Republic Day 2026: ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯ ಮಟ್ಟದ ಸಮಾರಂಭ: ಸಾರ್ವಜನಿಕರಿಗೆ ಇ-ಪಾಸ್ ವ್ಯವಸ್ಥೆ
Republic Day 2026: ದೇಶಾದ್ಯಂದ ಜನವರಿ 26ರಂದು 77ನೇ ಗಣರಾಜ್ಯೋತ್ಸವ ಆಚರಣೆಗೆ ಭರ್ಜರಿ ಸಿದ್ಧತೆ ನಡೆದಿದೆ. ಹಾಗೆಯೇ ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಭಾರೀ ಸಿದ್ಧತೆ ನಡೆಸಲಾಗಿದ್ದು, ರಾಜ್ಯಮಟ್ಟದ ಸಮಾರಂಭಕ್ಕೆ ನಗರದ ಮಾಣಿಕ್ ಷಾ ಪರೇಡ್ ಮೈದಾನ ಸಜ್ಜಾಗಿದೆ. ಈ ವೇಳೆ ಸಾರ್ವಜನಿಕರ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಇ-ಪಾಸ್ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಹಾಗಾದ್ರೆ, ಇದನ್ನು ಪಡೆಯುವುದೇಗೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
2,000 ಇ-ಪಾಸ್ ವ್ಯವಸ್ಥೆ: ಗಣರಾಜ್ಯೋತ್ಸವ ದಿನಾಚರಣೆಯ ರಾಜ್ಯಮಟ್ಟದ ಸಮಾರಂಭಕ್ಕೆ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನ ಸಜ್ಜಾಗಿದೆ. ಈ ವೇಳೆ ಸಾರ್ವಜನಿಕರ ಪ್ರವೇಶಕ್ಕೆ ಆನ್‌ಲೈನ್ ಮೂಲಕ 2,000 ಇ-ಪಾಸ್ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಸಾರ್ವಜನಿಕರಿಗೆ ಪ್ರಮುಖ ಮಾಹಿತಿ: 77ನೇ ಗಣರಾಜ್ಯೋತ್ಸವ ಹಿನ್ನೆಲೆ ಜಿಬಿಎ ಕಮಿಷನರ್ ಮಹೇಶ್ವರ್ ರಾವ್ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರೇಡ್‌ನಲ್ಲಿ 516 ಜನ ಭಾಗಿ ಆಗಲಿದ್ದಾರೆ. ಭದ್ರತೆ ಸೇರಿ 2,000 ಪೊಲೀಸರು ಭಾಗಿ ಆಗಲಿದ್ದಾರೆ. ಕಾರ್ಯಕ್ರಮಕ್ಕೆ ಬರುವವರು ಕಾರ್ಯಕ್ರಮ ಆರಂಭಕ್ಕೂ ಮುಂಚಿತವಾಗಿ ಬರಬೇಕು. ಸೋಮವಾರ ಬೆಳಗ್ಗೆ ಕಾರ್ಯಕ್ರಮ ಆರಂಭ ಆಗಲಿದ್ದು, ಈ ಬಾರಿ ತಮಿಳುನಾಡು ಪೊಲೀಸರು, ಸೇನೆ, ಸಿಆರ್‌ಪಿಎಫ್ ಸೇರಿದಂತೆ ಇತರೆ ಇಲಾಖೆ ಅಧಿಕಾತಿಗಳು ಭಾಗಿಯಾಗಲಿದೆ ಎಂದು ತಿಳಿಸಿದರು.
ಸಮಯ ಹಾಗೂ ಪಾರ್ಕಿಂಗ್ ವಿವರ: ಸಾರ್ವಜನಿಕರು ಬೆಳಗ್ಗೆ 8 ಗಂಟೆ ಒಳಗೆ ಇರಬೇಕು. ಬಳಿಕ ಬಂದರೆ ಪರಿಶೀಲನೆಗೆ ಕಷ್ಟವಾಗಬಹುದು. ಆದ್ದರಿಂದ ಬೇಗ ಬರುವುದು ಸೂಕ್ತ. ಜನವರಿ 26ರ ಸೋಮವಾರ ಬೆಳಗ್ಗೆ 8:30ರಿಂದ 10:30 ಗಂಟೆಯವರೆಗೆ ಕಬ್ಬನ್ ರಸ್ತೆಯಲ್ಲಿ, ಬಿಆರ್‌ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗೆ ಎರಡೂ ದಿಕ್ಕಲ್ಲೂ ವಾನಹ ಸಂಚಾರ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ಸರ್ಕಲ್, ಶಿವಾಜಿನಗರ ಬಸ್ ನಿಲ್ದಾಣದವರೆಗೆ, ಕಬ್ಬನ್ ರೋಡ್, ಸಿಟಿಓ ಸರ್ಕಲ್‌ನಿಂದ ಕೆಆರ್ ರಸ್ತೆ, ಕಬ್ಬನ್ ರಸ್ತೆ ಜಂಕ್ಷನ್‌ವರೆಗೆ, ಎಂಜಿ ರೋಡ್, ಅನಿಲ್ ಕುಂಬ್ಳೆ ಸರ್ಕಲ್‌ನಿಂದ ಕ್ವೀನ್ಸ್ ಸರ್ಕಲ್‌ವರೆಗೆ ಪಾರ್ಕಿಂಗ್‌ಗೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದರು.
