Pavithra Gowda: ಪವಿತ್ರಾಗೌಡ ಡಿಮ್ಯಾಂಡ್‌ಗೆ ನೋ ಎಂದ ಜೈಲಧಿಕಾರಿಗಳು, ದರ್ಶನ್‌ಗೂ ಅವಕಾಶ ಕೈ ತಪ್ಪುವ ಸಾಧ್ಯತೆ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪವಿತ್ರಾ ಗೌಡ ಅವರ ಪ್ರಮುಖ ಬೇಡಿಕೆಗೆ ಜೈಲಧಿಕಾರಿಗಳು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ನಟ, ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಅವರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಏನಿದು ಪವಿತ್ರಾ ಗೌಡ ಅವರ ಬೇಡಿಕೆ ಎನ್ನುವ ವಿವರ ಇಲ್ಲಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರ ಸ್ನೇಹಿತೆ ಪವಿತ್ರಾಗೌಡಗೆ ಅವರ ಪ್ರಮುಖ ಬೇಡಿಕೆಗೆ ಭಾರೀ ಹಿನ್ನಡೆ ಆಗಿದೆ. ಪವಿತ್ರಾಗೌಡ ಅವರ ಪ್ರಮುಖ ಬೇಡಿಕೆಗೆ ಕೋರ್ಟ್ ಅನುಮತಿ ನೀಡಿದರೂ ಜೈಲಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಮನೆ ಊಟದ ವಿಚಾರದಲ್ಲಿ ದರ್ಶನ್ ಅವರಿಗೂ ಹಿನ್ನಡೆ ಆಗುವ ಸಾಧ್ಯತೆ ಇದೆ.

ಪವಿತ್ರಾಗೌಡ ಅವರಿಗೆ ಮನೆ ಊಟ ನೀಡುವುದಕ್ಕೆ ಕೋರ್ಟ್ ಸೂಚನೆ ನೀಡಿದರೂ, ಜೈಲಿನ ಅಧಿಕಾರಿಗಳು ಮನೆಯೂಟ ನೀಡಲು ನಿರಾಕರಿಸಿದ್ದಾರೆ. ಅಲ್ಲದೇ, ಊಟ ಯಾವ ಕಾರಣಕ್ಕೆ ಮನೆ ಊಟ ನೀಡಲು ಸಾಧ್ಯವಿಲ್ಲ ಎನ್ನುವ ವಿಷಯವನ್ನೂ ಉಲ್ಲೇಖಿಸಿ ಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಸಲು ಜೈಲಿನ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಮಾರ್ಗಸೂಚಿಯ ಪ್ರಕಾರ ಊಟ ನೀಡಲು ಸಾಧ್ಯವಿಲ್ಲ!
ಇನ್ನು ಜೈಲಿನ ಮಾರ್ಗಸೂಚಿಗಳ ಪ್ರಕಾರ ಮನೆ ಊಟ ಕೊಡಲು ಸಾಧ್ಯವಿಲ್ಲ ಎನ್ನುವುದು ಜೈಲಿನ ಅಧಿಕಾರಿಗಳ ವಾದವಾಗಿದೆ. ಅಲ್ಲದೇ ಒಬ್ಬರಿಗೆ ಕೊಟ್ಟರೆ ಬೇರೆಯವರೂ ಮನೆ ಊಟ ಕೇಳುವ ಸಾಧ್ಯತೆ ಇದೆ ಎನ್ನುವುದು ಜೈಲಧಿಕಾರಿಗಳ ಚಿಂತೆಯಾಗಿದೆ. ಈಚೆಗೆ ಪವಿತ್ರಾಗೌಡ, ಲಕ್ಷ್ಮಣ್, ನಾಗರಾಜ್ ಎನ್ನುವವರು ಜೈಲು ಊಟದ ವಿಚಾರವಾಗಿ ಕೋರ್ಟ್ ಮೊರೆ ಹೋಗಿದ್ದರು. ಜೈಲಿನ ಊಟ ಸರಿಯಾಗಿ ಇಲ್ಲ. ಈ ಆಹಾರದಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಮನೆ ಊಟಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಲಾಗಿತ್ತು.
