Report: ಬಿಜೆಪಿ 40 ಪರ್ಸೆಂಟ್ ಕಮಿಷನ್ ಆರೋಪದ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆ
ಬೆಂಗಳೂರು, ಮಾರ್ಚ್ 13: ಕಾಂಗ್ರೆಸ್ ಸರ್ಕಾರ ಬರುವ ಮೊದಲು ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರದ ವಿರುದ್ಧ '40 ಪರ್ಸೆಂಟ್ ಕಮಿಷನ್' ಆರೋಪ ಕೇಳಿ ಬಂದಿತ್ತು. ಅದರ ತನಿಖೆಗಾಗಿ ಹೈಕೋರ್ಟ್ ನ್ಯಾಯಾಧೀಶ ಎಚ್ ಎನ್ ನಾಗಮೋಹನ್ ದಾಸ್ ಆಯೋಗವು ಇದೀಗ ತನಿಖೆ ಪೂರ್ಣಗೊಳಿಸಿ ಬೃಹತ್ ಗಾತ್ರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ.
ಹಿಂದಿನ ಬಿಜೆಪಿ ಆಡಳಿತದ ವಿರುದ್ಧ ಬೃಹತ್ ಭ್ರಷ್ಟಾಚಾರ ಹೊರಿಸಿದ್ದ ಕಾಂಗ್ರೆಸ್ ಅಂದು ವಿಪಕ್ಷ ಸ್ಥಾನದಲ್ಲಿತ್ತು. ಆಗ ಪೇಸಿಎಂ ಸೇರಿದಂತೆ '40 ಪರ್ಸೆಂಟ್ ಕಮಿಷನ್' ಭ್ರಷ್ಟಾಚಾರ ಆರೋಪ ವಿರುದ್ಧ ಪ್ರತಿಭಟನೆ ಅಭಿಯಾನ ನಡೆಸಿತ್ತು. ತದನಂತರ ಈ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ತನಿಖೆ ನಡೆಸಿ ವರದಿಗೆ ಸೂಚಿಸಲಾಗಿತ್ತು. ಅದರಂತೆ ಇದೀಗ ಸಿಎಂ ಸಿದ್ದರಾಮಯ್ಯ ಅವರು 20,000 ಪುಟಗಳ ವರದಿಯನ್ನು ಸ್ವೀಕರಿಸಿದ್ದಾರೆ.

ಕರ್ನಾಟಕ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಈ '40 ಪರ್ಸೆಂಟ್ ಕಮಿಷನ್' ಆರೋಪವು ಬಿಜೆಪಿಗೆ ತೀವ್ರ ಸಂಕಷ್ಟ ತಂದೊಡ್ಡಿತ್ತು. 2023ರಲ್ಲಿ ಜರುಗಿದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಇದೇ ಆರೋಪ ಪ್ರಕರಣ ಅಧಿಕಾರದಿಂದ ಇಳಿಯುವಂತೆ, ಭಾರೀ ಹಿನ್ನಡೆ ಉಂಟು ಮಾಡಿತು. ಭ್ರಷ್ಟಾಚಾರ ಆರೋಪ ಮಾಡಿದ್ದ ಕಾಂಗ್ರೆಸ್‌ಗೆ ಜನರು ಬಹುಮತ ನೀಡಿದರು.
ಬಿಜೆಪಿ ಮೇಲಿನ ಆರೋಪ: ಗುತ್ತಿಗೆದಾರರ ಸಂಘದ ದೂರಿನ ವಿವರ
ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯದ ಸರ್ಕಾರಿ ಟೆಂಡರ್ ಕಾಮಗಾರಿಗಳಲ್ಲಿ ಶೇಕಡಾ 40 ಕ್ಕಿಂತ ಹೆಚ್ಚು ಕಮಿಷನ್ ವಿಧಿಸಲಾಗಿದೆ ಎಂದು ಗುತ್ತಿಗೆದಾರರು ಆರೋಪಿಸಿದ್ದರು. ಇದೇ ವಿಚಾರವಾಗಿ ರಾಜ್ಯ ಗುತ್ತಿಗೆದಾರರ ಸಂಘ ದೂರು ಕೂಡಾ ದಾಖಲಿಸಿತ್ತು. ಇದು ವಿಪಕ್ಷ ಕಾಂಗ್ರೆಸ್ ಗೆ ವರದಾನವಾಯಿತು.
ಈ ಅಕ್ರಮ ವಿಚಾರ ದೊಡ್ಡದಾಗುತ್ತಿದ್ದಂತೆ ಪ್ಯಾಕೇಜ್ ವ್ಯವಸ್ಥೆ ಕೈ ಬಿಡಬೇಕು. ದರಗಳ ವೇಳಾಪಟ್ಟಿ (ಎಸ್‌ಆರ್) ಪಟ್ಟಿ ನಿಗದಿಪಡಿಸಬೇಕು. ಪಾರದರ್ಶಕವಾಗಿ ಟೆಂಡರ್ ನಡೆಯಬೇಕು. ಹಿರಿತನದ ಬೇಸ್ ಮೇಲೆ ಬಿಲ್ ಪಾವತಿ ಆಗಬೇಕು. ನೇರವಾಗಿ ಗುತ್ತಿಗೆದಾರರಿಗೆ ಕಾಮಗಾರಿ ನೀಡುವ ಪದ್ಧತಿ ಕೊನೆಯಾಗಬೇಕು ಎಂಬುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಕೂಲಂಕುಷವಾಗಿ ತನಿಖೆ ನಡೆಯಬೇಕು ಎಂದು ಗುತ್ತಿಗೆದಾರರ ಸಂಘ ಒತ್ತಾಯಿಸಿತ್ತು.
ಇದೆಲ್ಲ ಬೆಳವಣಿಗೆ ಬಳಿಕ ತನಿಖಾ ಆಯೋಗವು ಎಲ್ಲ ವಿಧದಲ್ಲಿ ತನಿಖೆ ನಡೆಸಿದೆ. ಗುತ್ತಿಗೆಗೆ ನೀಡಿದ ದಾಖಲಾತಿಗಳು, ಗುತ್ತಿಗೆದಾರರ ಸಂಘದ ಆರೋಪ, ಗುತ್ತಿಗೆದಾರರು ಮತ್ತು ಸಾರ್ವಜನಿಕ ಹೇಳಿಕೆಗಳು ಮತ್ತು ವಿವರಗಳನ್ನು ಪಡೆದಿದೆ. ದೂರುಗಳನ್ನು ಪರಿಶೀಲಿಸಿ ತನಿಖೆ ಮಾಡಿ ಸಲಹೆಗಳು ಮತ್ತು ಅಭಿಪ್ರಾಯಗಳನ್ನು ವರದಿಯಲ್ಲಿ ಸೇರಿದಿದೆ. ತನಿಖೆ ಪೂರ್ಣಗೊಂಡ ಬೆನ್ನಲ್ಲೆ ಆಯೋಗ ವರದಿ ಸಲ್ಲಿಸಿದೆ.












Click it and Unblock the Notifications