ಗಣರಾಜ್ಯೋತ್ಸವ ಹಿನ್ನೆಲೆ ವೇದಿಕೆಯ ನಿರ್ಮಾಣ, ಬ್ಯಾರಿಕೇಡಿಂಗ್ ಮತ್ತು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 9 ಗಂಟೆಗೆ ರಾಜ್ಯಪಾಲರಿಂದ ಧ್ವಜಾರೋಹಣ ನಡೆಯಲಿದೆ. ಧ್ವಜಾರೋಹಣದ ನಂತರ ರಾಜ್ಯಪಾಲರು ಗೌರವ ಸ್ವೀಕರಿಸಿ ನಂತರ ನಾಡಿನ ಜನತೆಗೆ ಗಣರಾಜ್ಯೋತ್ಸವದ ಸಂದೇಶ ನೀಡುತ್ತಾರೆ. ಪಥಸಂಚಲನದಲ್ಲಿ ಸೇನೆ, ಏರ್‌ಫೋರ್ಸ್, ಸಿಆರ್‌ಪಿಎಫ್ ಮಹಿಳಾ, ವಿಶೇಷವಾಗಿ ಹೊರ ರಾಜ್ಯದ ತಮಿಳುನಾಡು ರಾಜ್ಯ ಪೊಲೀಸ್, ಸ್ಕೌಟ್ಸ್, ಗೈಡ್ಸ್, ಎನ್‌ಸಿಸಿ, ಸೇವಾದಳ ಹಾಗೂ ವಿವಿಧ ಶಾಲೆಗಳ ಮಕ್ಕಳನ್ನೊಳಗೊಂಡಂತೆ ಕವಾಯತು ಮತ್ತು ಬ್ಯಾಂಡ್ ಒಟ್ಟು 37 ತುಕಡಿಗಳಲ್ಲಿ ಸುಮಾರು 1,100 ಮಂದಿ ಭಾಗವಹಿಸಲಿದ್ದಾರೆ.
ಶಾಲಾ ಮಕ್ಕಳ ಒಟ್ಟು 2 ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಮಾರು 1,400 ಮಕ್ಕಳು ಭಾಗವಹಿಸಲಿದ್ದಾರೆ. ಪೊಲೀಸ್ ಇಲಾಖಾ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೈದಾನದಲ್ಲಿ ಭದ್ರತೆ ಮತ್ತು ಸುರಕ್ಷತೆಗಾಗಿ 100 ಸಿಸಿ ಕ್ಯಾಮೆರಾ ವ್ಯವಸ್ಥೆ ಹಾಗೂ 4 ಬ್ಯಾಗೇಜ್ ಸ್ಕ್ಯಾನರ್ ಮತ್ತು ವ್ಯವಸ್ಥಿತ ಸಂಚಾರ ನಿಯಂತ್ರಣ ವ್ಯವಸ್ಥೆಗಳನ್ನು ಮಾಡಲಾಗಿದೆ.
ಪಾಸ್ ಪಡೆಯುವುದೇಗೆ?: ಸಾರ್ವಜನಿಕರು ಸೇವಾಸಿಂಧು ವೆಬ್‌ಸೈಟ್ ಮೂಲಕ ಪಾಸ್ ಪಡೆಯಬಹುದು. ಕಾರ್ಯಕ್ರಮಕ್ಕೆ ಆಗಮಿಸುವವರು ಪ್ರವೇಶ ದ್ವಾರದಲ್ಲಿ ಆಹ್ವಾನ ಪತ್ರಿಕೆಯೊಂದಿಗೆ ಕಡ್ಡಾಯವಾಗಿ ಅರ್ಜಿ ಗುರುತಿನ ಚೀಟಿಯೊಂದಿಗೆ ಬರಬೇಕು ಎಂದು ತಿಳಿಸಿದರು.












Click it and Unblock the Notifications