ಜೆಡಿಎಸ್ ಪಕ್ಷದಿಂದ ಇಬ್ರಾಹಿಂ ಉಚ್ಛಾಟನೆ: ಎಚ್‌ಡಿ ದೇವೇಗೌಡ, ಎಚ್‌ಡಿ ಕುಮಾರಸ್ವಾಮಿಗೆ ನೋಟಿಸ್ ಜಾರಿ
ಬೆಂಗಳೂರು, ಮೇ. 10 : ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಸಿ.ಎಂ.ಇಬ್ರಾಹಿಂ ಅವರನ್ನು ಉಚ್ಚಾಟಿಸಿರುವ ಪ್ರಕರಣ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ. ಅಲ್ಲದೆ, ಆ ಸಂಬಂಧ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಹಾಗಾಗಿ ಇಬ್ರಾಹಿಂ ಉಚ್ಛಾಟನೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ಉಚ್ಚಾಟಿಸಿರುವ ಮತ್ತು ಅಧ್ಯಕ್ಷ ಹುದ್ದೆಗೆ ತಾತ್ಕಾಲಿಕವಾಗಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ನೇಮಿಸಿರುವ ಕ್ರಮ ಪ್ರಶ್ನಿಸಿದ್ದ ಮೂಲ ದಾವೆಯನ್ನು ತಿರಸ್ಕರಿಸಿದ ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ರದ್ದು ಕೋರಿ ಸಿ.ಎಂ. ಇಬ್ರಾಹಿಂ ಸಲ್ಲಿಸಿದ್ದ ಮೇಲ್ಮನವಿ (ಆರ್‌ಎಫ್‌ಎ) ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಮೇಲ್ಮನವಿ ಸಂಬಂಧ ಕೆಲ ಕಾಲ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಮೇಲ್ಮನವಿಯಲ್ಲಿ ಪ್ರತಿವಾದಿಗಳಾಗಿರುವ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿಗೆ ನೋಟಿಸ್ ಜಾರಿಗೊಳಿಸಿತು. ಜೆಡಿಎಸ್ ಪರ ಹಾಜರಾದ ಹಿರಿಯ ವಕೀಲ ಉದಯ ಹೊಳ್ಳ ಅವರು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದರು. ಅದನ್ನು ದಾಖಲಿಸಿಕೊಂಡ ನ್ಯಾಯಪೀಠ, ಮೇಲ್ಮನವಿ ವಿಚಾರಣೆಯನ್ನು ಜೂನ್ 4ಕ್ಕೆ ಮುಂದೂಡಿತು.
ಏನಿದು ಪ್ರಕರಣ?
ಸಿ.ಎಂ.ಇಬ್ರಾಹಿಂ ಅವರನ್ನು 2022ರ ಆಗಸ್ಟ್ 3 ರಂದು ಜೆಡಿಎಸ್ ಅಧ್ಯಕ್ಷರಾಗಿ ರಾಜ್ಯ ಕಾರ್ಯಕಾರಿಣಿಯಲ್ಲಿ ಘೋಷಿಸಲಾಗಿತ್ತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 2024 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರು. ನಂತರ ಸಕಾರಣವಿಲ್ಲದೇ ತಮ್ಮನ್ನು 2023ರ ಅಕ್ಟೋಬರ್ 19ರಂದು ಪಕ್ಷ ಹಾಗೂ ಅಧ್ಯಕ್ಷ ಹುದ್ದೆಯಿಂದ ಉಚ್ಚಾಟನೆ ಮಾಡಲಾಗಿದೆ.

ಇದು ಜೆಡಿಎಸ್ ಸಂವಿಧಾನಕ್ಕೆ ವಿರುದ್ಧವಾಗಿದೆ. ಉಚ್ಚಾಟನೆಗೂ ಮುನ್ನ ತಮ್ಮ ಅಹವಾಲು ಆಲಿಸಿಲ್ಲ. ಆದ್ದರಿಂದ ಉಚ್ಚಾಟನೆ ಆದೇಶ ರದ್ದುಪಡಿಸಬೇಕು. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸದಂತೆ ನಿರ್ಬಂಧಿಸಬೇಕು ಎಂದು ಕೋರಿ ಸಿಟಿ ಸಿವಿಲ್‌ಗೆ ಸಿ.ಎಂ.ಇಬ್ರಾಹಿಂ ಅರ್ಜಿ ಸಲ್ಲಿಸಿದ್ದರು.
ಆ ಅರ್ಜಿ ವಜಾಗೊಳಿಸಿ 2024ರ ಮಾರ್ಚ್ 23ರಂದು ನಗರದ 26ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿತ್ತು. ಇದರಿಂದ ಸಿ.ಎಂ ಇಬ್ರಾಹಿಂ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಜತೆಗೆ, ಜೆಡಿಎಸ್ ರಾಜ್ಯ ಕಾರ್ಯಕಾರಿ ಸಮಿತಿ ಮತ್ತು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವುದಕ್ಕೆ ಮಧ್ಯಂತರ ತಡೆ ನೀಡಬೇಕು ಎಂದು ಕೋರಿದ್ದಾರೆ.












Click it and Unblock the Notifications