ಕಾಂಗ್ರೆಸ್‌ಗೆ ರಮ್ಯಾ ಕಮ್‌ಬ್ಯಾಕ್: ನಾಳೆ ಮೇ 1ರಿಂದ ಮತಭೇಟೆ ಆರಂಭ, ಎಲ್ಲಿ ಸಂಚಾರ?
ಬೆಂಗಳೂರು, ಏಪ್ರಿಲ್ 30: ರಂಗೇರುತ್ತಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಅಖಾಡಕ್ಕೆ ಸ್ಯಾಂಡಲ್ವುಡ್ ಕಲಾವಿದರು ಎಂಟ್ರಿ ಕೊಟ್ಟು ಮತ್ತಷ್ಟು ಮೆರಗು ಮೋಡಿಸಿದ್ದಾರೆ. ಇದೀಗ ಮೋಹಕತಾರೆ ರಮ್ಯಾ ಅವರು ರಾಜ್ಯದ ವಿವಿಧೆಡೆ ಮತಭೇಟೆ ಆರಂಭಿಸಲಿದ್ದಾರೆ.
ರಾಜ್ಯದಲ್ಲಿ ರಾಜಕೀಯದಲ್ಲಿ ಚುನಾವಣೆ ಪ್ರಚಾರದ ಕಾವು ಬಿಸಿಲ ಝಳದ ನಡುವೆಯೂ ಏರಿಕೆ ಆಗುತ್ತಿದೆ. ಈಗಾಗಲೇ ನಟ ಕಿಚ್ಚ ಸುದೀಪ್ ಬಿಜೆಪಿ ಪರ ವಿವಿಧ ಜಿಲ್ಲೆಗಳಲ್ಲಿ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದಾರೆ. ಅದೇ ರೀತಿ ನಟ ದರ್ಶನ್ ತೂಗುದೀಪ್, ದಿಗಂತ್, ಹರ್ಷಿಕಾ ಪೂಣಚ್ಚ, ತಾರಾ ಅನುರಾಧ, ಶೃತಿ, ದೊಡ್ಡಣ್ಣ, ಸಾಧು ಕೋಕಿಲ ಇನ್ನಿತರರು ವಿವಿಧ ಪಕ್ಷದ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ.

ಈ ಸಾಲಿಗೆ ಮಾಜಿ ಸಂಸದೆ ಮತ್ತು ಕನ್ನಡದ ನಟಿ ಮೋಹಕ ತಾರೆ ರಮ್ಯಾ ಅವರು ಸೇರಿದ್ದು, ಅವರು ಕಾಂಗ್ರೆಸ್ ಪರ ಅಖಾಡಕ್ಕಿಳಿಯಲಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಸೋಮವಾರ ಮೇ 1ರಿಂದ ಮತಭೇಟೆ ಆರಂಭಿಸುತ್ತಿದ್ದಾರೆ.
ನಟನೆಯ ಜೊತೆ ಜೊತೆಗೆ ರಾಜಕೀಯ ಪ್ರವೇಶಿಸಿದ್ದ ರಮ್ಯಾ ಅವರು ಕಾಂಗ್ರೆಸ್ ಅನ್ನು ಪ್ರತಿನಿಧಿಸಿದ್ದರು. ಅದಾದ ಬಳಿಕ ಅವರು ಮೂರು ವರ್ಷಗಳಿಂದ ರಾಜಕೀಯದಿಂದಲೂ (2019ರಿಂದ) ಅಂತರ ಕಾಯ್ದುಕೊಂಡಿದ್ದರು. ಕಳೆದ ಕೆಲವು ದಿನಗಳಿಂದ ಅವರು ನಟನೆಯಲ್ಲಿ ಮತ್ತೆ ಸಕ್ರಿಯರಾಗುವ ಮೂಲಕ ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದರು.
