ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಶಾಕ್: ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ನಿಧನ
ಬೆಂಗಳೂರು, ಡಿಸೆಂಬರ್ 27: ಕನ್ನಡ ಚಿತ್ರರಂಗ ಸೇರಿದಂತೆ ಹಲವು ಭಾಷೆಗಳಲ್ಲಿ ಸಾಹಸ ನಿರ್ದೇಶನ ಮಾಡಿದ್ದ ಜಾಲಿ ಬಾಸ್ಟಿನ್ ಹಠಾತ್ ಹೃದಯಘಾತದಿಂದ ನಿನ್ನೆ (ಡಿಸೆಂಬರ್ 26) ಮಂಗಳವಾರ ವಿಧಿವಶರಾಗಿದ್ದಾರೆ.
1966ರಲ್ಲಿ ಜನಿಸಿದ ಜಾಲಿ ಬಾಸ್ಟಿನ್ ಅವರು ಕೇರಳ ಮೂಲದವರಾಗಿದ್ದಾರೆ. ಕನ್ನಡ ಸೇರಿದಂತೆ ಒಟ್ಟು ಸುಮಾರು 900ಕ್ಕೂ ಹೆಚ್ಚು ಚಿತ್ರಗಳಲ್ಲಿ ಬೈಕ್ ಚೇಸಿಂಗ್ ಡ್ಯೂಪ್ ಸೇರಿದಂತೆ ಇತರ ಸ್ಟಂಟಿಂಗ್ ಮಾಡುತ್ತಿದ್ದ ಅವರು ಹೃದಯಘಾತದಿಂದ ಕೊನೆಯುಸಿರೆಳೆದಿದ್ದು, ಚಿತ್ರರಂಗದ ಗಣ್ಯರು ಸಂತಾಪ ಸೂಚಿದ್ದಾರೆ.

ಮೂಲತಃ ಕೇರಳದವರಾಗಿದ್ದರೂ ಕೂಡ ಜಾಲಿ ಬಾಸ್ಟಿನ್ ಬೆಂಗಳೂರಿನ ಶಿಕ್ಷಣ ಪಡೆದು, ಡಿಪ್ಲೊಮಾ ವ್ಯಾಸಂಗ ಮುಗಿಸಿದ್ದರು. ಬೈಕ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ಅವರು, ಸ್ಟಂಟ್‌ಗಳ ಮೇಲಿನ ಆಸಕ್ತಿಯಿಂದ ಚಿತ್ರರಂಗಕ್ಕೆ ಕಾಲಿಟ್ಟರು. ಯಾವುದೇ ರೀತಿಯ ಸ್ಟಂಟ್‌ಗಳನ್ನು ನಿರಾಯಾಸವಾಗಿ ಮಾಡುತ್ತಿದ್ದ ಜಾಲಿ ಬಾಸ್ಟಿನ್ ತಮಿಳು, ಮಲಯಾಳಂ, ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ.
ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಸಿನಿಮಾಗಳಿಗೆ ಬೈಕ್ ಚೇಸಿಂಗ್ ಡ್ಯೂಪ್ ಸೇರಿದಂತೆ ಇತರ ಸ್ಟಂಟ್‌ಗಳನ್ನು ಮಾಡುತ್ತಿದ್ದ ಜಾಲಿ ಬಾಸ್ಟಿನ್, ಪ್ರೇಮ ಲೋಕ, ಪುಟ್ನಂಜ, ಅಣ್ಣಯ್ಯ, ಶಾಂತಿ ಕ್ರಾಂತಿ ಸೇರಿದಂತೆ ರವಿಚಂದ್ರನ್ ನಟನೆಯ ಹಲವಾರು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಚಿತ್ರರಂಗದ ಮೇಲಿನ ಆಸಕ್ತಿಯಿಂದ ನಿರ್ದೇಶಕನಕ್ಕೂ ಇಳಿದಿದ್ದ ಜಾಲಿ ಬಾಸ್ಟಿನ್ ನಿನಗಾಗಿ ಕಾದಿರುವೆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು.
ಕನ್ನಡ ಚಿತ್ರರಂಗದ ಒಂದು ಕಾಲ ಘಟ್ಟದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಾಹಸ ನಿರ್ದೇಶಕ ಎಂಬ ಹೆಗ್ಗಳಿಕೆ ಜಾಲಿ ಬಾಸ್ಟಿನ್ ಪಾತ್ರರಾಗಿದ್ದರು. ಕೆಲವೊಂದು ಬಾರಿ ಅವರು ಪ್ರಾಣಾಪಾಯ ಲೆಕ್ಕಿಸದೇ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡಿದ್ದರು. ಭಲೇ ಚತುರ ಸಿನಿಮಾದ ಬಾಂಬ್ ಬ್ಲಾಸ್ಟ್ ದೃಶ್ಯದ ವೇಳೆ ಜಾಲಿ ಗಂಭೀರ ಗಾಯಗೊಂಡಿದ್ದರು. ಹಾಗೂ ಪುಟ್ನಂಜ ಸಿನಿಮಾ ಶೂಟ್ ವೇಳೆ ಬೈಕ್ನಿಂದ ಬಿದ್ದು ಅವರ ಮುಖ ಹಾಗೂ ಕಾಲಿಗೆ ಪೆಟ್ಟಾಗಿತ್ತು. ಆದರೂ ಚಿತ್ರರಂಗದ ಮೇಲೆ ಆಸಕ್ತಿ ಕಳೆದುಕೊಳ್ಳದ ಅವರು 900ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.












Click it and Unblock the Notifications