ಬಿಡಿಎ ಆಯುಕ್ತರ ನೇಮಕಾತಿಯಲ್ಲಿ ಲೋಪ: ಕರ್ನಾಟಕ ಹೈಕೋರ್ಟ್
ಬೆಂಗಳೂರು, ಏಪ್ರಿಲ್ 06: ಕೆಎಎಸ್ ಶ್ರೇಣಿಯಿಂದ ಐಎಎಸ್‌ಗೆ ಬಡ್ತಿ ಪಡೆದಿರುವ ಅಧಿಕಾರಿಯನ್ನು ಬಿಡಿಎ ಆಯುಕ್ತರ ಹುದ್ದೆಗೆ ನೇಮಕ ಮಾಡಬಹುದೇ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್ ಪ್ರಶ್ನಿಸಿದೆ.
ಅಲ್ಲದೆ, ಬಿಡಿಎ ಆಯುಕ್ತರ ನೇಮಕಾತಿಯಲ್ಲಿ ಮೇಲ್ನೋಟಕ್ಕೆ ಲೋಪವಾಗಿರುವಂತೆ ತೋಚುತ್ತಿದೆ, ಇಂತಹ ವಿಚಾರಗಳಲ್ಲಿ ನ್ಯಾಯಾಲಯ ಕಣ್ಣು ಮುಚ್ಚಿ ಕೂರಲು ಸಾಧ್ಯವಿಲ್ಲ ಹಾಗಾಗಿ ನೇಮಕವನ್ನು ರದ್ದು ಮಾಡಬಾರದೇಕೇ ಎಂಬ ಇಂಗಿತವನ್ನು ವ್ಯಕ್ತಪಡಿಸಿದರು.
ಜೊತೆಗೆ ಹೆಚ್ಚಿನ ಕಾಲಾವಕಾಶ ನೀಡಲು ನಿರಾಕರಿಸಿದ ನ್ಯಾಯಪೀಠ ಮುಂದಿನ ಮೂರು ದಿನಗಳಲ್ಲೇ ವಿಚಾರಣೆ ನಡೆಸುವುದಾಗಿ ಹೇಳಿದೆ.
ಬಿಡಿಎ ಆಯುಕ್ತರನ್ನಾಗಿ ಎಂ.ಬಿ. ರಾಜೇಶ್ ಗೌಡ ಅವರನ್ನು ನೇಮಕ ಮಾಡಿ ಸರ್ಕಾರ ಹೊರಡಿಸಿರುವ ಆದೇಶ ರದ್ದು ಕೋರಿ ವಕೀಲ ಜಿ.ಮೋಹನ್ ಕುಮಾರ್ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಪೀಠ ಬುಧವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು, ಬಿಡಿಎ ಕಾಯ್ದೆಯಲ್ಲಿ ಆಯುಕ್ತರನ್ನು ನೇಮಿಸುವ ಸಂಬಂಧ ಅರ್ಹತೆಗಳನ್ನು ವಿವರಿಸಲಾಗಿದೆ. ಅದರ ಪ್ರಕಾರ, ಪ್ರಾದೇಶಿಕ ಆಯುಕ್ತರ ಶ್ರೇಣಿಗಿಂತ ಕೆಳಗಿನ ಶ್ರೇಣಿಯ ಅಧಿಕಾರಿಯನ್ನು ಬಿಡಿಎ ಆಯುಕ್ತರ ಹುದ್ದೆಗೆ ನೇಮಕ ಮಾಡುವಂತಿಲ್ಲ. ಹಾಲಿ ಬಿಡಿಎ ಆಯುಕ್ತ ರಾಜೇಶ್ ಗೌಡ ಕೆಎಎಸ್ ಅಧಿಕಾರಿಯಾಗಿದ್ದರು, 2018ರಲ್ಲಿ ಐಎಎಸ್ ಶ್ರೇಣಿಗೆ ಪದೋನ್ನತಿ ಹೊಂದಿದ್ದಾರೆ. ಪ್ರಾದೇಶಿಕ ಆಯುಕ್ತರಾಗಲು 14-15 ವರ್ಷ ಸೇವೆ ಸಲ್ಲಿಸಿರಬೇಕು ಎಂದರು.
ಸರ್ಕಾರದ ಪರ ವಕೀಲರು, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ಕೋರಿದರು. ಅದರೆ ಅದಕ್ಕೆ ಒಪ್ಪದ ನ್ಯಾಯಪೀಠ, ಬಿಡಿಎ ಆಯುಕ್ತರ ನೇಮಕಾತಿಯಲ್ಲಿ ಮೇಲ್ನೋಟಕ್ಕೆ ಲೋಪವಾಗಿರುವಂತೆ ತೋಚುತ್ತಿದೆ. ಆಕ್ಷೇಪಣೆ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಮೂರು ದಿನಗಳ ಬಳಿಕ ಮತ್ತೆ ಅರ್ಜಿ ವಿಚಾರಣೆಗೆ ನಿಗದಿಪಡಿಸುತ್ತೇವೆ. ಅಷ್ಟರೊಳಗೆ ಆಕ್ಷೇಪಣೆ ಸಲ್ಲಿಸಬೇಕು. ಮೇಲ್ನೋಟಕ್ಕೆ ಲೋಪ ಕಂಡು ಬಂದಾಗ ನಾವೇಕೆ ನಿಮಗೆ ಸಮಯ ನೀಡಬೇಕು ಎಂದು ಪ್ರಶ್ನಿಸಿತು.
ಕೆಎಎಸ್ ಶ್ರೇಣಿಯಿಂದ ಐಎಎಸ್‌ಗೆ ಪದೋನ್ನತಿ ಹೊಂದಿದವರು ಬಿಡಿಎ ಆಯುಕ್ತರಾಗಬಹುದೇ, ಪ್ರಕರಣದಲ್ಲಿ ನಿಮ್ಮ ನಿಲುವೇನು ಎನ್ನುವುದನ್ನು ತಿಳಿಸಿ. ಪ್ರತಿ ಬಾರಿ ಕಾಲಾವಕಾಶ ಕೇಳುವುದನ್ನಷ್ಟೇ ನೀವು ಮಾಡುತ್ತೀರಿ ಎಂದ ಪೀಠ, ಮುಂದಿನ ಬುಧವಾರದೊಳಗೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ತಾಕೀತು ಮಾಡಿ ವಿಚಾರಣೆ ಮುಂದೂಡಿತು.

