ಬೆಂಗಳೂರು: ಈರುಳ್ಳಿ ಚೀಲದಲ್ಲಿ ಬಟಾಣಿಯಂತೆ ಸಿಕ್ಕಿದ್ದು 4.12 ಕೋಟಿ
ಬೆಂಗಳೂರು, ಜನವರಿ 31: ಕೇರಳ ಮೂಲದ ಮೂವರು ವ್ಯಕ್ತಿಗಳ ಚಲನ-ವಲನ ಅನುಮಾನಾಸ್ಪದವಾಗಿದೆ ಎಂಬ ದೂರು ಬಂದ ಕಾರಣಕ್ಕೆ ಬೆಂಗಳೂರು ಪೊಲೀಸರು ದಾಳಿ ನಡೆಸಿದಾಗ ಆಲೂಗಡ್ಡೆ, ಈರುಳ್ಳಿ ಮಧ್ಯೆ 4.12 ಕೋಟಿ ರುಪಾಯಿಯನ್ನು ಪತ್ತೆ ಹಚ್ಚಿದ್ದಾರೆ. ಮೊಹ್ಮದ್ ಅಫ್ಜಲ್, ಅಬ್ದುಲ್ ನಾಸರ್ ಮತ್ತು ಶಂಶುದ್ದೀನ್ ಬಂಧಿತರು.
ಈ ಮೂವರು ಕೇರಳ ಮೂಲದವರು. ಕೇರಳ ನೋಂದಣಿ ಸಂಖ್ಯೆ ಹೊಂದಿದ್ದ ಮಿನಿ ಲಾರಿಯಲ್ಲಿ ಅಕ್ರಮವಾಗಿ ಹೊಸ ನೋಟುಗಳನ್ನು ಸಾಗಿಸಲು ಯತ್ನಿಸುತ್ತಿದ್ದಾಗ ಪೊಲೀಸರು ಬಲೆಗೆ ಕೆಡವಿದ್ದಾರೆ. ಕೊಡಿಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ವಸತಿ ಕಟ್ಟಡದಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.[ಜೆಟ್ಏರ್ ವೇಸ್ ಟಾಯ್ಲೆಟ್ ನಲ್ಲಿ ಚಿನ್ನದ ಗಂಟು..!]

ಅದನ್ನು ಅನುಸರಿಸಿ ಸೋಮವಾರ ದಾಳಿ ನಡೆಸಿದಾಗ 35 ಚೀಲ ಈರುಳ್ಳಿ ಹಾಗೂ ಹತ್ತು ಚೀಲ ಆಲೂಗಡ್ಡೆ ಮಧ್ಯೆ 4,12,78,300 ರುಪಾಯಿ ಸಿಕ್ಕಿದೆ. ಎಲ್ಲವೂ ಹೊಸ ನೋಟುಗಳಾಗಿದ್ದವು. ಈ ರೀತಿ ತರಕಾರಿ ಮೂಟೆಯಲ್ಲಿ ಹಣ ಸಾಗಿಸಲು ಮುಂದಾಗಿದ್ದ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಇನ್ನಷ್ಟು ವಿಚಾರಣೆ ನಡೆಸಿದಾಗ, ಈ ಮೂವರ ಬಳಿ ಯಾವುದೇ ದಾಖಲೆ ಹಾಗೂ ಸಾಕ್ಷ್ಯ ಇರಲಿಲ್ಲ. ತರಕಾರಿ ಸಾಗಿಸುವ ಸೋಗಿನಲ್ಲಿ ಲೆಕ್ಕಕ್ಕೆ ಸಿಗದ ಹಣವನ್ನು ಕೇರಳಕ್ಕೆ ಒಯ್ಯುವವರಿದ್ದರು. ಈ ಸಂಬಂಧ ದೂರು ದಾಖಲಾಗಿದ್ದು, ಈ ಹಣ ಯಾರಿಗೆ ಸೇರಿದ್ದು, ಕೇರಳದಲ್ಲಿ ಯಾರಿಗೆ ಈ ಹಣ ತಲುಪಿಸಲು ಯೋಜನೆ ಹಾಕಿಕೊಂಡಿದ್ದರು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಒನ್ಇಂಡಿಯಾ ನ್ಯೂಸ್












Click it and Unblock the Notifications