ಕೊರೊನಾ ನಂತರ ರಾಜ್ಯದಲ್ಲಿ ಆಸ್ತಿ ಖರೀದಿ ಜೋರು; 30% ಹೆಚ್ಚಳ, ಕಾರಣವೇನು ಗೊತ್ತೆ?
ಬೆಂಗಳೂರು, ಏಪ್ರಿಲ್. 09: ಕೊರೊನಾ ಸಾಂಕ್ರಾಮಿಕದಿಂದ ಜನರ ಜೀವನ ಅಸ್ತವ್ಯಸ್ತವಾಗಿತ್ತು. ನಗರಗಳಲ್ಲಿ ಮನೆಗಳು, ನಿವೇಶನಗಳು ಖಾಲಿ ಹೊಡೆಯುತ್ತಿದ್ದವು. ಕೊಳ್ಳುವವರು ಇಲ್ಲದೆ ರಿಯಲ್ ಎಸ್ಟೇಟ್ ಉದ್ಯಮ ಸೊರಗಿತ್ತು. ಆದರೆ ಈಗ ರಾಜ್ಯದ ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಅಂಕಿಅಂಶಗಳು ಹೊಸ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಆಸ್ತಿ ಖರೀದಿಗಳು ಜೋರಾಗಿ ನಡೆಯುತ್ತಿವೆ ಎಂದಿದೆ.
2022-23ರಲ್ಲಿ, ಆಸ್ತಿ ನೋಂದಣಿಗಳು ಸಾಂಕ್ರಾಮಿಕ ಪೂರ್ವದ ಮಟ್ಟಕ್ಕಿಂತ ಸುಮಾರು 30 ಪ್ರತಿಶತದಷ್ಟು ಹೆಚ್ಚಾಗಿವೆ. ಈ ಸಮಯದಲ್ಲಿ ರಾಜ್ಯ ಸರ್ಕಾರವು ಸುಮಾರು 18,000 ಕೋಟಿ ರೂಪಾಯಿಗಳನ್ನು ಗಳಿಸಿದೆ. ಇದು ಬಜೆಟ್ ಗುರಿಗಿಂತ 20% ಹೆಚ್ಚಳವಾಗಿದೆ. ಸಾಂಕ್ರಾಮಿಕ ರೋಗದ ನಂತರ ರಿಯಲ್ ಎಸ್ಟೇಟ್ ಉದ್ಯಮ ಮತ್ತೆ ಸಹಜ ಸ್ಥಿತಿಗೆ ಬಂದಿರುವುದ ಮತ್ತು ಗ್ರಾಮೀಣ ಭಾಗಗಳಿಂದ ಬೆಂಗಳೂರಿಗೆ ಕೆಲಸಕ್ಕೆ ಹೋಗುವವರು ಹಿಂತಿರುಗಿರುವುದು ಈ ಬೇಡಿಕೆಯನ್ನು ಹೆಚ್ಚಿಸಿದೆ ಎಂದು ತಜ್ಞರು ಹೇಳಿದ್ದಾರೆ.

"ಬೆಂಗಳೂರಿನಲ್ಲಿ ಐಟಿ ವೃತ್ತಿಪರರನ್ನು ಒಳಗೊಂಡಿರುವ ಪ್ರಮುಖ ಗ್ರಾಹಕರ ನೆಲೆಯ ಮೇಲೆ ಸಾಂಕ್ರಾಮಿಕ ರೋಗ ಕಡಿಮೆ ಪರಿಣಾಮ ಬೀರಿದೆ. ಹೀಗಾಗಿ ಇದು ಈಗ ಆಸ್ತಿ ಖರೀದೆ ಹೆಚ್ಚಾಗುತ್ತಿದೆ. ಇದಲ್ಲದೆ, ಹೆಚ್ಚಿನ ನಿರೀಕ್ಷಿತ ಬಳಕೆದಾರರು ಡೆವಲಪರ್‌ಗಳು ನೀಡುವ ರಿಯಾಯಿತಿಗಳು ಮತ್ತು ಕೊಡುಗೆಗಳ ಲಾಭವನ್ನು ಪಡೆಯಲು ಬಯಸುತ್ತಾರೆ" ಎಂದು ಎನಾರಾಕ್ ಗ್ರೂಪ್‌ನ ಅಧ್ಯಕ್ಷ ಅನುಜ್ ಪುರಿ ಹೇಳಿದ್ದಾರೆ.
ಅನೇಕ ಎನ್ಆರ್ಐಗಳು ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡುತ್ತಾರೆ ಎಂದು ರಿಯಲ್ ಎಸ್ಟೇಟ್ ವಿಶ್ಲೇಷಕರು ಹೇಳುತ್ತಾರೆ. "ಇತರ ದೇಶಗಳಲ್ಲಿನ ಆರ್ಥಿಕ ಕುಸಿತ ಮತ್ತು ಜಾಗತಿಕವಾಗಿ ಕೆಲಸದಿಂದ ವಜಾಗೊಳಿಸುವಿಕೆಯಿಂದಾಗಿ, ಅನೇಕ ಭಾರತೀಯರು ಹಿಂತಿರುಗುತ್ತಿದ್ದಾರೆ. ಈಗ ಮಾರುಕಟ್ಟೆಯು ಅನುಕೂಲಕರವಾಗಿರುವುದರಿಂದ, ಅವರು ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡುತ್ತಾರೆ" ಎಂದು ವಿಶ್ಲೇಷಕರು ತಿಳಿಸುತ್ತಾರೆ.
ಈ ಆಸ್ತಿ ಖರೀದಿಯ ಹೆಚ್ಚಳ ಗ್ರಾಮೀಣ ಪ್ರದೇಶಗಳಿಗೂ ಅನ್ವಯಿಸುತ್ತದೆ ಎಂದು ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. '2020 ರಲ್ಲಿ, ಸರ್ಕಾರವು ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿತು. ಕೃಷಿ ಹಿನ್ನೆಲೆ ಇಲ್ಲದವರಿಗೂ ಕೃಷಿ ಭೂಮಿಯನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿತು. ಇದರಿಂದ ಗ್ರಾಮೀಣ ಆಸ್ತಿ ಮಾರಾಟವೂ ಹೆಚ್ಚುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಮಾರಾಟವು ಈಗ 50% ರಷ್ಟು ಕೊಡುಗೆ ನೀಡುತ್ತಿದೆ. ಈ ಮೊದಲು 30% ಕೊಡುಗೆ ನೀಡುತ್ತಿತ್ತು' ಎಂದು ಅಧಿಕಾರಿ ತಿಳಿಸಿದ್ದಾರೆ.