ಅರ್ಜಿದಾರರ ವಾದವೇನು?: ರಾಜೇಶ್ ಗೌಡ ಅವರ ನೇಮಕಾತಿ ಆದೇಶ ಹಿಂಪಡೆಯಬೇಕು ಹಾಗೂ ಅರ್ಹ ಅಽಕಾರಿಯನ್ನು ಬಿಡಿಎ ಆಯುಕ್ತರ ಹುದ್ದೆಗೆ ನೇಮಕ ಮಾಡಬೇಕೆಂದು ನ.30ರಂದು ಸಲ್ಲಿಸಿರುವ ಮನವಿ ಪರಿಗಣಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿರುವ ಅರ್ಜಿದಾರರು, ಪಿಐಎಲ್ ಇತ್ಯರ್ಥವಾಗುವರೆಗೂ ಬಿಡಿಎ ಆಯುಕ್ತರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸದಂತೆ ರಾಜೇಶ್ ಗೌಡ ಅವರನ್ನು ನಿರ್ಬಂಧಿಸಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ.
Recommended Video

ಬೆಂಗಳೂರು ಅಭಿವೃದ್ಧಿ ಕಾಯ್ದೆ-1987ರ ಸೆಕ್ಷನ್ 12ರ ಪ್ರಕಾರ ವಿಭಾಗೀಯ ಆಯುಕ್ತರಿಗಿಂತ ಕಡಿಮೆ ಇರದ ಶ್ರೇಣಿಯ ಅಧಿಕಾರಿಯನ್ನು ಬಿಡಿಎ ಆಯುಕ್ತರ ಹುದ್ದೆಗೆ ನೇಮಕ ಮಾಡಬೇಕಿದೆ. ಆದರೆ, ಪ್ರಾದೇಶಿಕ ಆಯುಕ್ತರಿಗಿಂತ ಕಡಿಮೆ ಶ್ರೇಣಿಯ ಅಧಿಕಾರಿಯಾಗಿರುವ ಎಂ.ಬಿ. ರಾಜೇಶ್ ಗೌಡ ಅವರನ್ನು ಆಯುಕ್ತರಾಗಿ ನೇಮಿಸಿ ಸರ್ಕಾರ ಆದೇಶಿಸಿದೆ. ಅರ್ಹತೆ ಇಲ್ಲದವರನ್ನು ನೇಮಿಸುವುದರಿಂದ ಆ ಹುದ್ದೆಯ ಕರ್ತವ್ಯಗಳನ್ನು ಪರಿಣಾಮಕಾರಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗಿದೆ.












Click it and Unblock the Notifications