S.K.Jain: ಖ್ಯಾತ ಜ್ಯೋತಿಷಿ ಎಸ್.ಕೆ.ಜೈನ್ ನಿಧನ
ಬೆಂಗಳೂರು, ಏಪ್ರಿಲ್, 13: ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಜ್ಯೋತಿಷಿ ಎಸ್.ಕೆ.ಜೈನ್ (66) ಅವರು ಶುಕ್ರವಾರ (ಏಪ್ರಿಲ್ 12) ಸಂಜೆ ನಿಧನರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅನಾರೋಗ್ಯ ಹಿನ್ನೆಲೆ ಮಾರ್ಚ್ 18ರಂದು ಎಸ್.ಕೆ.ಜೈನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮತ್ತೆ ಏಪ್ರಿಲ್‌ನ ಮೊದಲನೇ ವಾರದಲ್ಲೇ ಡಿಸ್ಚಾರ್ಜ್ ಮಾಡಲಾಯಿತು. ಮತ್ತೆ ನಾಲ್ಕು ದಿನಗಳ ಹಿಂದೆ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಿನ್ನೆ (ಏಪ್ರಿಲ್ 12) ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಸಾಧನೆಗಳ ವಿವರ: ರಾಜಕಾರಣಿಗಳಿಂದಿಡಿದು ನಟರವರೆಗಿನ ಭವಿಷ್ಯಗಳನ್ನು ಅವರು ನುಡಿದಿದ್ದಾರೆ. ಅಲ್ಲದೆ ಇವರ ಭವಿಷ್ಯವಾಣಿಗಳನ್ನು ಅನುಸರಿಸುವ ಅನುಯಾಯಿಗಳ ಬಳಗವೇ ಇದೆ. ಇನ್ನು ಜೈನ್ ಅವರೊಂದಿಗೆ ಸಂಪರ್ಕದಲ್ಲಿರುವ ಪ್ರತಿಯೊಬ್ಬರೂ ಅವರ ಜೊತೆ ವೈಯಕ್ತಿಕ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ಬಿ.ಎಸ್.ಯಡಿಯೂರಪ್ಪ ಮತ್ತು ಎನ್.ಧರಂ ಸಿಂಗ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಧರ್ಮಸ್ಥಳದ ವೀರೇಂದ್ರ ಹೆಗಡೆ ಎಲ್ಲರೂ ಅವರ ಭವಿಷ್ಯವನ್ನು ಮೆಚ್ಚಿಕೊಂಡವರಾಗಿದ್ದಾರೆ.
ವಿಶ್ವಪ್ರಸಿದ್ಧ ಕೆನಡಾದ ಸಂಗೀತಗಾರ, ಗಾಯಕ, ಹಾಡು ಬರಹಗಾರ, ರೆಕಾರ್ಡ್ ನಿರ್ಮಾಪಕ, ಬ್ರಿಯಾನ್ ಆಡಮ್ಸ್ ಅವರಂತಹ ಅಂತಾರಾಷ್ಟ್ರೀಯ ಪ್ರಖ್ಯಾತರು ಕೂಡ ಜ್ಯೋತಿಷ್ಯ ಕೇಳಲು ಜೈನ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಇನ್ನು 20 ವರ್ಷಗಳಿಂದ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅವರ ಕಾರ್ಯಕ್ರಮದಿಂದ ಜೈನ್ ಮನೆಮಾತಾಗಿದ್ದರು. ಇನ್ನು ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ಅವರ ಅಪಾರ ಕೊಡುಗೆಗಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಎಸ್.ಕೆ.ಜೈನ್ ಅವರು, ತಮ್ಮ ತಂದೆ ಶಶಿಕಾಂತ್ ಜೈನ್ ಅವರಿಂದ ಜ್ಯೋತಿಷ್ಯಗಳ ಬಗ್ಗೆ ಹಲವು ವಿಷಗಳನ್ನು ಕಲಿತರು. ಮತ್ತು ಕಳೆದ 40 ವರ್ಷಗಳಿಂದ ಜ್ಯೋತಿಷ್ಯ ವಿಜ್ಞಾನದ ವೃತ್ತಿಯಲ್ಲಿದ್ದರು. ಪ್ರತಿ ಯುಗಾದಿಯಂದು, ಜೈನ್ ಅವರು 'ಕಾಲಚಕ್ರ ಎಫೆಮೆರಿಸ್' ಎಂಬ ಪುಸ್ತಕವನ್ನು ಬಿಡುಗಡೆ ಮಾಡುತ್ತಿದ್ದರು. ಇದು ಹಲವು ಘಟನೆಗಳು ಮತ್ತು ಮಂಗಳಕರ ಸಮಯಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ಪುಸ್ತಕವಾಗಿತ್ತು.
ಎಸ್.ಕೆ.ಜೈನ್ ಅವರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ. ಡಾ.ಸುರೇಂದ್ರ ಕುಮಾರ್ ಜೈನ್ ಅವರು 1957ರ ಅಕ್ಟೋಬರ್ 13ರಂದು ಜನಿಸಿದ್ದರು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು ಇವರು. ಬೆಳೆದಿದ್ದು ಮಾತ್ರ ಬೆಂಗಳೂರಿನಲ್ಲಿ. ಶ್ವಾಸಕೋಶದಲ್ಲಿ ನೀರು ಶೇಖರಣೆಯಾಗಿ ದೇಹಕ್ಕೆಲ್ಲಾ ಹರಡಿದ್ದರಿಂದ ಮಾರ್ಚ್ 18ರಂದು ಸಂಜೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಂತರ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಯಿತು. ಇನ್ನು ಮತ್ತೆ ಏಪ್ರಿಲ್ ಎರಡನೇ ವಾರದಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು.
ಆದರೆ ಮತ್ತೆ ಅಸ್ವಸ್ಥರಾಗಿದ್ದರಿಂದ ಅವರನ್ನು 4 ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಿಳಿರಕ್ತ ಕಣಗಳು ಕಡಿಮೆಯಾಗಿ, ಲೋ ಬಿಪಿ ಆಗಿದ್ದರಿಂದ ಸೋಂಕು ದೇಹದ ಇತರ ಭಾಗಗಳಿಗೆ ಹರಡಿ ಜೈನ್ ಅವರು ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.












Click it and Unblock the Notifications