ಫ್ಲೆಕ್ಸ್, ಬ್ಯಾನರ್ ತೆರವಿಗೆ ಸಮರ: ಹೈಕೋರ್ಟ್‌ಗೆ ಬಿಬಿಎಂಪಿ ಹೇಳಿಕೆ
ಬೆಂಗಳೂರು, ಆಗಸ್ಟ್ 31: ಬೆಂಗಳೂರು ಮಹಾನಗರದ ಸೌಂದರ್ಯ ಹಾಳು ಮಾಡುತ್ತಿರುವ ಅನಧಿಕೃತ ಹೋರ್ಡಿಂಗ್ಸ್, ಫ್ಲೆಕ್ಸ್, ಬ್ಯಾನರ್ ಸೇರಿದಂತೆ ಅಕ್ರಮ ಜಾಹೀರಾತುಗಳ ಹಾವಳಿಯನ್ನು ತಡೆಗೆ ಸಮರ ಸಾರಲಾಗಿದೆ ಎಂದು ಬಿಬಿಎಂಪಿ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ. ಅಲ್ಲದೇ, ಆ ಸಂಬಂಧ ಕೈಗೊಂಡಿರುವ ಕ್ರಮಗಳು ಹಾಗೂ ಕ್ರಿಯಾ ಯೋಜನೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
ಅನಧಿಕೃತ ಜಾಹೀರಾತು ತಡೆಯುವ ನಿಟ್ಟಿನಲ್ಲಿ ಪ್ರತಿಯೊಂದು ಅಕ್ರಮ ಜಾಹೀರಾತು ಅಳವಡಿಕೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ರಾಜ್ಯ ಸರ್ಕಾರಕ್ಕೆ ತಲಾ 50 ಸಾವಿರ ದಂಡ ವಿಧಿಸಲು ಹೈಕೋರ್ಟ್ ನೀಡಿರುವ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಆ ದಿಸೆಯಲ್ಲಿ ಇದೇ ಸೆಪ್ಟೆಂಬರ್ 2ರಿಂದ ಅಕ್ರಮ ಜಾಹೀರಾತು ಅಳವಡಿಸಿದ್ದ ವ್ಯಕ್ತಿಗಳ ವಿರುದ್ಧ ಒಟ್ಟು 264 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಬಿಬಿಎಂಪಿ ಹೈಕೋರ್ಟ್‌ಗೆ ತಿಳಿಸಿದೆ.

ಮಾಯಿಗೇಗೌಡ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ಬಿಬಿಎಂಪಿ ಪರ ವಕೀಲರು ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಪ್ರಮಾಣ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿ, ಕೈಗೊಂಡಿರುವ ಕ್ರಮ ಮತ್ತು ಯೋಜನೆಗಳನ್ನು ನ್ಯಾಯಪೀಠಕ್ಕೆ ವಿವರಿಸಿದರು.
ಪ್ರಮಾಣ ಪತ್ರದ ವಿವರವೇನು?; 2023ರ ಆಗಸ್ಟ್ 2ರಿಂದ ಒಟ್ಟು 923 ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳು ಮತ್ತು ಇತರ ಅಕ್ರಮ ಜಾಹೀರಾತುಗಳನ್ನು ಗುರುತಿಸಲಾಗಿದೆ. 923 ಅನಧಿಕೃತ ಜಾಹೀರಾತುಗಳನ್ನು ತೆಗೆದುಹಾಕಲಾಗಿದೆ. 369 ದೂರುಗಳನ್ನು ದಾಖಲಿಸಲಾಗಿದ್ದು, ಒಟ್ಟು 264 ಎಫ್‌ಐಆರ್ ದಾಖಲಾಗಿವೆ ಎಂದು ಪಾಲಿಕೆ ಹೇಳಿದೆ.
ಅಲ್ಲದೆ, ಅಕ್ರಮ ಜಾಹೀರಾತುಗಳ ಅಳವಡಿಕೆ ಮಹಾನಗರದಲ್ಲಿ ಒಂದು ಉಪಟಳವಾಗಿ ಪರಿಣಮಿಸಿದೆ. ಇದನ್ನು ತಡೆಯಲು ಬಿಬಿಎಂಪಿ ಅಧಿಕಾರಿಗಳು ಹೊಸ ವಿಧಾನಗಳಡಿ ಮತ್ತು ಹೆಚ್ಚು ಕಟ್ಟುನಿಟ್ಟಾದ ಕ್ರಿಯಾ ಯೋಜನೆಯನ್ನು ರೂಪಿಸಿದ್ದಾರೆ. ಈ ಮೂಲಕ ಭವಿಷ್ಯದಲ್ಲಿ ಅನಧಿಕೃತ ಫ್ಲೆಕ್ಸ್‌ಗಳು, ಬ್ಯಾನರ್‌ಗಳನ್ನು ಅಕ್ರಮವಾಗಿ ಅಳವಡಿಸುವುದನ್ನು ಸಂಪೂರ್ಣವಾಗಿ ತಡೆಯಲು ಶ್ರಮಿಸುತ್ತಿದ್ದಾರೆ ಎಂದು ಪ್ರಮಾಣ ಪತ್ರದಲ್ಲಿ ವಿವರಿಸಲಾಗಿದೆ.
ಬಿಬಿಎಂಪಿಯ 8 ವಲಯಗಳ ವಿಶೇಷ ಆಯುಕ್ತರು ಮತ್ತು ವಲಯ ಆಯುಕ್ತರೊಂದಿಗೆ ವಿಡಯೋ ಕಾನ್ಫರೆನ್ಸ್ ನಡೆಸಲಾಗಿದೆ. ನಿರ್ದಿಷ್ಟ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಗದಿಪಡಿಸಲು ವಾರ್ಡ್‌ವಾರು ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಎಫ್‌ಐಆರ್‌ಗಳು, ದಂಡ ವಿಧಿಸುವುದು ಮತ್ತು ಅನಧಿಕೃತ ಜಾಹೀರಾತುಗಳನ್ನು ತೆಗೆದುಹಾಕುವ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ನಂತರ ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ. ತಪ್ಪಿತಸ್ಥ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ವಿವರಿಸಲಾಗಿದೆ. ಅರ್ಜಿದಾರರ ಪರ ವಕೀಲರು, ಅಕ್ರಮ ಜಾಹೀರಾತುಗಳು ಇನ್ನೂ ಅಸ್ತಿತ್ವದಲ್ಲಿವೆ ಎಂಬ ಬಗ್ಗೆ ಫೋಟೋ ಸಹಿತವಾದ ಮೆಮೊ ಅನ್ನು ಸಲ್ಲಿಸುವ ಮೂಲಕ ಬಿಬಿಎಂಪಿ ನ್ಯಾಯಾಲಯದ ಆದೇಶವನ್ನು ಪಾಲಿಸಿಲ್ಲ ಎಂದು ದೂರಿದರು.
ಖಡಕ್ ಎಚ್ಚರಿಕೆ: ಈ ಹಿಂದಿನ ವಿಚಾರಣೆ ವೇಳೆ ನ್ಯಾಯಪೀಠವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಸಲ್ಲಿಸಿದ್ದ ಅನುಪಾಲನಾ ವರದಿಯನ್ನು ಕಣ್ಣೊರೆಸುವ ತಂತ್ರ ಎಂದು ಕಿಡಿಕಾರಿತ್ತು. ಅಲ್ಲದೆ, ಅನಧಿಕೃತ ಫ್ಲೆಕ್ಸ್, ಬ್ಯಾನರ್, ಧ್ವಜಗಳು, ಬಂಟಿಂಗ್ಸ್ ಮುಂತಾದವುಗಳನ್ನು ತೆರವುಗೊಳಿಸುವ ಬಗ್ಗೆ ಕೇವಲ 134 ದೂರುಗಳನ್ನು ಪರಿಗಣಿಸಿ ಕೇವಲ 40 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಹೇಳಿತ್ತು.
ನಗರದಲ್ಲಿ ಒಂದೇ ಒಂದು ಅನಧಿಕೃತ ಫ್ಲೆಕ್ಸ್ ಕಂಡು ಬಂದರೆ ಪಾಲಿಕೆ ಮತ್ತು ರಾಜ್ಯ ಸರ್ಕಾರ ತಲಾ 50 ಸಾವಿರ ಠೇವಣಿ ಇರಿಸಬೇಕು ಎಂದು ಖಡಕ್ ಎಚ್ಚರಿಕೆ ನೀಡಿತ್ತು.












Click it and Unblock the Notifications