Rohini Sindhuri vs D Roopa: ನೋಟಿಸ್‌ಗೂ ಡೋಂಟ್ ಕೇರ್, ಮತ್ತೆ ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ಪೋಸ್ಟ್!
'ಸರ್ಕಾರಿ ವಸ್ತು 50 ರೂಪಾಯಿ ಇರಲಿ, 50 ಕೋಟಿ ರೂಪಾಯಿ ಇರಲಿ, ತಪ್ಪು ತಪ್ಪೇ. 1,000 ರೂಪಾಯಿ ಲಂಚ ತೆಗೆದುಕೊಂಡವರು ಕೂಡ ಲೋಕಾಯುಕ್ತ ವಿಚಾರಣೆಗೆ ಒಳಗಾಗಿದ್ದಾರೆ'
ಬೆಂಗಳೂರು, ಫೆಬ್ರವರಿ. 27: ವಾರದಿಂದ ಚರ್ಚೆಯಲ್ಲಿರುವ ಐಎಎಸ್ ಅಧಿಕಾರಿ ಮತ್ತು ಐಪಿಎಸ್ ಅಧಿಕಾರಿಗಳ ಕಿತ್ತಾಟ ಇನ್ನು ನಿಂತಂತೆ ಕಾಣುತ್ತಿಲ್ಲ. ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ವಿಚಾರದಲ್ಲಿ ಸರ್ಕಾರ ಕೂಡ ಇಬ್ಬರಿಗೂ ನೋಟಿಸ್ ಜಾರಿ ಮಾಡಿ ಸುಮ್ಮನಿರುವಂತೆ ಆದೇಶಿಸಿತ್ತು. ಆದರೆ, ಈ ನೋಟಿಸ್‌ಗೂ ಐಪಿಎಸ್ ಅಧಿಕಾರಿ ಡಿ ರೂಪ ಮೌದ್ಗಿಲ್ ಡೋಂಟ್ ಕೇರ್ ಎಂದಿದ್ದಾರೆ.
ಭಾನುವಾರ ಮತ್ತೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಡಿ ರೂಪಾ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಫೋಸ್ಟ್ ಹಾಕಿದ್ದಾರೆ. ಸರ್ಕಾರಿ ಸಂಸ್ಥೆ ಅತಿಥಿ ಗೃಹದಲ್ಲಿ 'ಸಾಮಾನುಗಳು ನಾಪತ್ತೆ'ಯಾಗಿರುವ ಬಗ್ಗೆ ವರದಿಯಿರುವ ಪತ್ರಿಕೆಯೊಂದರ ವರದಿ ಹಂಚಿಕೊಂಡಿರುವ ಅವರು ರೋಹಿಣಿ ಸಿಂಧೂರಿ ಅವರು ಸರ್ಕಾರಿ ಸಾಮಾನುಗಳನ್ನು ತೆಗೆದುಕೊಂಡು ಹೋಗಿದ್ದರ ಮೇಲೆ ಕ್ರಮ ತೆಗೆದುಕೊಳ್ಳಲಾಗಯಿತೆ ಎಂದು ಪ್ರಶ್ನಿಸಿದ್ದಾರೆ.