ಈ ಅರ್ಜಿಯನ್ನು ಮಾನ್ಯ ಮಾಡಿದ್ದ ಕೋರ್ಟ್ ಆರೋಪಿಗಳಿಗೆ ಜೈಲಿನ ಮಾರ್ಗಸೂಚಿಯ ಅನ್ವಯವೇ ಮನೆ ಊಟ ಕೊಡಲು ಸೂಚನೆ ನೀಡಿತ್ತು. ಆದರೆ, ಜೈಲಿನ ಅಧಿಕಾರಿಗಳು ಅದೇ ಮಾರ್ಗಸೂಚಿಯ ಅನ್ವಯ ಊಟ ಕೊಡುವುದಕ್ಕೆ ಸಾಧ್ಯವಿಲ್ಲ. ಇದನ್ನೂ ಮೀರಿ ಒಂದೊಮ್ಮೆ ಮನೆ ಊಟಕ್ಕೆ ಅವಕಾಶ ನೀಡಿದರೆ ಇದೇ ಮಾರ್ಗವನ್ನು ಸಾವಿರಾರು ವಿಚಾರಣಾಧೀನ ಕೈದಿಗಳು ಮನೆ ಊಟ ಕೊಡುವಂತೆ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ ಎನ್ನುವ ಪ್ರಶ್ನೆ ಪೊಲೀಸರಲ್ಲಿ ಎದುರಾಗಿದೆ. ಹೀಗಾಗಿ ಮನೆ ಊಟದ ನಿರೀಕ್ಷೆಯಲ್ಲಿರುವ ದರ್ಶನ್ ಅವರಿಗೂ ಹಿನ್ನಡೆ ಆಗುವ ಸಾಧ್ಯತೆ ಇದೆ.
ಈ ಕಾರಣಗಳಿಗೆ ಮನೆ ಊಟ ನೀಡಲು ಸಾಧ್ಯವಿಲ್ಲ
1. ಪವಿತ್ರಾಗೌಡಗೆ ಮನೆ ಊಟ ನೀಡಿದರೆ ಇನ್ನುಳಿದ ವಿಚಾರಣಾಧೀನ ಆರೋಪಿಗಳು ಡಿಮ್ಯಾಂಡ್ ಮಾಡುವ ಸಾಧ್ಯತೆ.
2. ಕಾರಾಗೃಹ ಇಲಾಖೆ ಕಾಯ್ದೆ 13ರ ಅಡಿಯಲ್ಲಿ ಜೈಲಿನ ಕೈದಿಗೆ ಮನೆ ಊಟ ಕೊಡುವುದಕ್ಕೆ ಅವಕಾಶ ಇಲ್ಲ.
3. ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ ಮಾಡಿ ಜೈಲಿನ ಆಹಾರ ಉತ್ತಮ ಎಂದು ವರದಿ.
4. ಜೈಲಿನಲ್ಲಿರುವ ಇನ್ನುಳಿದ ಸಜಾ ಬಂಧಿ ಹಾಗೂ ವಿಚಾರಣಾಧೀನ ಕೈದಿಗಳಿಂದಲೂ ಮನೆ ಊಟದ ಡಿಮ್ಯಾಂಡ್ ಬರುವ ಸಾಧ್ಯತೆ.
5. ಈ ಎಲ್ಲಾ ಕಾರಣಗಳಿಗೆ ಜೈಲಿನ ಊಟಕ್ಕೆ ಅನುಮತಿ ನೀಡದಂತೆ ಕೋರಿ ಕೋರ್ಟ್ ಮೊರೆ ಹೋಗುವುದಕ್ಕೆ ನಿರ್ಧಾರಿಸಲಾಗಿದೆ.












Click it and Unblock the Notifications