Murder Case: ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯ: ಇಂದು ಪರಪ್ಪನ ಜೈಲಿಗೆ ದರ್ಶನ್ ಗ್ಯಾಂಗ್?
ಬೆಂಗಳೂರು ಜೂನ್ 20: ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ಗ್ಯಾಂಗ್ ಪೊಲೀಸ್ ಬಂಧನದಲ್ಲಿದ್ದು ಇಂದಿಗೆ ಗ್ಯಾಂಗ್‌ನ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯವಾಗಲಿದೆ. ಹೀಗಾಗಿ ಅವರೆಲ್ಲರೂ ಇಂದು ಪರಪ್ಪನ ಜೈಲಿಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಸ್ಟಡಿ ಅಂತ್ಯ ಹಿನ್ನಲೆಯಲ್ಲಿ ನಟ ದರ್ಶನ್ ಗ್ಯಾಂಗ್‌ನ ಸದಸ್ಯರನ್ನು ಪೊಲೀಸರು ಗುರುವಾರ ಬೆಂಗಳೂರಿನ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಈ ಕೊಲೆ ಪ್ರಕರಣದ ತನಿಖೆ ಸಲುವಾಗಿ ಎರಡು ಬಾರಿ ವಶಕ್ಕೆ ಪಡೆದಿರುವ ಕಾರಣ ಮತ್ತೆ ಆರೋಪಿಗಳನ್ನು ಸುಪರ್ದಿಗೆ ನೀಡುವಂತೆ ನ್ಯಾಯಾಲಯಕ್ಕೆ ಪೊಲೀಸರು ಮನವಿ ಸಲ್ಲಿಸುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಅವರ ಸಹಚರರು ಬಂಧಿತರಾಗಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು, ಹತ್ತು ದಿನಗಳು ಕಸ್ಟಡಿಗೆ ಪಡೆದು ಸುದೀರ್ಘ ವಿಚಾರಣೆಗೊಳಪಡಿಸಿದ್ದಾರೆ. ಪೊಲೀಸ್ ಕಸ್ಟಡಿ ಗುರುವಾರ ಅಂತ್ಯವಾಗಲಿದ್ದು, ನಟ ದರ್ಶನ್ ಸೇರಿದಂತೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಲಿದ್ದಾರೆ.
ಮುಖಾಮುಖಿ ವಿಚಾರಣೆ?
ಪೊಲೀಸ್ ಕಸ್ಟಡಿ ಅಂತ್ಯವಾದ ಕೊನೆ ದಿನ ಕೊಲೆ ಪ್ರಕರಣ ಸಂಬಂಧ ಬಂಧಿತ ಎಲ್ಲ 17 ಆರೋಪಿಗಳನ್ನು ಒಟ್ಟಾಗಿ ಕೂರಿಸಿ ಪೊಲೀಸರು ವಿಚಾರಣೆ ನಡೆಸಿ ಹೇಳಿಕೆ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ ನಾಳೆ ಪರಪ್ಪನ ಅಗ್ರಹಾರಕ್ಕೆ ಹೋದರೆ ದರ್ಶನ್ ೨ನೇ ಬಾರಿಗೆ ಅಲ್ಲಿ ತಮ್ಮ ದಿನಗಳನ್ನು ಕಳೆಯಲಿದ್ದಾರೆ.
ಆರೋಪಿಗಳು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಪ್ರಬಲ ಸಾಕ್ಷ್ಯಾಧಾರಗಳನ್ನು ಜಪ್ತಿ ಮಾಡಿದ್ದು, ಆರೋಪಿಗಳ ಡಿಎನ್‌ಎ ಪರೀಕ್ಷೆಗೆ ಮುಂದಡಿ ಇಟ್ಟಿದ್ದಾರೆ. ಜೂನ್ 8ರಂದು ರೇಣುಕಾಸ್ವಾಮಿ ಮೇಲೆ ಅಮಾನುಷ ಕ್ರೌರ್ಯ ಎಸಗಿ ಕೊಲೆಗೈದ ಪಟ್ಟಣಗೆರೆ ಶೆಡ್‌ನಲ್ಲಿ ದೊರೆತ ರಕ್ತದ ಕಲೆಗಳು, ತಲೆಗೂದಲು ಮತ್ತಿತರ ಸೂಕ್ಷ್ಮ ವಸ್ತುಗಳನ್ನು ಸಂಗ್ರಹಿಸಿದ್ದಾರೆ.

ಈ ವಸ್ತುಗಳಿಗೂ ಆರೋಪಿಗಳಿಗೂ ಸಂಬಂಧವಿದೆ ಎಂಬುದನ್ನು ವೈಜ್ಞಾನಿಕವಾಗಿ ಸಾಬೀತುಪಡಿಸುವ ಸಲುವಾಗಿ ಡಿಎನ್‌ಎ ಪರೀಕ್ಷೆಗೆ ಮುಂದಾಗಿದ್ದಾರೆ.
ಬುಧವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿಆರೋಪಿ ದರ್ಶನ್, ಪವಿತ್ರಾಗೌಡ, ವಿನಯ್, ಪವನ್, ವಿನಯ್, ರಾಘವೇಂದ್ರ ಸೇರಿದಂತೆ 10 ಮಂದಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆರೋಪಿಗಳ ರಕ್ತದ ಮಾದರಿ, ತಲೆಗೂದಲು ಸಂಗ್ರಹಿಸಲಾಗಿದೆ.
ಕೃತ್ಯ ನಡೆದ ಸ್ಥಳ, ಆರೋಪಿಗಳ ಬಟ್ಟೆಗಳ ಮೇಲಿನ ರಕ್ತದ ಕಲೆ ಇನ್ನಿತರೆ ಸ್ಥಳಗಳಲ್ಲಿ ದೊರೆತ ರಕ್ತ, ಕೂದಲಿಗೆ ಮ್ಯಾಚ್ ಆಗುವುದನ್ನು ಸಾಬೀತುಪಡಿಸಲು ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತದೆ. ಈ ಪ್ರಕ್ರಿಯೆ ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿದ್ದರು ಎಂಬುದನ್ನು ರುಜುವಾತುಪಡಿಸಲು ಸಹಕಾರಿಯಾಗಲಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.

ಈ ನಡುವೆ ರೇಣುಕಾಸ್ವಾಮಿ ಹತ್ಯೆ ವೇಳೆ ನಟ ದರ್ಶನ್ ಧರಿಸಿದ್ದ ದುಬಾರಿ ಬೆಲೆಯ ಪ್ಯಾಂಟ್, ಟಿ-ಶರ್ಟ್ ಮತ್ತು ಶೂವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ. ದರ್ಶನ್ ಧರಿಸಿದ್ದ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್‌ಗೆ 35 ಸಾವಿರ ರೂ. ಆದರೆ, ಶೂ ಬೆಲೆ 12 ಸಾವಿರ ರೂ. ಮತ್ತು 6,500 ರೂ. ಬೆಲೆಯ ಕಪ್ಪು ಬಣ್ಣದ ಟಿ-ಶರ್ಟ್‌ಅನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.












Click it and Unblock the Notifications