Video Viral: ನಟ ದರ್ಶನ್ ಇರುವ ಜೈಲಲ್ಲಿ ಖೈದಿಯ ಅದ್ಧೂರಿ ಬರ್ತ್‌ಡೇ ಪಾರ್ಟಿ: ವ್ಯಾಪಕ ಜನಾಕ್ರೋಶ
ಬೆಂಗಳೂರು, ಅಕ್ಟೋಬರ್ 06: ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿನ ಅಕ್ರಮಗಳು ಆಗಾಗ ಸದ್ದು ಮಾಡುತ್ತಲೇ ಇವೆ. ಇಲ್ಲಿ ಹಣವಂತರಿಗೆ, ಪ್ರಭಾವಿ ಖೈದಿಗಳಿಗೆ ಮನೆ, ಐಶಾರಾಮಿ ಹೋಟೆಲ್‌ಗಳಂತೆ ಸಕಲ ವ್ಯವಸ್ಥೆಗಳು ಸಿಗುತ್ತವೆ ಎಂಬ ಆರೋಪ ಪರಪ್ಪನ ಅಗ್ರಹಾರ ಜೈಲಿನ ಮೇಲಿದೆ. ಈ ಮಧ್ಯೆ ವಿಚಾರಣಾಧೀನ ಕೈದಿಯಾಗಿರುವ "ರೌಡಿ-ಶೀಟರ್' ಜೈಲಿನಲ್ಲಿ ಅದ್ಧೂರಿ ಹುಟ್ಟು ಹಬ್ಬ ಆಚರಿಸಿಕೊಂಡ ವಿಡಿಯೋ ವೈರಲ್ ಆಗಿದೆ. ಜನಾಕ್ರೋಶ ವ್ಯಕ್ತವಾಗಿದ್ದು, ಜೈಲಾಧಿಕಾರಿಗಳು ನಿಯಮ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ರೌಡಿ ಶೀಟರ್ ಗುಬ್ಬಚ್ಚಿ ಸೀನ ಕೊಲೆ ಆರೋಪದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾನೆ. ಆತನ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ, ಸೇಬಿನ ಹಾರ ಸಮೇತವಾಗಿ ಆಚರಿಸಲಾಗಿದೆ. ಇದನ್ನು ಜೈಲಿನ ಒಳಗಿದ್ದ ಮತ್ತೊಬ್ಬ ಖೈದಿ ವಿಡಿಯೋ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಇದೇ ಜೈಲಿನಲ್ಲಿರುವ ನಟ ದರ್ಶನ್ ಗೆ ಮೂಲಸೌಕರ್ಯ ಸಿಗುತ್ತಿಲ್ಲ ಎನ್ನಲಾಗಿದೆ. ಮತ್ತೊಂದು ಕಡೆ ಖೈದಿ ನಿರ್ಭೀತಿಯಿಂದ ಜನ್ಮದಿನಾಚದರಣೆ ಆಚರಿಸಿಕೊಂಡಿರುವುದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ವೈರಲ್ ಆಗುತ್ತಿರುವ ಈ 50 ಸೆಕೆಂಡುಗಳ ವಿಡಿಯೋದಲ್ಲಿ ವಿಚಾರಣಾಧೀನ ಖೈದಿ ಶ್ರೀನಿವಾಸ ಅಲಿಯಾಸ್ ಗುಬ್ಬಚ್ಚಿ ಸೀನ ದೊಡ್ಡ ಕೇಕ್ ಅನ್ನು ಚಾಕುವಿನಿಂದ ಕತ್ತರಿಸುತ್ತಿರುವುದು ಕಾಣಿಸುತ್ತದೆ. ಕೇಕ್ ಕತ್ತರಿಸುತ್ತಿದ್ದಂತೆ ಸಹ ಖೈದಿಗಳ ಗುಂಪು ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆಯುವುದನ್ನು ನೋಡಬಹುದು. ಅಷ್ಟೇ ಅಲ್ಲಿ ಸೀನ ಸೇಬಿನಿಂದ ಮಾಡಿದ ಹಾರ ಧರಿಸಿದ್ದಾನೆ. ಇದೆಲ್ಲವು ಜೈಲಿನ ಒಳಗೆ ನಡೆದಿದೆ. ಜೈಲಿನ ರಾಜಾತಿಥ್ಯ ಸಿಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಜೈಲಿನ ಹೊರಗು ಮತ್ತು ಒಳಗು ಖೈದಿಗಳಿಗೆ ಅಂತಹ ವ್ಯತ್ಯಾಸವೇನು ಇಲ್ಲವೆಂಬ ನಂಬಿಕೆ ಜನರಿಗೆ ಮೂಡಲು ಇಂತಹ ಘಟನೆಗಳು ಸಾಕ್ಷಿಯಾದಂತಿದೆ.