ಇದಲ್ಲದೆ, ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಬಾಡಿಗೆಗಳು ಮತ್ತು ಉತ್ತಮ ವಸತಿಗಳ ಅಗತ್ಯವೂ ಆಸ್ತಿ ಖರೀದಿ ಏರಿಕೆಗೆ ಕಾರಣವಾಗಿದೆ ಎಂದು ಕ್ರೆಡೈ ಬೆಂಗಳೂರು ಅಧ್ಯಕ್ಷ ಸುರೇಶ್ ಹರಿ ಹೇಳಿದ್ದಾರೆ. " ಅನೇಕರು ಮನೆಯಿಂದ ಕೆಲಸದ ಸಮಯದಲ್ಲಿ ಮನೆಯಲ್ಲಿಯೇ ಸಮಯ ಕಳೆಯುತ್ತಿದ್ದರಿಂದ, ಉತ್ತಮ ಜೀವನ ಸೌಲಭ್ಯದ ಅಗತ್ಯವನ್ನು ತಿಳಿದುಕೊಂಡಿದ್ದಾರೆ. ಹೀಗಾಗಿ ಈಗ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸಲು ಅನೇಕ ಡೆವಲಪರ್‌ಗಳು ತಮ್ಮ ಆಸ್ತಿಯನ್ನು ಮರು ಜೋಡಣೆ ಮಾಡಿದ್ದಾರೆ" ಎಂದು ಹೇಳಿದ್ದಾರೆ.
ಮಾರ್ಗದರ್ಶಿ ಮೌಲ್ಯದ ಹೆಚ್ಚಳವನ್ನು ತಡೆಹಿಡಿಯುವ ಸರ್ಕಾರದ ನಿರ್ಧಾರವು ಆಸ್ತಿಯನ್ನು ಖರೀದಿಸಲು ಜನರನ್ನು ಉತ್ತೇಜಿಸಿದೆ ಎಂದು ನೋಂದಣಿಯ ಇನ್ಸ್‌ಪೆಕ್ಟರ್ ಜನರಲ್ ಮತ್ತು ಸ್ಟ್ಯಾಂಪ್‌ಗಳ ಆಯುಕ್ತರಾದ ಮಮತಾ ಬಿ ಆರ್ ಹೇಳಿದ್ದಾರೆ. "ಪ್ರತಿ ವರ್ಷ ಮಾರ್ಗದರ್ಶಿ ಮೌಲ್ಯದಲ್ಲಿ 15% ಹೆಚ್ಚಳವಿದೆ. ಆದರೆ ಸಾಂಕ್ರಾಮಿಕ ರೋಗದಿಂದ, ಇದು ಸುಮಾರು ನಾಲ್ಕು ವರ್ಷಗಳಿಂದ ಬದಲಾಗದೆ ಉಳಿದಿದೆ. ಖರೀದಿದಾರರಿಗೆ ಇದು ಶೀಘ್ರದಲ್ಲೇ ಏರಿಕೆಯಾಗಬಹುದು ಎಂದು ತಿಳಿದಿದೆ. ಹೀಗಾಗಿ ಅವರಲ್ಲಿ ಹಲವರು ಆಸ್ತಿ ಖರೀದಿಯನ್ನು ತ್ವರಿತಗೊಳಿಸಿರಬಹುದು" ಎಂದು ತಿಳಿಸಿದ್ದಾರೆ.
ಇಲಾಖೆಯು 2022-23ರಲ್ಲಿ ಎರಡು ಬಾರಿ ಎಲ್ಲಾ ಆಸ್ತಿ ವಹಿವಾಟುಗಳಿಗೆ ಮಾರ್ಗದರ್ಶಿ ಮೌಲ್ಯದ ಮೇಲೆ 10% ರಿಯಾಯಿತಿಯನ್ನು ನೀಡಿ, ನೋಂದಣಿಗಳನ್ನು ಹೆಚ್ಚಿಸಿತು.
(ಮಾಹಿತಿ ಕೃಪೆ: ಡೆಕ್ಕನ್ ಹೆರಾಲ್ಡ್)












Click it and Unblock the Notifications