ದೇವನಹಳ್ಳಿ: ಚಿರತೆ ಕಂಡು ಭೀತಿಗೊಂಡ ಗ್ರಾಮಸ್ಥರು
ಬೆಂಗಳೂರು ಗ್ರಾಮಾಂತರ, ನವೆಂಬರ್ 12: ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಆವತಿ ಬೆಟ್ಟದಲ್ಲಿ ಮೂರು ದಿನಗಳ ಹಿಂದೆ ಚಿರತೆ ಕಾಣಿಸಿಕೊಂಡಿದೆ. ಆವತಿ ಗ್ರಾಮವು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 19 ಕಿ.ಮೀ ದೂರದಲ್ಲಿದೆ.
ಆವತಿ ಬೆಟ್ಟದಲ್ಲಿ ಚಿರತೆ ಓಡಾಡುತ್ತಿದೆ ಎಂದು ಸುದ್ದಿ ಹಬ್ಬುತ್ತಿದ್ದಂತೆ ಗ್ರಾಮಸ್ಥರು ಭಯಭೀತರಾಗಿದ್ದು, ತಮ್ಮ ಜಾನುವಾರುಗಳು, ಮಕ್ಕಳನ್ನು ರಕ್ಷಣೆ ಮಾಡಿಕೊಳ್ಳಲು ಮುಂಜಾಗ್ರತೆ ವಹಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಬಂದಿರುವ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರಿಗೆ ಧೈರ್ಯ ಹೇಳುವ ಕಾರ್ಯ ಮಾಡಿದ್ದಾರೆ. ಬೋನ್ ಇಟ್ಟು ಚಿರತೆ ಹಿಡಿಯುವ ಪ್ರಯತ್ನ ಆರಂಭಿಸಿದ್ದಾರೆ.
ಆವತಿಯಿಂದ ಕೆಲವು ಕಿಲೋ ಮೀಟರ್‌ಗಳಷ್ಟು ದೂರದಲ್ಲಿರುವ ಚನ್ನರಾಯಪಟ್ಟಣ ಹೋಬಳಿ ನಲ್ಲೂರು ಗ್ರಾಮದ ಕೋಟೆಯ ಗಂಗಾದೇವಿ ದೇವಾಲಯ ಸಮೀಪದ ಪುರಾತನ ಹುಣಸೇ ತೋಪಿನಲ್ಲಿಯೂ ಗುರುವಾರ ಚಿರತೆ ಕಾಣಿಸಿರುವುದಾಗಿ ಹಬ್ಬಿದ್ದ ವದಂತಿಗಳಿಂದಾಗಿ ಇಲ್ಲಿನ ಜನರೂ ಕೂಡಾ ಭಯಭೀತರಾಗಿದ್ದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆಯವರು ಹಾಗೂ ಅರಣ್ಯ ಇಲಾಖೆಯವರು ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯರಿಗೆ ಧೈರ್ಯ ತುಂಬುವ ಕಾರ್ಯ ಮಾಡಿದ್ದಾರೆ.
''ಆವತಿ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಮಾಹಿತಿ ಸಿಕ್ಕಿದಾಗಿನಿಂದಲೂ ನಾವು ಚಿರತೆಯನ್ನು ಸೆರೆ ಹಿಡಿಯಲು ಪ್ರಯತ್ನ ಮಾಡುತ್ತಿದ್ದೇವೆ. ಆವತಿಯ ಬಳಿ ಬೋನ್ ಇಟ್ಟಿದ್ದೇವೆ. ಇದುವರೆಗೂ ಸೆರೆಸಿಕ್ಕಿಲ್ಲ. ಆವತಿ ಬಳಿ ಎರಡು ಕಡೆಯಲ್ಲಿ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿವೆ. ಆದರೆ, ಮಳೆಯಿಂದಾಗಿ ಹೆಜ್ಜೆ ಗುರುತುಗಳನ್ನು ಸಂಪೂರ್ಣವಾಗಿ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ರಾತ್ರಿಯ ವೇಳೆಯಲ್ಲಿ ಆಹಾರವನ್ನು ಹುಡುಕಿಕೊಂಡು ನಲ್ಲೂರು ಬಳಿಯ ಹುಣಸೇತೋಪಿಗೆ ಬಂದಿರಬಹುದು. ಬೆಳಗಾಗುತ್ತಿದ್ದಂತೆ ಜನರ ಓಡಾಟ, ವಾಹನಗಳ ದಟ್ಟಣೆಯಿಂದ ವಿಚಲಿತವಾಗಿ, ಪುನಃ ರಾತ್ರಿಯ ವೇಳೆ ವಾಪಸ್ಸು ಆವತಿ ಬೆಟ್ಟಕ್ಕೆ ಬಂದಿರಬಹುದು'' ಎಂದಿದ್ದಾರೆ ಅರಣ್ಯ ಇಲಾಖೆ ಅಧಿಕಾರಿ.
''ಚಿರತೆ ಸಾಮಾನ್ಯವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಮಾಡುತ್ತದೆ. ಬಯಲು ಪ್ರದೇಶದಲ್ಲಿ ಇರುವುದಿಲ್ಲ. ಆವತಿ ಗ್ರಾಮದವರೊಬ್ಬರು ಮೇಕೆಯೊಂದು ನಾಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಚಿರತೆ ತಿಂದಿರಬಹುದು ಎಂದು ಶಂಕಿಸಬಹುದು. ಆದರೆ, ಖಚಿತವಾಗಿ ಚಿರತೆ ಹೊತ್ತುಕೊಂಡು ಹೋಗಿದೆ ಎಂದು ಹೇಳಲು ಸಾಧ್ಯವಿಲ್ಲ. ಜನರು ಭಯಭೀತರಾಗುವುದು ಬೇಡ, ನಾವು ಚಿರತೆಯನ್ನು ಸೆರೆಹಿಡಿಯಲು ಸಕಲ ರೀತಿಯಲ್ಲೂ ಪ್ರಯತ್ನ ಮಾಡುತ್ತಿದ್ದೇವೆ. ನಲ್ಲೂರು ಭಾಗದಲ್ಲೂ ನಮ್ಮ ಸಿಬ್ಬಂದಿ ಎಚ್ಚರಿಕೆಯಿಂದ ಕಾಯುತ್ತಿದ್ದಾರೆ. ಆದ್ದರಿಂದ ಜನರು ಎಚ್ಚರಿಕೆಯಿಂದ ಇರುವಂತೆ'' ಅವರು ಮನವಿ ಮಾಡಿದ್ದಾರೆ.