ಮೂಢನಂಬಿಕೆಯ ಕಾವೇರಿ ಬಂಗಲೆಗೆ ಸಿಎಂ ಶಿಫ್ಟ್!
ಬೆಂಗಳೂರು, ನ. 15 : ಮೂಢನಂಬಿಕೆಗಳ ನಿಷೇಧಕ್ಕಾಗಿ ಕಾನೂನು ಜಾರಿಗೆ ತರಲು ಹೊರಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಿವಾಸವನ್ನು ಕಾವೇರಿ ಬಂಗಲೆಗೆ ಬದಲಾವಣೆ ಮಾಡಲು ನಿರ್ಧರಿಸಿದ್ದಾರೆ. ಕಾವೇರಿಗೆ ಬಂದ ಮುಖ್ಯಮಂತ್ರಿಗಳು ಹೆಚ್ಚು ದಿನ ಅಧಿಕಾರದಲ್ಲಿ ಇರುವುದಿಲ್ಲ ಎಂಬ ಮೂಢನಂಬಿಕೆಯನ್ನು ಸಿದ್ಧರಾಮಯ್ಯ ಸುಳ್ಳು ಮಾಡುತ್ತಾರೆಯೇ? ಎಂಬುದು ಸದ್ಯದ ಪ್ರಶ್ನೆ.
ಗುರುವಾರ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶೀಘ್ರದಲ್ಲೇ ತಮ್ಮ ಅಧಿಕೃತ ನಿವಾಸವನ್ನು 'ಕಾವೇರಿ'ಗೆ ಬದಲಿಸುವುದಾಗಿ ಹೇಳಿದರು. ಅಲ್ಲಿನ ನವೀಕರಣ ಕೆಲಸಗಳು ಮುಗಿದಿವೆ. ಕೆಲವೇ ದಿನಗಳಲ್ಲಿ ಕಾವೇರಿಗೆ ತಮ್ಮ ವಾಸ್ತವ್ಯ ಬದಲಾಯಿಸಲಾಗುವುದು ಎಂದು ತಿಳಿಸಿದರು.

ಪ್ರಸ್ತುತ ವಾಸ್ತವ್ಯವಿರುವ ಕುಮಾರ ಪಾರ್ಕ್ ನ ಕೃಷ್ಣಾ ನಿವಾಸದಲ್ಲಿ ಸ್ಥಳಾವಕಾಶದ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ತಮ್ಮ ವಾಸ್ತವ್ಯವನ್ನು ಸದ್ಯದಲ್ಲೇ ಕಾವೇರಿಗೆ ಬದಲಿಸಲಿದ್ದೇನೆ ಎಂದು ಹೇಳಿದರು. 'ಕಾವೇರಿ'ಬಂಗಲೆ ದುರಸ್ತಿ ಕಾಮಗಾರಿಗಾಗಿ ಸಿಎಂ 1 ಕೋಟಿ ರೂ. ಖರ್ಚು ಮಾಡಿದ್ದಾರೆ, ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪವನ್ನು ಸಿದ್ದರಾಮಯ್ಯ ತಳ್ಳಿಹಾಕಿದರು.
ಸಿದ್ದರಾಮಯ್ಯ ಆಗಮನಕ್ಕಾಗಿ ಕಾವೇರಿ ಬಂಗಲೆಯನ್ನು ಲೋಕೋಪಯೋಗಿ ಇಲಾಖೆ 1 ಕೋಟಿ ರೂ.ಗಳ ವೆಚ್ಚದಲ್ಲಿ ನವೀಕರಣ ಮಾಡಿದೆ. ದೇವರ ಕೋಣೆಯನ್ನು ವಾಸ್ತು ಪ್ರಕಾರವಾಗಿ ಬದಲಾವಣೆ ಮಾಡಲಾಗಿದೆ. ಬಂಗಲೆಯಲ್ಲಿರುವ ಐದು ಶೌಚಾಲಯಗಳನ್ನು ನವೀಕರಣ ಮಾಡಲಾಗಿದೆ. ಬೆಳಗಾವಿಯ ಚಳಿಗಾಲದ ಅಧಿವೇಶನದ ನಂತರ ಸಿದ್ದರಾಮಯ್ಯ ಕಾವೇರಿಗೆ ಆಗಮಿಸಲಿದ್ದಾರೆ.
ಕಾವೇರಿ ಬಂಗಲೆಯಲ್ಲಿ ಇಷ್ಟುದಿನ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಸವಾಗಿದ್ದರು. ಚುನಾವಣೆ ಮುಗಿದು ಹೊಸ ಮುಖ್ಯಮಂತ್ರಿಗಳು ಆಯ್ಕೆಯಾದ ನಂತರ ನಿವಾಸ ಸ್ಥಳಾಂತರ ಮಾಡಲು ತಮಗೆ ಆರು ತಿಂಗಳ ಕಾಲಾವಕಾಶ ಬೇಕೆಂದು ಶೆಟ್ಟರ್ ಮನವಿ ಮಾಡಿದ್ದರು. ಸದ್ಯ ಅವರು ನಿವಾಸ ಖಾಲಿ ಮಾಡಿದ್ದು, ಸಿದ್ದರಾಮಯ್ಯ ಅಲ್ಲಿಗೆ ಆಗಮಿಸಲಿದ್ದಾರೆ. (ಸಿಎಂ ಸಿದ್ದುಗಾಗಿ ಕಾವೇರಿ ಬಿಡುತ್ತಾರೆ ಶೆಟ್ಟರ್)
ಕಾವೇರಿ ಸಮಸ್ಯೆ : ಸಿಎಂ ಸಿದ್ದರಾಮಯ್ಯ ಮೂಢನಂಬಿಕೆಗಳಿಗೆಲ್ಲಾ ಹೆದರುವುದಿಲ್ಲ. ಆದರೆ, ರಾಜಕೀಯ ವಲಯಗಳ ಮೂಢನಂಬಿಕೆ ಪೈಕಿ ಕೃಷ್ಣಾ ಪಕ್ಕದಲ್ಲಿರುವ 'ಕಾವೇರಿ' ಬಂಗಲೆಯಲ್ಲಿ ವಾಸ್ತವ್ಯ ಹೂಡಿದ ಸಿಎಂಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆ ಬೆಳೆದು ಬಂದಿದೆ.
ಇದಕ್ಕೆ ಸಮರ್ಥನೆ ನೀಡುವಂತೆ ಮುಖ್ಯಮಂತ್ರಿಯಾಗಿ ಕಾವೇರಿಯಲ್ಲಿ ವಾಸಿಸುತ್ತಿದ್ದ ವೀರೇಂದ್ರ ಪಾಟೀಲ್, ಬಂಗಾರಪ್ಪ ಅವಧಿಗೆ ಮುನ್ನ ಅಧಿಕಾರ ಕಳೆದುಕೊಂಡಿದ್ದರು. ಜಗದೀಶ್ ಶೆಟ್ಟರ್ ಸಹ ಸಿಎಂ ಸ್ಥಾನದಿಂದ ಕೆಳಗಿಳಿಯುವಾಗ ಇದೇ ಬಂಗಲೆಯಲ್ಲಿದ್ದರು. ಸಿದ್ದರಾಮಯ್ಯ ಸಹ ಡಿಸಿಎಂ ಆಗಿದ್ದಾಗ ಕಾವೇರಿಯಲ್ಲಿ ವಾಸ್ತವ್ಯ ಇದ್ದಾಗಲೇ ಅಧಿಕಾರ ಕಳೆದುಕೊಂಡಿದ್ದರು.












Click it and Unblock the Notifications