ಖೈದಿಯ ಜನ್ಮದಿನ ಸಂಭ್ರಮವು ಮೇಲ್ವಿಚಾರಣೆ ಮತ್ತು ಜೈಲು ನಿಯಮಗಳ ಉಲ್ಲಂಘನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕಳವಳವನ್ನು ಹುಟ್ಟು ಹಾಕಿದೆ. ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಪ್ರಪ್ರಥಮವಾಗಿ ಜೈಲಿನ ಒಳಗೆ ಮೊಬೈಲ್ ಫೋನ್‌ಗಳನ್ನು ಅನುಮತಿಸದಂತೆ ನಿಯಮವೇ ಇದೆ. ಹೀಗಿದ್ದಾಗ ಮೊಬೈಲ್ ಬಳಕೆ ಜೈಲಿನೊಳಗೆ ಆಗುತ್ತಿದೆ. ಅಂಥದರಲ್ಲಿ ಜೈಲಿನಲ್ಲಿ ಭಯವಿಲ್ಲದೇ ವಿಜೃಂಭಣೆಯಿಂದ ಜನ್ಮದಿನ ಆಚರಿಸಲಾಗಿದೆ. ಇದರ ಹಿಂದೆ ಜೈಲಾಧಿಕಾರಿಗಳೇ ಇದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಇದೇ ವರ್ಷ ಜನವರಿಯಲ್ಲಿ ಬೆಂಗಳೂರಿನ ದೊಡ್ಡ ಬೊಮ್ಮಸಂದ್ರದಲ್ಲಿ ಈ ಕೈದಿ ಸೀನ ತನ್ನ ಪ್ರತಿಸ್ಪರ್ಧಿ ವೆಂಕಟೇಶನನ್ನು ಕೊಂದ ಆರೋಪ ಹೊತ್ತಿದ್ದಾನೆ. ಪೊಲೀಸರು ಆತನ ಕಾಲಿಗೆ ಗುಂಡು ಹೊಡೆದು ಫೆಬ್ರವರಿಯಲ್ಲಿ ಬಂಧಿಸಿದ್ದರು. ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇದೆಲ್ಲ ನೋಡಿದರೆ ರಾಜ್ಯದಲ್ಲಿ ಆಡಳಿತ ಹಳ್ಳ ಹಿಡಿದಿದೆ. ಗುತ್ತಿಗೆದಾರರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸರ್ಕಾರಿ ಹುದ್ದೆಗಳ ನೇಮಕಾತಿ ಆಗುತ್ತಿಲ್ಲ. ರಸ್ತೆಗುಂಡಿ ಸಮಸ್ಯೆ, ನಗರ ನಾಗರಿಕ ಸಮಸ್ಯೆ ಉಲ್ಬಣಿಸಿವೆ. ಮುಖ್ಯವಾಗಿ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ ನಾಯಕರು ಜೈಲಿನಲ್ಲಿದ್ದಾರೆ. ಈ ಮಧ್ಯೆ ಇಂತಹ ಬೆಳವಣಿಗೆ ನಡೆದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಇದೆಲ್ಲವು ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಪಾಲನೆ ಆಗುತ್ತಿದೆ ಎಂಬ ಸಂಶಯ ಶುರುವಾಗಿದೆ.












Click it and Unblock the Notifications