"Sharing the article in public domain... ಮೈಸೂರು ATI (ಆಡಳಿತ ತರಬೇತಿ ಸಂಸ್ಥೆ) ನಿಂದಾ ರೋಹಿಣಿ ಸಿಂಧೂರಿ ಅವರು ಸರ್ಕಾರಿ ಸಾಮಾನುಗಳನ್ನು ತೆಗೆದುಕೊಂಡು ಹೋದದ್ದು, ಅವುಗಳು ಡಿಸಿ ಮನೆಯಲ್ಲಿ ಕೂಡ ಇಲ್ಲ, ಎಲ್ಲಿ ಹೋದವು ಎಂದಾಗಿ ಸಿಂಧೂರಿ ಅವರಿಗೆ ನೊಟೀಸ್ ಜಾರಿ ಮಾಡಿದ್ದು ವರದಿಯಾಗಿದೆ. ಇದರ ಮೇಲೆ ಕ್ರಮ ಆಯಿತೇ..?" ಎಂದು ಪ್ರಶ್ನಿಸಿದ್ದಾರೆ.
ಮುಂದುವರಿದು, "ಸರ್ಕಾರಿ ವಸ್ತು 50 ರೂಪಾಯಿ ಇರಲಿ, 50 ಕೋಟಿ ರೂಪಾಯಿ ಇರಲಿ, ತಪ್ಪು ತಪ್ಪೇ. 1,000 ರೂಪಾಯಿ ಲಂಚ ತೆಗೆದುಕೊಂಡವರು ಕೂಡ ಲೋಕಾಯುಕ್ತ ವಿಚಾರಣೆಗೆ ಒಳಗಾಗಿದ್ದಾರೆ. ಕಾನೂನು ಜಿಲ್ಲಾಧಿಕಾರಿಗೂ, ಗುಮಸ್ತನಿಗೂ ಒಂದೇ" ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಕಿಡಿ ಕಾರಿದ್ದಾರೆ.
ವರದಿಯಲ್ಲಿ ಐಎಎಸ್ ಅಧಿಕಾರಿಯೊಬ್ಬರು ಅಲ್ಲಿಯೇ ವಾಸ್ತವ್ಯ ಹೂಡಿದ್ದ ಸರ್ಕಾರಿ ಸಂಸ್ಥೆ ಅತಿಥಿ ಗೃಹದಲ್ಲಿ 'ಸಾಮಾನುಗಳು ನಾಪತ್ತೆ'ಯಾಗಿದೆ ಎಂದು ಎಟಿಐ ಮಹಾನಿರ್ದೇಶಕರ ನಿರ್ದೇಶನದ ಮೇರೆಗೆ ಮೈಸೂರು ಮೂಲದ ಆಡಳಿತ ತರಬೇತಿ ಸಂಸ್ಥೆಯ (ಎಟಿಐ) ಜಂಟಿ ನಿರ್ದೇಶಕರು ನವೆಂಬರ್ 30 ರಂದು ಈ ಸಂಬಂಧ ಮೈಸೂರಿನ ಜಿಲ್ಲಾಧಿಕಾರಿ (ಡಿಸಿ) ಅವರಿಗೆ ಪತ್ರ ಬರೆದಿದ್ದಾರೆ.

ಎಟಿಐ ಜಂಟಿ ನಿರ್ದೇಶಕಿ (ಆಡಳಿತ) ಎಸ್ ಪೂವಿತಾ ಸಹಿ ಮಾಡಿರುವ ಪತ್ರದಲ್ಲಿ ಮೈಸೂರಿನ ಹಿಂದಿನ ಡಿಸಿ ರೋಹಿಣಿ ಸಿಂಧೂರಿ ದಾಸರಿ ಅವರು ಅಕ್ಟೋಬರ್ 2 ರಿಂದ ನವೆಂಬರ್ 14, 2020 ರವರೆಗೆ ಎಟಿಐ ಅತಿಥಿ ಗೃಹದಲ್ಲಿ ತಂಗಿದ್ದರು. ಇದಾದ ಬಳಿಕ ಎಟಿಐಯಲ್ಲಿ ವಿವಿಧ ರೀತಿಯ 20 ವಸ್ತುಗಳು ಕಾಣೆಯಾಗಿವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ ಎಂದು ವರದಿಯಲ್ಲಿದೆ. ಇದನ್ನೇ ಪೋಸ್ಟ್ ಮಾಡಿರುವ ರೂಪಾ ಮತ್ತೆ ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾರಿದ್ದಾರೆ.
ಇಬ್ಬರ ಜಗಳ ತಾರಕಕ್ಕೇ ಏರಿದ ಕಾರಣ ಮುಜುಗರಕ್ಕೆ ಒಳಗಾಗಿದ್ದ ರಾಜ್ಯ ಸರ್ಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಇಬ್ಬರಿಗೂ ನೋಟಿಸ್ ಜಾರಿ ಮಾಡಿತ್ತು. ಇನ್ನೊಬ್ಬ ಸರ್ಕಾರಿ ಅಧಿಕಾರಿಯ ವಿರುದ್ಧ ಆರೋಪ ಮಾಡಲು ಮಾಧ್ಯಮಗಳನ್ನು ಬಳಕೆ ಮಾಡಿದ್ದೀರಿ. ನಿಮ್ಮ ನಡವಳಿಕೆಯಿಂದ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟಾಗಿದೆ. ನಿಮ್ಮ ವರ್ತನೆ ಅಖಿಲ ಭಾರತೀಯ ಸೇವೆಗಳ ಉಲ್ಲಂಘನೆಯಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು.












Click it and Unblock the Notifications