ನ್ಯಾಯಾಂಗ ನಿಂದನೆ ತೂಗುಗತ್ತಿಯಿಂದ ಪಾರಾದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ
ಬೆಂಗಳೂರು, ಮಾ.17. ಕೋರ್ಟ್ ಆದೇಶ ಧಿಕ್ಕರಿಸಿ ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ಘನತ್ಯಾಜ್ಯ ಸುರಿದ ವಿಚಾರ ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸದ್ಯ ನ್ಯಾಯಾಂಗ ನಿಂದನೆ ತೂಗುಗತ್ತಿಯಿಂದ ಪರಾಗಿದ್ದಾರೆ.
ಅವರು ಬೇಷರತ್ ಕ್ಷಮೆ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರು ವಿರುದ್ಧ ಹೂಡಲು ಮುಂದಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣ ಕ್ರಮ ಕೈಗೊಳ್ಳುವ ನಿರ್ಧಾರದಿಂದ ಹಿಂದೆ ಸರಿದಿದೆ.
ಬೆಂಗಳೂರಿನಲ್ಲಿ ಅಸಮರ್ಪಕ ತ್ಯಾಜ್ಯ ವಿಲೇವಾರಿ ಸಂಬಂಧ 2021ರಲ್ಲಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಕುರಿತು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯಪೀಠ ಗುರುವಾರ ವಿಚಾರಣೆ ನಡೆಸಿತು.

ಆ ವೇಳೆ ನ್ಯಾಯಾಲಯ ಕಳೆದ ವಿಚಾರಣೆ ವೇಳೆ ನೀಡಿದ್ದ ನಿರ್ದೇಶನದಂತೆ ಪ್ರಕರಣದಲ್ಲಿ ಬೇಷರತ್ ಕ್ಷಮೆಯಾಚಿಸಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ವೈಯಕ್ತಿಕವಾಗಿ ಪ್ರಮಾಣ ಪತ್ರವನ್ನು ಸಲ್ಲಿಸಿದರು.
ಅದನ್ನು ಮಾನ್ಯ ಮಾಡಿದ ಹೈಕೋರ್ಟ್, ಆಯುಕ್ತರ ವಿರುದ್ಧ ಕ್ರಮ ಜರುಗಿಸುವ ನಿರ್ಧಾರವನ್ನು ಕೈಬಿಟ್ಟಿತು. ಜತೆಗೆ, ಭವಿಷ್ಯದಲ್ಲಿ ನ್ಯಾಯಾಲಯ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವ ಮೂಲಕ ಎಚ್ಚರದಿಂದ ಇರಬೇಕು ಎಂದು ಆಯುಕ್ತರಿಗೆ ಕಿವಿಮಾತು ಹೇಳಿತು.
ಪ್ರಮಾಣಪತ್ರದಲ್ಲೇನಿದೆ?: 'ಕೋರ್ಟ್ ಆದೇಶ ಉಲ್ಲಂಘನೆ ಆಗಿರುವುದಕ್ಕೆ ಬೇಷರತ್ ಕ್ಷಮೆ ಕೋರುತ್ತೇನೆ. ನ್ಯಾಯಾಲಯದ ಬಗ್ಗೆ ಹೆಚ್ಚಿನ ಗೌರವ ಹೊಂದಿದ್ದೇನೆ. ಯಾವುದೇ ರೀತಿಯಲ್ಲೂ ಕೋರ್ಟ್ ಆದೇಶ ಉಲ್ಲಂಘಿಸುವ ಉದ್ದೇಶ ತಮಗಿಲ್ಲ. ಸದ್ಯ ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಿದೆ. ಪ್ರಕರಣದಲ್ಲಿ ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುವುದು. ಭವಿಷ್ಯದಲ್ಲಿ ತುಂಬಾ ಎಚ್ಚರಿಕೆಯಿಂದ ಇರಲಾಗುವುದು' ಎಂದು ಗೌರವ್ ಗುಪ್ತಾ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಅದನ್ನು ಒಪ್ಪಿದ ನ್ಯಾಯಪೀಠ, ಉದ್ದೇಶಪೂರ್ವಕವಾಗಿ ಕೋರ್ಟ್ ಆದೇಶ ಉಲ್ಲಂಘಿಸಿಲ್ಲ ಎಂಬುದಾಗಿ ತಿಳಿಸಿ ಬೇಷರತ್ ಕ್ಷಮೆ ಯಾಚಿಸಿರುವ ಹಿನ್ನೆಲೆಯಲ್ಲಿ ಆಯುಕ್ತರ ವಿರುದ್ಧ ಯಾವುದೇ ಕ್ರಮ ಜರುಗಿಸಲು ಬಯಸುವುದಿಲ್ಲ. ಆದರೆ, ಆಯುಕ್ತರು ಭವಿಷ್ಯದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು. ಕೋರ್ಟ್ ಆದೇಶಗಳನ್ನು ಪಾಲಿಸಬೇಕು ಎಂದು ವಾರ್ನಿಂಗ್ ನೀಡಿತು.
