ಬೆಂಗಳೂರು : ರಕ್ತ ಮಿಶ್ರಿತ ನೀರು ನೋಡಿ ಬೆಚ್ಚಿಬಿದ್ದ ಜನ

ಶಾಂತಿನಗರ ಬಡಾವಣೆಯ ಉಗ್ರಾಣ ರಸ್ತೆಯಲ್ಲಿ ಬುಧವಾರ ಬೆಳಗ್ಗೆ 7.45ರಿಂದ ಸುಮಾರು ಒಂದು ಗಂಟೆಗಳ ಕಾಲ ಕೆಂಪು ಬಣ್ಣದ ನೀರು ಬಂದಿದೆ. ನೀರಿನ ತೊಟ್ಟಿ, ಮನೆಯಲ್ಲಿ ನೀರು ಹಿಡಿದಿರುವ ಎಲ್ಲಾ ಪಾತ್ರಗಳಲ್ಲೂ ಕೆಂಪು ನೀರು.
ಕೊನೆಗೆ ಈ ನೀರು ಕುಡಿಯಲು ಯೋಗ್ಯವಲ್ಲ ಎಂದು ಅರಿತ ಜನರು ಜಲಮಂಡಳಿಗೆ ದೂರು ನೀಡಿದರು. ಆದರೂ, ಸಂಜೆಯವರೆಗೂ ಜಲಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದೆ, ಜನರ ಕೆಂಗಣ್ಣಿಗೆ ಗುರಿಯಾದರು.
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜಾನ್ಸನ್ ಮಾರ್ಕೆಟ್ ಬಳಿ ಕುರಿ, ಕೋಳಿ ಕತ್ತರಿಸಿದ ರಕ್ತವು ಜಲಮಂಡಳಿಯ ಪೈಪ್ ಸೇರಿ ಸುಮಾರು 70ಕ್ಕೂ ಹೆಚ್ಚು ಮನೆಗಳ ನಲ್ಲಿಗಳಲ್ಲಿ ರಕ್ತಮಿಶ್ರಿತ ಕೊಳಕು ನೀರು ಬಂದಿದೆ. ಸಾರ್ವಜನಿಕರು ಜಲಮಂಡಳಿಗೆ ಹಿಡಿಶಾಪಹಾಕುತ್ತಾ, ಮಿನರಲ್ ವಾಟರ್ ತಂದಿಟ್ಟುಕೊಂಡಿದ್ದಾರೆ.
ಬೆಂಗಳೂರು ಜಲಮಂಡಳಿ ಈ ಪ್ರದೇಶದಲ್ಲೆ ಎರಡು ದಿನಕ್ಕೊಮ್ಮೆ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ತನಕ ನೀರು ಪೂರೈಕೆ ಮಾಡುತ್ತದೆ. ಆದರೆ, ಬುಧವಾರ ಹೀಗೆ ಹರಿದು ಬಂದ ನೀರಿಗೆ ರಕ್ತ ಮಿಶ್ರಣಗೊಂಡು ಅದು ಕುಡಿಯಲು ಯೋಗ್ಯವಾಗಿರಲಿಲ್ಲ.
ಎರಡು ವಾರಗಳ ಹಿಂದೆ ಇದೇ ಬಡಾವಣೆಗೆ ಒಳಚರಂಡಿ ನೀರು ಸೇರಿಕೊಂಡ ನೀರು ಬಂದಿತ್ತು. ಆಗಲೂ ಜಲಮಂಡಳಿಗೆ ದೂರು ನೀಡಿದ್ದರು. ಬುಧವಾರ ರಕ್ತ ಮಿಶ್ರಿತ ನೀರು ಬಂದಿದೆ. ಆದರೂ, ಜಲಮಂಡಳಿ ಅಧಿಕಾರಿಗಳು ಎಲ್ಲಿ ನೀರಿನ ಪೈಪ್ ಒಡೆದಿದೆ ಎಂದು ಪತ್ತೆ ಹಚ್ಚಿ ದುರಸ್ತಿ ಮಾಡಿಲ್ಲ.
ಇದರಿಂದಾಗಿ ಗೋಡೌನ್ ರಸ್ತೆಯ ನಿವಾಸಿಗಳು ಜಲಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಕ್ಷಣವೇ ಪೈಪ್ ದುರಸ್ತಿ ಮಾಡಿಸಿ, ಶುದ್ಧ ಕುಡಿಯುವ ನೀರು ಪೂರೈಸುವಂತೆ ಮನವಿ ಮಾಡಿದ್ದಾರೆ. ಇನ್ನಾದರೂ ಪ್ರದೇಶಕ್ಕೆ ಅಧಿಕಾರಿಗಳು ಆಗಮಿಸುತ್ತಾರಾ?












Click it and Unblock the Notifications