ಕೇಂದ್ರ ಸಚಿವ ರಾಜ್ಯವರ್ಧನ್ ರಿಂದ ಬಯೋಕಾನ್ ಮಜುಂದಾರ್ ಭೇಟಿ
ಬೆಂಗಳೂರು, ಜೂನ್ 14: ಬಿಜೆಪಿಯ 'ಸಂಪರ್ಕ್ ಫಾರ್ ಸಮರ್ಥನ್' ಅಭಿಯಾನದ ಭಾಗವಾಗಿ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಗುರುವಾರದಂದು ಬೆಂಗಳೂರಿನಲ್ಲಿ ಬಯೋಕಾನ್ ನ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಅವರನ್ನು ಭೇಟಿಯಾದರು. ಕಳೆದ ನಾಲ್ಕು ವರ್ಷದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆ ಏನು ಎಂದು ವಿವರಿಸುವ ಪುಸ್ತಿಕೆಯೊಂದನ್ನು ಸಚಿವರು ನೀಡಿದರು.
ಕಳೆದ ಶನಿವಾರದಂದು ಇದೇ ಅಭಿಯಾನಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಾಲಿವುಡ್ ನಟ ಸಂಜಯ್ ದತ್ ನ ಭೇಟಿಯಾಗಿದ್ದರು. ಈ ವರ್ಷದ ಮೇ ತಿಂಗಳಲ್ಲಿ ಸಂಪರ್ಕ್ ಫಾರ್ ಸಮರ್ಥನ್ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ನರೇಂದ್ರ ಮೋದಿ ನೇತೃತ್ವದ ಸರಕಾರ ಕಳೆದ ನಾಲ್ಕು ವರ್ಷದಲ್ಲಿ ಮಾಡಿರುವ ಸಾಧನೆಗಳನ್ನು ಪರಿಚಯಿಸುವುದು ಅಭಿಯಾನದ ಉದ್ದೇಶವಾಗಿದೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಅಭಿಯಾನದ ಅಡಿಯಲ್ಲಿ ನಟ ಸಲ್ಮಾನ್ ಖಾನ್ ರ ತಂದೆ ಸಲೀಮ್ ಖಾನ್ ರನ್ನು ಭೇಟಿಯಾಗಿದ್ದರು. ಮೇ ಇಪ್ಪತ್ತೊಂಬತ್ತರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸರಕಾರದ ಸಾಧನೆಯ ಪ್ರಮುಖಾಂಶಗಳ ಬಗ್ಗೆ ಮಾತನಾಡಿದ್ದರು. ಸೇನಾ ಮುಖ್ಯಸ್ಥ ಜ.ದಲ್ಬೀರ್ ಸಿಂಗ್ ರನ್ನು ಗುರುಗ್ರಾಮದಲ್ಲಿರುವ ಅವರ ಮನೆಯಲ್ಲೇ ಅಮಿತ್ ಶಾ ತಮ್ಮ ಮೊದಲ ಭೇಟಿ ಮಾಡಿದ್ದರು.
ಮಾಧುರಿ ದೀಕ್ಷಿತ್, ರತನ್ ಟಾಟಾ ಹಾಗೂ ಉದ್ಧವ್ ಠಾಕ್ರೆ ಅವರನ್ನು ಸಹ ಅಮಿತ್ ಶಾ ಸ್ವತಃ ಭೇಟಿ ಮಾಡಿದ್ದರು.












Click it and Unblock the Notifications