ಆಯುಕ್ತರಿಗೆ ತರಾಟೆ: ನ್ಯಾಯಾಲಯದ ನಿರ್ಬಂಧ ಆದೇಶ ಉಲ್ಲಂಘಿಸಿ ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ಘನತ್ಯಾಜ್ಯವನ್ನು ಸುರಿಯುತ್ತಿರುವ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತರನ್ನು ಮಾ.5ರಂದು ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಅಲ್ಲದೆ, ಬಿಬಿಎಂಪಿ ಪದೇ ಪದೇ ಕೋರ್ಟ್ ಆದೇಶ ಉಲ್ಲಂಘಿಸಿದೆ, ಬಿಬಿಎಂಪಿ ಆಯುಕ್ತರನ್ನು ಜೈಲಿಗೆ ಕಳುಹಿಸುತ್ತೇವೆ, ಹೈಕೋರ್ಟ್ ಆದೇಶ ಎಂದರೇನೆಂದು ಅರ್ಥ ಮಾಡಿಸುತ್ತೇವೆ ಎಂದು ಎಚ್ಚರಿಕೆ ನೀಡಿತ್ತು
''ಕಾನೂನು ಎಂದರೇನೆಂದು ಆಯುಕ್ತರಿಗೆ ನಾವೇ ಮನವರಿಕೆ ಮಾಡಿಸುತ್ತೇವೆ, ಬಿಬಿಎಂಪಿ ಆಯುಕ್ತರ ನಡೆ ಗಮನಿಸುತ್ತಿದ್ದೇವೆ, ಪ್ರತಿದಿನ ಬಿಬಿಎಂಪಿಯದ್ದೇ ಸಮಸ್ಯೆ, ಈ ಬಿಬಿಎಂಪಿಯಿಂದ ಸಾಕಾಗಿಹೋಗಿದೆ. ಬಿಬಿಎಂಪಿಯವರು ಕಾನೂನಿಗಿಂತ ಅತೀತರೆಂದು ಭಾವಿಸಿದ್ದಾರೆ. ಈ ಅಧಿಕಾರಿಗಳಿಗೆ ಸರಿಯಾದ ಸಂದೇಶ ರವಾನಿಸಬೇಕಿದೆ. ಪದೇ ಪದೇ ಕರುಣೆ ತೋರಲು ಇದು ಅರ್ಹ ಪ್ರಕರಣವಲ್ಲ. ಯಾವುದೇ ಕಾನೂನು ಇವರನ್ನು ರಕ್ಷಿಸಲು ಸಾಧ್ಯವಿಲ್ಲ'' ಎಂದು ನ್ಯಾಯಪೀಠ ಖಡಕ್ ಆಗಿ ಹೇಳಿತ್ತು
ಪ್ರಕರಣದ ಹಿನ್ನೆಲೆ:
ಅರ್ಜಿದಾರರ ಪರ ವಕೀಲರು, ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ನಗರದಲ್ಲಿ ಉತ್ಪತ್ತಿಯಾಗುವ ಕಸ ಸುರಿಯುವುದರಿಂದ ಬಿಬಿಎಂಪಿಯನ್ನು ನಿರ್ಬಂಧಿಸಿ 2021ರ ಮಾ.6ರಂದು ಹೈಕೋರ್ಟ್ ಆದೇಶಿಸಿತ್ತು. ಆದರೂ ನ್ಯಾಯಾಲಯದ ಆದೇಶದ ನಂತರವೂ ಮಿಟ್ಟಗಾನಹಳ್ಳಿಯಲ್ಲಿ ಕ್ವಾರಿ ಪ್ರದೇಶಲ್ಲಿ ಕಸ ಸುರಿಯಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಕೆಎಸ್‌ಪಿಸಿಬಿ ಪರ ವಕೀಲರು, ತ್ಯಾಜ್ಯ ಸುರಿಯಲು ಮಂಡಳಿಯಿಂದ ಪಾಲಿಕೆಗೆ ಯಾವುದೇ ರೀತಿಯ ಅನುಮತಿ ನೀಡಿಲ್ಲ ಎಂದು ಇದೇ ವೇಳೆ ನ್ಯಾಯಪೀಠಕ್ಕೆ ಸ್ಪಷ್ಟಪಡಿಸಿದ್ದರು.
ಮತ್ತೊಂದೆಡೆ ಪ್ರಕರಣ ಸಂಬಂಧ ಸ್ವತಃ ಬಿಬಿಎಂಪಿಯೇ 2021ರ ನ.29ರಂದು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಘನತ್ಯಾಜ್ಯವನ್ನು ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ಸುರಿಯಲಾಗುತ್ತಿದೆ ಎಂದು ಹೇಳಿತ್ತು.
ಇದರಿಂದ ತೀವ್ರ ಬೇಸರಗೊಂಡ ನ್ಯಾಯಪೀಠ, ಮಾ.6ರ ನ್ಯಾಯಾಲಯ ನೀಡಿರುವ ಆದೇಶವನ್ನು ಬಿಬಿಎಂಪಿ ಉಲ್ಲಂಘನೆ ಮಾಡಿರುವುದು ಪ್ರಮಾಣ ಪತ್ರದಿಂದ ಸ್ಪಷ್ಟವಾಗಿದೆ. ಇದು ಸಂಪೂರ್ಣವಾಗಿ ನ್ಯಾಯಾಂಗ ನಿಂದನೆಯಾಗಿದೆ. ಯಾರ ಆದೇಶದ ಮೇರೆಗೆ ಕ್ವಾರಿ ಪ್ರದೇಶದಲ್ಲಿ ತ್ಯಾಜ್ಯ ಸುರಿಯಲಾಗಿದೆ? ಎಂದು ಪಾಲಿಕೆ ಪರ ವಕೀಲರನ್ನು ಪ್ರಶ್ನಿಸಿತ್ತು.












Click it and Unblock the Notifications