ಬೆಂಗಳೂರಿನ ಈ ಕಟ್ಟಡಗಳ ಹೆಚ್ಚುವರಿ ಅಂತಸ್ತು ತೆರವು: ಜಿಬಿಎ
ಬೆಂಗಳೂರಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಕಟ್ಟಡಗಳ ಹೆಚ್ಚುವರಿ ಅಂತಸ್ತು ತೆರವು ಮಾಡುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದಾಗಿದೆ.ಕಳೆದ ಒಂದು ವರ್ಷದಿಂದಲೂ ಈ ಮಾದರಿಯ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ.
ಇದೀಗ ಬೆಂಗಳೂರಿನ ಬ್ಯಾಟರಾಯನಪುರ ವಿಭಾಗ ವ್ಯಾಪ್ತಿಯಲ್ಲಿನ ಜಕ್ಕೂರು ಉಪವಿಭಾಗದ ವಾರ್ಡ್ ಸಂಖ್ಯೆ 17 ರ ಜಕ್ಕೂರು ದಾಸರಹಳ್ಳಿ ಬಡಾವಣೆಯಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ಅನಧಿಕೃತವಾಗಿ ಹಾಲಿ ನಿರ್ಮಿಸಿರುವ ನೆಲ+1 ಮಹಡಿಗಳ ಕಟ್ಟಡದ ಮೇಲೆ ಹೆಚ್ಚುವರಿಯಾಗಿ 2 ಅಂತಸ್ತು ಕಟ್ಟಡ ನಿರ್ಮಾಣ ಮಾಡಲಾಗುತ್ತಿತ್ತು. ಕಟ್ಟಡದ 4ನೇ ಅಂತಸ್ತಿಗೆ ಯಾವುದೇ ಪರವಾನಿಗೆಯನ್ನು ಪಡೆಯದೇ ಅನಧಿಕೃತವಾಗಿ ನಿರ್ಮಿಸಲಾಗುತ್ತಿತ್ತು. ಇದನ್ನು ಪತ್ತೆ ಹಚ್ಚಿದ ಬೆಂಗಳೂರು ಉತ್ತರ ನಗರ ಪಾಲಿಕೆಯ ಅಧಿಕಾರಿಗಳು ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್ ರವರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆಯನ್ನು ನಡೆಸಿದ್ದಾರೆ.

ನಗರ ಪಾಲಿಕೆ ವ್ಯಾಪ್ತಿಯ ಅನಧಿಕೃತ/ನಿಯಮಬಾಹಿರ ಕಟ್ಟಡಗಳನ್ನು ನಿಯಮಾನುಸಾರ ಪರಿಶೀಲಿಸಿ ಕೂಡಲೇ ತೆರವು ಕಾರ್ಯಾಚರಣೆ ಮಾಡಲು ಹಲವು ಸಭೆಗಳಲ್ಲಿ ನಗರ ಪಾಲಿಕೆ ಆಯುಕ್ತರು ಸೂಚನೆ ನೀಡಿದ್ದರು. ಅದರ ಅನುಸಾರ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ
ಇನ್ನು ಬ್ಯಾಟರಾಯನಪುರದ ಸ್ವತ್ತು ಸಂಖ್ಯೆ: 73 ರಲ್ಲಿ ಕಟ್ಟಡ ಮಾಲೀಕರಾದ ಗಿಲ್ ರಾಯ್ ಎನ್ನುವವರು 18X30 ಸೈಟ್ ನಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ಅನಧಿಕೃತವಾಗಿ ಹಾಲಿ ನಿರ್ಮಿಸಿರುವ ನೆಲ+1 ಮಹಡಿಗಳ ಕಟ್ಟಡದ ಮೇಲೆ ಹೆಚ್ಚುವರಿಯಾಗಿ 2 ಅಂತಸ್ತು ಕಟ್ಟಡ ನಿರ್ಮಾಣ ಮಾಡುತ್ತಿದ್ದರು. ಕಟ್ಟಡದ ಮಾಲೀಕರು ಹೆಚ್ಚುವರಿಯಾಗಿ 2 ಅಂತಸ್ತು ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ನಿಲ್ಲಿಸಿ ಕಟ್ಟಿರುವ ಕಟ್ಟಡವನ್ನು ತೆರವುಗೊಳಿಸಲು ಹಲವು ಬಾರಿ ಸೂಚಿಸಿದ್ದರೂ ಸಹ ಈ ಬಗ್ಗೆ ಪಾಲಿಕೆಗೆ ಯಾವುದೇ ಮಾಹಿತಿ ಸಲ್ಲಿಸಿಲ್ಲ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮುಂದುವರಿದು ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, 4ನೇ ಮಹಡಿಯಲ್ಲಿ ನಿರ್ಮಿಸಿರುವಂತಹ ಗೋಡೆಗಳನ್ನು ಯಂತ್ರೋಪಕರಣಗಳನ್ನು ಬಳಸಿ ಸುಮಾರು 8 ಸಿಬ್ಬಂದಿ ಸೇರಿ ತೆರವು ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಈ ವೇಳೆ ಬ್ಯಾಟರಾಯನಪುರ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಸಚಿನ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವರುಣ್ ಹಾಗೂ ಜಕ್ಕೂರು ವಿಭಾಗದ ಸಹಾಯಕ ಎಂಜಿನಿಯರರು ಸೇರಿದಂತೆ ಹಲವರು ಇದ್ದರು.
ಇನ್ನಷ್ಟು ಅನಧಿಕೃತ ಕಟ್ಟಡಗಳ ತೆರವು ಸಾಧ್ಯತೆ
ಇನ್ನು ಬೆಂಗಳೂರಿನಲ್ಲಿರುವ ಇನ್ನಷ್ಟು ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕೈಗೊಳ್ಳುವ ಸಾಧ್ಯತೆ ಇದೆ. ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ಪಾಲಿಕೆಗಳ ವ್ಯಾಪ್ತಿಯಲ್ಲೂ ಈಗಾಗಲೇ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ನೋಟಿಸ್‌ಗಳನ್ನು ಜಾರಿ ಮಾಡಲಾಗುತ್ತಿದೆ.
ಬೆಂಗಳೂರಿನ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಹಲವು ಅನಧಿಕೃತ ಕಟ್ಟಡಗಳನ್ನು ಗುರುತು ಮಾಡಲಾಗಿದ್ದು, ಈ ಕಟ್ಟಡಗಳನ್ನು ಹಂತ ಹಂತವಾಗಿ ತೆರವು ಮಾಡುವ ಸಾಧ್ಯತೆ ಇದೆ.












Click it and Unblock the Notifications