ಬಬಲೇಶ್ವರ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿ
ಇದೀಗ ರಮ್ಯಾ ಅವರು ಕಾಂಗ್ರೆಸ್ ಪರ ಚುನಾವಣಾ ಸ್ಟಾರ್ ಪ್ರಚಾರಕಿಯಾಗಿ ರಾಜಕೀಯ ಅಂಗಳಕ್ಕೆ ಕಾಲಿಡುತ್ತಿದ್ದು, ಇದು ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದೆ. ನಾಳೆ ಸೋಮವಾರ ಮೇ 1ರಿಂದ ಅವರು ಕರ್ನಾಟಕದ ವಿಜಯಪುರ, ಮಂಡ್ಯ, ರಾಮನಗರ, ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 'ಕೈ' ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಕಾಂಗ್ರೆಸ್‌ನ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಅವರ ಕ್ಷೇತ್ರ ಬಬಲೇಶ್ವರ ಕ್ಷೇತ್ರದಿಂದ ಅವರು ಪ್ರಚಾರ ಆರಂಭಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನ ಸಂಸದೆಯಾದ ಬಳಿಕ ಅವರು ರಾಷ್ಟ್ರೀಯ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಆಗಿಯು ಕಾರ್ಯ ನಿರ್ವಹಿಸಿದ್ದರು. 2019ರಲ್ಲಿ ನಡೆದ ಲೋಕಸಭಾ ಚುನಾವಣೆ ಬಳಿಕ ಅವರು ರಾಜಕೀಯದಿಂದಲೇ ದೂರವಾಗಿದ್ದರು. ಇದೀಗ ಮತ್ತೆ ಕಮ್‌ಬ್ಯಾಕ್ ಆಗಿರುವ ಅವರು, ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದಾರೆ. ಪ್ರಚಾರ ಮಾಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿ-ಜೆಡಿಎಸ್ ಆಹ್ವಾನ ತಿರಸ್ಕರಿಸಿದ್ದ ರಮ್ಯಾ
ಬಿಜೆಪಿ ಪಕ್ಷದ ಹಿರಿಯ ನಾಯಕರೊಬ್ಬರು ಕರೆ ಮಾಡಿ ಸಚಿವ ಮಾಡುವುದಾಗಿ ಹೇಳಿದ್ದರು. ಪಕ್ಷಕ್ಕೆ ಬರುವಂತೆಯೂ ಆಹ್ವಾನಿಸಿದ್ದರು. ಅವರಂತೆಯೇ ಜೆಡಿಎಸ್ ಪಕ್ಷವು ಸಹ ಆಹ್ವಾನ ನೀಡಿತ್ತು. ಪಕ್ಷಕ್ಕೆ ಬಂದರೆ ಒಂದಷ್ಟು ಆಫರ್ ಕೊಡುವುದಾಗಿ ಹೇಳಿದ್ದರು. ಆದರೆ ನಾನು ಅದೆಲ್ಲವನ್ನು ತಿರಸ್ಕರಿಸಿದ್ದೇ ಎಂದು ಈ ಹಿಂದೆ ರಮ್ಯಾ ಅವರೇ ಹೇಳಿದ್ದರು. ಬೇರೆ ಪಕ್ಷದತ್ತ ಮುಖ ಮಾಡದ ರಮ್ಯಾ ಇದೀಗ ತಮ್ಮ ಸ್ವ ಪಕ್ಷ ಕಾಂಗ್ರೆಸ್‌ನೊಂದಿಗೆ ಕೈ ಜೋಡಿದ್ದಾರೆ.
ಅವರು ಈ ಹಿಂದೆ ಕೆಲವು ನಾಯಕರ ಹೇಳಿಕೆಗಳಿಂದ ಬೇಸರಗೊಂಡಿದ್ದರು ಎನ್ನಲಾಗಿದೆ. ಇನ್ನೂ ಕೆಲವು ಕಾರಣಗಳಿಂದ ಅವರು ಕಾಂಗ್ರೆಸ್‌ನಿಂದಲೂ ದೂರವಾಗಿದ್ದರು. ಇದೀಗ ಕಾಂಗ್ರೆಸ್ ವರಿಷ್ಠರ ಮಾತಿನ ಮೇರೆಗೆ ಚುನಾವಣಾ ಅಖಾಡದಲ್ಲಿ ಧುಮುಕುತ್ತಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications