ಬೆಂಗ್ಳೂರು ಸಿಟಿ ರೈಲ್ವೆ ನಿಲ್ದಾಣಕ್ಕೆ ಇನ್ಮುಂದೆ ಸಂಗೊಳ್ಳಿರಾಯಣ್ಣ ಹೆಸರು
ಬೆಂಗಳೂರು, ಸೆಪ್ಟೆಂಬರ್,15 : ನಗರದ ಸಿಟಿ ರೈಲ್ವೆ ನಿಲ್ದಾಣಕ್ಕೆ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ' ಎಂದು ಮರುನಾಮಕರಣ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರು ನಾಮಕರಣ ಮಾಡಬೇಕು ಎಂಬ ಸುಮಾರು ದಿನಗಳ ಕನಸು ಈಗ ಈಡೇರಿದಂತಾಗಿದ್ದು, ಅನೇಕ ದಿನಗಳ ಕನ್ನಡದ ಹೋರಾಟಕ್ಕೆ ಜಯ ಸಿಕ್ಕಿದೆ. ಇನ್ನುಮುಂದೆ ಸಿಟಿ ರೈಲ್ವೆ ನಿಲ್ದಾಣ ಸಂಗೊಳ್ಳಿ ರಾಯಣ್ಣ ಎಂದು ಹೆಸರಿನಿಂದ ಎಲ್ಲರಿಗೂ ಚಿರಪರಿಚಿತವಾಗಲಿದೆ.[30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]

ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು ಸಿಟಿ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿನ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಮಾಡಲಾಗಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಈ ವಿಷಯದ ಪ್ರಯುಕ್ತ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿದ್ದರು.
ರಾಜ್ಯ ಸಚಿವ ಸಂಪುಟ ಸಹ ಸಿಟಿ ರೈಲ್ವೆ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರು ನಾಮಕರಣ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧಾರ ತೆಗೆದುಕೊಂಡು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ, ಹಳೆಯ ಪ್ರಸ್ತಾವಕ್ಕೆ ತನ್ನ ಅನುಮೋದನೆ ನೀಡಿದ್ದು ರಾಜ್ಯದ ಜನರ ಕನಸು ನನಸಾಗುವ ಕಾಲ ಕೂಡಿಬಂದಿದೆ.












Click it and Unblock the Notifications