ಮುನಿರತ್ನ ಶಾಸಕತ್ವ ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಮನವಿ: ಮುನಿರಾಜು
ಬೆಂಗಳೂರು, ಜೂನ್ 5: ಮುನಿರತ್ನ ಶಾಸಕತ್ವವನ್ನು ಅನರ್ಹಗೊಳಿಸುವಂತೆ ರಾಜರಾಜೇಶ್ವರಿನಗರ ಬಿಜೆಪಿ ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜು ಸ್ಪೀಕರ್‌ಗೆ ಮನವಿ ಮಾಡಿದ್ದಾರೆ.
ಮಂಗಳವಾರ ತುಳಸಿ ಮುನಿರಾಜು, ಬಿಬಿಎಂಪಿ ಸದಸ್ಯೆ ಮಮತಾ ವಾಸುದೇವ್, ಶಿವಣ್ಣ, ರಾಕೇಶ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಈ ವಿಷಯ ತಿಳಿಸಿದ ಅವರು, ರಾಜರಾಜೇಶ್ವರಿನಗರದಲ್ಲಿ ಚುನಾವಣಾ ಅಕ್ರಮದ ತಲ್ಲಣ ಮೂಡಿತ್ತು.
ನಕಲಿ ಛಾಪಾ ಕಾಗದ ಹಗರಣದ ಸುದ್ದಿ ಮಾದರಿಯಲ್ಲಿ ಮತದಾರರ ಚೀಟಿ ಮಾಡಲಾಗಿತ್ತು. ಅಲ್ಲದೆ ಸಾವಿರಾರು ಓಟರ್ ಐಡಿ ಸಂಗ್ರಹ ಮಾಡಲಾಗಿತ್ತು. ಇದೆಲ್ಲದಕ್ಕೆ ಕ್ಷೇತ್ರದ ಶಾಸಕ ಮುನಿರತ್ನ ಅವರೇ ಕಾರಣ. ಕ್ಷೇತ್ರದ ಶಾಸಕರ ಸ್ಥಾನ ಅನರ್ಹಗೊಳಿಸುವಂತೆ ಸ್ಪೀಕರ್ ಅವರಲ್ಲಿ ಮನವಿ ಮಾಡುತ್ತೇನೆ ಎಂದರು.

ಮತದಾರರ ಚೀಟಿ ಪತ್ತೆ ವಿಚಾರದಲ್ಲಿ ಯಾವುದೇ ತನಿಖೆ ನಡೆಸದೆ ಚುನಾವಣೆಯನ್ನು ನಡೆಸಲಾಯಿತು. 9 ಸಾವಿರ ಅಕ್ರಮ ಮತದಾರ ಚೀಟಿ ತೆಗೆದುಕೊಂಡು ಹೋಗಿದ್ದರೂ, ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ 420 ಪ್ರಕಟಣ ದಾಖಲಿಸಿದ್ದರೂ ಕೂಡ ಯಾರನ್ನೂ ಬಂಧಿಸಿಲ್ಲ.
ಚುನಾವಣಾ ಅಕ್ರಮ ನಡೆದ ಬಳಿಕ, ನನ್ನನ್ನೂ ಸೇರಿದಂತೆ ಬಿಜೆಪಿ ಮುಖಂಡರ ಮೇಲೆ ಜಾತಿ ನಿಂದನೆ ದೂರು ದಾಖಲಿಸಲಾಗಿದೆ. ಒಂದು ರೀತಿಯ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದರು.
ಜನಾದೇಶ ನಮ್ಮ ಪರವಾಗಿದೆ. ಅತಿ ಹೆಚ್ಚು ಜನ ಅವರ ವಿರುದ್ಧವಾಗಿ ತನಗೆ ಮತ್ತು ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ.ಅವರ ಬೆಂಬಲಿಗರು ಎರಡು ಬಾರಿ ಮತದಾನ ಮಾಡಿರೋದಾಗಿ ಹೇಳಿಕೊಂಡಿದ್ದಾರೆ.ಈ ಪ್ರಕರಣವನ್ನ ಇಲ್ಲಿಗೆ ಬಿಡದೆ, ಸುಪ್ರೀಂ ಕೋರ್ಟ್ ವರೆಗೂ ತೆಗೆದುಕೊಂಡು ಹೋಗುತ್ತೇನೆ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications