸಂಸ್ಕೃತ ನಮ್ಮ ಜೀವನದ ಭಾಗ. ಎಲ್ಲರೂ ಅದನ್ನು ಕಲಿಯಲಿ ಎಂದು ನಾನು ಆಶಿಸುತ್ತೇನೆ ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ ವೇಣುಗೋಪಾಲ ಮಾತನಾಡಿ, ಸಂಸ್ಕೃತಕ್ಕೆ ಬಹಳ ದೊಡ್ಡ ಪರಂಪರೆ ಇದೆ. ಈ ಭಾಷೆಯು ಒಳಗೊಂಡಿರುವ ಹಲವು ವಿಷಯಗಳ ಬಗ್ಗೆ ಸಂಶೋಧನೆಗಳಾಗಬೇಕು ಎಂದು ಅಭಿಪ್ರಾಯಪಟ್ಟರು.

ಸಂಸ್ಕೃತ ಭಾರತೀಯ ದತ್ತಾತ್ರೇಯ ವಜ್ರಳ್ಳಿ ಮಾತನಾಡಿ, ಮೂವತ್ತು ವರ್ಷಗಳಿಂದ ಸಂಸ್ಕೃತ ಭಾರತೀ ಪ್ರಪಂಚದಾದ್ಯಂತ ಸಂಸ್ಕೃತ ಭಾಷೆಯನ್ನು ತಲುಪಿಸುತ್ತಿದೆ. ಹತ್ತು ದಿನಗಳ ಸಂಭಾಷಣಾ ಶಿಬಿರದ ಮೂಲಕವೇ ಎಲ್ಲರಿಗೂ ಭಾಷೆಯ ಬಗ್ಗೆ ಆಸಕ್ತಿ-ಜ್ಞಾನ ಮೂಡಿಸುತ್ತಿದೆ ಎಂದರು.
ಪ್ರತಿಯೊಬ್ಬರ ಜೀವನದಲ್ಲೂ ಸಂಸ್ಕೃತದ ಪ್ರಭಾವ ಇದೆ. ನಮ್ಮ ದಿನ ಬಳಕೆಯ ಭಾಷಾ ಪ್ರಯೋಗವನ್ನೇ ಸರಿಯಾಗಿ ಗಮನಿಸಿಕೊಂಡರೆ ಅದು ತಿಳಿಯುತ್ತದೆ ಎಂದು ತಿರುಚ್ಚಿ ಸಂಸ್ಥಾನ ಜಯೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.












Click it and Unblock the Notifications