ಬೆಂಗಳೂರು : ಎಟಿಎಂ ವ್ಯಾನ್‌ನಲ್ಲಿದ್ದ 50 ಲಕ್ಷ ನಾಪತ್ತೆ
ಬೆಂಗಳೂರು, ಅಕ್ಟೋಬರ್ 21 : ಎಟಿಎಂಗೆ ಹಣ ತುಂಬಲು ಬಂದ ವ್ಯಕ್ತಿಯೇ 50 ಲಕ್ಷ ಹಣದೊಂದಿಗೆ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹಲಸೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಬುಧವಾರ ಮಧ್ಯಾಹ್ನ ಎಂ.ಜಿ.ರಸ್ತೆಯಲ್ಲಿ ಈ ಘಟನೆ ನಡೆದಿದೆ. ಇಂಡಸ್ ಇಂಡ್ ಬ್ಯಾಂಕ್ ಎಟಿಎಂಗೆ ಹಣ ತುಂಬಲು ಬಂದಿದ್ದ ಮಹೇಶ್ ಎಂಬ ಯುವಕ ಭದ್ರತಾ ಸಿಬ್ಬಂದಿ ಮತ್ತು ವಾಹನ ಚಾಲಕನಿಗೆ ತಿಳಿಯದಂತೆ 50 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದಾನೆ. [ಮಂಗಳೂರು : ಎಟಿಎಂನಿಂದ ಹಣ ನಾಪತ್ತೆ]

ಘಟನೆ ನಡೆದದ್ದು ಹೇಗೆ? : ಪ್ರಿಂಗ್ಸ್ ಎಂಬ ಕಂಪನಿಗೆ ಇಂಡಸ್ ಇಂಡ್ ಬ್ಯಾಂಕ್ ಎಟಿಎಂಗೆ ಹಣ ತುಂಬುವ ಗುತ್ತಿಗೆ ನೀಡಲಾಗಿತ್ತು. ಬುಧವಾರ ಮಧ್ಯಾಹ್ನ ಕಂಪನಿಯ ಸಿಬ್ಬಂದಿ ವ್ಯಾನ್ ಚಾಲಕ ಪ್ರಭು, ಭದ್ರತಾ ಸಿಬ್ಬಂದಿ ಮುತ್ತಣ್ಣ ಮತ್ತು ಮಹೇಶ್ ಎಂ.ಜಿ.ರಸ್ತೆಯಲ್ಲಿರುವ ಎಟಿಎಂಗೆ ಹಣ ತುಂಬಿಸಲು ಆಗಮಿಸಿದ್ದರು. [ಬೆಂಗಳೂರು : ಎಟಿಎಂ ಹಣದ ವಾಹನ ಅಪಹರಣ]
ಟಾಟಾ ಸುಮೋದಲ್ಲಿ ತಂದಿದ್ದ 1 ಕೋಟಿ ಹಣದ ಪೈಕಿ ಒಂದು ಬಾಕ್ಸ್ ಅನ್ನು ಹಿಡಿದುಕೊಂಡು ಪ್ರಭು ಮತ್ತು ಮುತ್ತಣ್ಣ ಎಟಿಎಂಗೆ ಹಣ ತುಂಬಿಸಲು ಹೊರಟಿದ್ದಾರೆ. ಆಗ ಮಹೇಶ್ ಶೌಚಾಲಯಕ್ಕೆ ಹೋಗಿ ಬರುವೆ ಎಂದು ಹೇಳಿ ವ್ಯಾನ್ ಬಳಿಯೇ ಉಳಿದಿದ್ದಾನೆ. ಇಬ್ಬರು ಎಟಿಎಂ ವೊಳಗೆ ಹೋಗುತ್ತಿದ್ದಂತೆ ಮಹೇಶ್ ವ್ಯಾನ್‌ನಲ್ಲಿದ್ದ ಇನ್ನೊಂದು ಬಾಕ್ಸ್‌ನಲ್ಲಿದ್ದ 50 ಲಕ್ಷ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. [ಮಿತಿ ಮೀರಿದ ಎಟಿಎಂ ಬಳಕೆ ಕೈ ಕಚ್ಚಲಿದೆ]
ಕೆಲವು ಸಮಯ ಕಳೆದರೂ ಮಹೇಶ್ ಬಾರದಿದ್ದರಿಂದ ಅನುಮಾನಗೊಂಡ ಪ್ರಭು ಮತ್ತು ಮುತ್ತಣ್ಣ ಮಹೇಶ್ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಆಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಅನುಮಾನಗೊಂಡ ಅವರು ವಾಹನವನ್ನು ಪರಿಶೀಲಿಸಿದಾಗ 50 ಲಕ್ಷ ಹಣ ನಾಪತ್ತೆಯಾಗಿರುವುದು ತಿಳಿದುಬಂದಿದೆ. ತಕ್ಷಣ ಅವರು ಈ ಕುರಿತು ಹಲಸೂರು ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.












Click it and Unblock the Notifications