ರೌಡಿ ಲಕ್ಷ್ಮಣ ಹತ್ಯೆಯಾಗಿದ್ದು ತನ್ನ ಹುಡುಗ ರೂಪೇಶ್‌ನಿಂದಲೇ!
ಬೆಂಗಳೂರು, ಮಾರ್ಚ್ 12 : ಬೆಂಗಳೂರು ನಗರದ ಶ್ರೀಮಂತ ರೌಡಿ, ಸುಮಾರು 600 ಕೋಟಿ ಆಸ್ತಿಯ ಒಡೆಯ ಲಕ್ಷ್ಮಣ ಹತ್ಯೆ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈಗಾಗಲೇ ಸಿಸಿಬಿ 7 ಆರೋಪಿಗಳನ್ನು ಬಂಧಿಸಿದ್ದು, ಎಲ್ಲರೂ ಪೊಲೀಸರ ವಶದಲ್ಲಿದ್ದಾರೆ.
ಲಕ್ಷ್ಮಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ರೂಪೇಶ (25), ಕು.ವರ್ಷಿಣಿ (21), ದೇವರಾಜ (24), ವರುಣ್ ಕುಮಾರ್ (24), ಮಧು ಕುಮಾರ್ (21), ಅಲೋಕ (24) ಎಂಬ ಆರೋಪಿಗಳನ್ನು ಬಂಧಿಸಿದ್ದು, ಎಲ್ಲರೂ ಪೊಲೀಸರು ವಶದಲ್ಲಿದ್ದಾರೆ.
ಸಿಸಿಬಿ ಪೊಲೀಸರು ನೀಡಿರುವ ಮಾಹಿತಿ ಅನ್ವಯ ರೂಪೇಶ್ ಈ ಪ್ರಕರಣದ ಕಿಂಗ್ ಪಿನ್. ಒಂದು ಕಾಲದಲ್ಲಿ ಲಕ್ಷ್ಮಣನ ಕಡೆಯ ಹುಡುಗನಾಗಿದ್ದ ರೂಪೇಶ್ ವರ್ಷಿಣಿ ವಿಚಾರಕ್ಕೆ ಆತನ ವಿರುದ್ಧ ಗರಂ ಆಗಿದ್ದ. ಅದಕ್ಕಾಗಿಯೇ ಲಕ್ಷ್ಮಣನ ಹತ್ಯೆಗೆ ಸಂಚು ರೂಪಿಸಿದ್ದ.
ಮಾರ್ಚ್ 7ರಂದು ರೌಡಿ ಲಕ್ಷ್ಮಣನನ್ನು ಇಸ್ಕಾನ್ ದೇವಾಲಯದ ಬಳಿ ಹಾಡಹಗಲೇ 12 ಗಂಟೆ ಸುಮಾರಿಗೆ ಹತ್ಯೆ ಮಾಡಲಾಗಿತ್ತು. ಲಕ್ಷ್ಮಣ ಕೊಲೆ ಹಿಂದೆ ಹೆಣ್ಣಿನ ಪಾತ್ರ ಇದೆ ಎಂದು ಮೊದಲ ದಿನವೇ ಲಕ್ಷ್ಮಣನ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ವರ್ಷಿಣಿ ಬಂಧನದ ಬಳಿಕ ಈ ವಿಚಾರ ನಿಜವಾಗಿದೆ.

ಪೊಲೀಸರಿಗೆ ಮಾಹಿತಿ
ರೌಡಿ ಲಕ್ಷ್ಮಣನ ಹತ್ಯೆ ದಿನ ಅವರಿಗೆ ಒಂದು ವಾಟ್ಸಪ್ ಕಾಲ್ ಬಂದಿತ್ತು ಎಂದು ಆತನ ಪತ್ನಿ ಚೈತ್ರಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮನೆಯಲ್ಲಿದ್ದ ಲಕ್ಷ್ಮಣ ಮನೆಯಿಂದ ಕೆಳಕ್ಕೆ ಹೋಗಿ ಆ ಕಾಲ್ ರಿಸೀವ್ ಮಾಡಿದ್ದರು. ಕೊಲೆಯಲ್ಲಿ ಆಕೆಯ ಪಾತ್ರ ಇರಬಹುದು ಎಂದು ಲಕ್ಷ್ಮಣನ ಪತ್ನಿ ದೂರು ನೀಡಿದ್ದರು. ಆ ಕಾಲ್ ಮಾಡಿದ ವರ್ಷಿಣಿಯನ್ನು ಪೊಲೀಸರು ಇಂದು ಬಂಧಿಸಿದ್ದಾರೆ.

ಎಲ್ಲವನ್ನೂ ಮುಗಿಸಿ ಬಿಟ್ಟಳು
'ನಮ್ಮ ಮನೆಯಲ್ಲಿ ವರ್ಷಿಣಿ ವಿಚಾರಕ್ಕೆ ಯಾವಾಗಲೂ ಜಗಳವಾಗುತ್ತಿತ್ತು. ಆಕೆ ಇಲ್ಲಿಲ್ಲ ಲಂಡನ್‌ಗೆ ಹೋಗಿದ್ದಾಳೆ ಎಂದು ಇವರು ಹೇಳಿದ್ದರು. ನಾನು ಅದನ್ನು ನಂಬಿದ್ದೆ. ಆದರೆ, ಇಲ್ಲೇ ಇದ್ದುಕೊಂಡು ಆಕೆ ಎಲ್ಲವನ್ನು ಮುಗಿಸಿಬಿಟ್ಟಳು. ಅಕ್ಕ-ಅಂಕಲ್ ಎಂದು ಕರೆಯುತ್ತಲೇ ಎಲ್ಲವನ್ನೂ ಮುಗಿಸಿದಳು' ಎಂದು ಚೈತ್ರಾ ಹೇಳಿದ್ದಾರೆ.

ರೂಪೇಶ್‌ಗೆ ಥಳಿತ
ಹತ್ಯೆಯ ಕಿಂಗ್ ಪಿನ್ ರೂಪೇಶ್ ಲಕ್ಷ್ಮಣನ ಕಡೆಯ ಹುಡುಗ. ಆದರೆ, ವರ್ಷಿಣಿ ವಿಚಾರಕ್ಕೆ ಇಬ್ಬರ ನಡುವೆ ವೈ ಮನಸ್ಸು ಉಂಟಾಗಿತ್ತು. ವರ್ಷಿಣಿಯಿಂದ ದೂರವಾಗುವಂತೆ ರೂಪೇಶ್‌ಗೆ ವಾರ್ನ್ ಮಾಡಿದ್ದ ಲಕ್ಷ್ಮಣ 'ದಿ ಕ್ಲಬ್'ಗೆ ಕರೆಸಿಕೊಂಡು ಆತನ ಮೇಲೆ ಹಲ್ಲೆ ಮಾಡಿದ್ದ. ಇನ್ನೊಮ್ಮೆ ವರ್ಷಿಣಿ ಜೊತೆ ನೋಡಿದರೆ ಹೆಣ ಆಗ್ತಿಯಾ ಎಂದು ಬೆದರಿಕೆ ಹಾಕಿದ್ದ.

ಹತ್ಯೆಗೆ ಸಾಥ್ ಕೊಟ್ಟರು
ರೌಡಿ ಲಕ್ಷ್ಮಣ 2005ರಲ್ಲಿ ನಡೆದ ಮಚ್ಚು ಮಂಜಾ, 2010ರಲ್ಲಿ ನಡೆದ ಕುರಿ ಕೃಷ್ಣನ ಹತ್ಯೆಯಲ್ಲಿ ಭಾಗಿಯಾಗಿದ್ದ. ಆದ್ದರಿಂದ, ಇವರ ಕಡೆ ಹುಡುಗರ ಸಂಪರ್ಕ ಸಾಧಿಸಿದ ರೂಪೇಶ್ ಕ್ಯಾಟ್ ರಾಜ, ಅಲೋಕ್ ಮುಂತಾದವರ ಸಹಕಾರ ಪಡೆದು ಲಕ್ಷ್ಮಣನನ್ನು ಹತ್ಯೆ ಮಾಡಿದ್ದಾರೆ.












Click it and Unblock the Notifications