ಕೇಂದ್ರ ಸಚಿವರ ಮನೆ ಎದುರಲ್ಲೇ ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಹತ್ಯೆ!
ಬೆಂಗಳೂರು, ಡಿ. 06: ಆನೇಕಲ್ ರಿಯಲ್ ಎಸ್ಟೇಟ್ ಮಾಫಿಯಾ ಹಿಂದಿರುವ ಪಾತಕ ಲೋಕ ಅನಾವರಣಗೊಂಡಿದೆ. ರಿಯಲ್ ಎಸ್ಟೇಟ್ ಉದ್ಯಮಿಯ ತಲೆಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪಟ್ಟಣದ ಶಿವಾಜಿವೃತ್ತದ ಬಳಿ ಸಂಭವಿಸಿದೆ. ಕೇಂದ್ರ ಸಚಿವ ನಾರಾಯಣಸ್ವಾಮಿ ಅವರ ಮನೆಯ ಮುಂಭಾಗದಲ್ಲಿಯೇ ಬರ್ಬರ ಹತ್ಯೆ ನಡೆದಿರುವುದು ಪೊಲೀಸರ ಮೇಲಿನ ನಂಬಿಕೆ ಇಲ್ಲದಂತಾಗಿದೆ.
ಮಧುಗಿರಿ ಮೂಲದ ಬಿಟಿಎಂ ಲೇಔಟ್ ನಿವಾಸಿ ರಾಜಶೇಖರ ರೆಡ್ಡಿ (35) ಕೊಲೆಯಾದ ವ್ಯಕ್ತಿ. ಬಿಟಿಎಂ ಲೇಔಟ್ ನ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದ ರಾಜಶೇಖರ ರೆಡ್ಡಿ ಮೂರು ವರ್ಷದಿಂದ ರಿಯಲ್ ಎಸ್ಟೇಟ್ ವಹಿವಾಟು ನಡೆಸುತ್ತಿದ್ದ. ಬುಧವಾರ ಜಮೀನಿನ ನೋಂದಣಿ ವಿಚಾರವಾಗಿ ಆನೇಕಲ್ ಪಟ್ಟಣದ ನ್ಯಾಯಾಲಯಕ್ಕೆ ಹೋಗಿದ್ದರು. ಅಲ್ಲಿ ಕೆಲಸ ಮುಗಿಸಿಕೊಂಡು ಚಂದಾಪುರ ಮಾರ್ಗವಾಗಿ ತನ್ನ ಸ್ವಿಫ್ಟ್ ಕಾರಿನಲ್ಲಿ ತೆರಳಿದ್ದರು.
ಕೇಂದ್ರ ಸಚಿವ ನಾರಾಯಣಸ್ವಾಮಿ ಮನೆ ಸಮೀಪ ಹೋಗುವಾಗ ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದಿರುವ ದುಷ್ಕರ್ಮಿಗಳು, ಸಾರ್ವಜನಿಕರ ಎದುರಲ್ಲೇ ರಾಜಶೇಖರರೆಡ್ಡಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಸಾವಿರಾರು ಜನ ಸ್ಥಳದಲ್ಲಿ ಜಮಾಯಿಸಿದ್ದಾರೆ. ಹಾಡ ಹಗಲೇ ಸಾರ್ವಜನಿಕವಾಗಿ ಒಬ್ಬ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಎಸ್. ವಿ. ಬಾಬು ಎನ್ನುವವರಿಗೆ ಸೇರಿದ ಜಮೀನನ್ನು ನೋಂದಣಿ ಮಾಡುವ ಕಾರ್ಯ ನಿಗದಿ ಮಾಡಲಾಗಿತ್ತು. ಈ ಸಂಬಂಧ ದಾಖಲೆಗಳ ಸಮೇತ ರಾಜಶೇಖರ್ ಆಗಮಿಸಿದ್ದರು. ಈ ವೇಳೆ ಹಿಂಬಾಲಿಸಿಕೊಂಡು ಬಂದು ಹತ್ಯೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಲಕ್ಷ್ಮೀ ಗಣೇಶ್, ಡಿವೈಎಸ್ಪಿ ಮಲ್ಲೇಶ್ ಭೇಟಿ ಮಾಡಿ ಪರಿಶೀಲನೆ ನಡೆಸಿದರು. ಮಧುಗಿರಿ ಮೂಲದ ರಾಜಶೇಖರ್ ರೆಡ್ಡಿಯನ್ನು ವಿವಾದಿತ ಜಮೀನಿನ ವಿಚಾರವಾಗಿ ಕೊಲೆ ಮಾಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಬೆಳಕಿಗೆ ಬಂದಿದೆ. ಆನೇಕಲ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಎರಡು ತಂಡ ರಚನೆ:
ಆನೇಕಲ್‌ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಸಂಬಂಧ ಎರಡು ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಶೇಖರರೆಡ್ಡಿಯನ್ನು ಹಿಂಬಾಲಿಸಿರುವ ಬೈಕ್ ನಂಬರ್ ಆಧರಿಸಿ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇನ್ನು ರಾಜಶೇಖರರೆಡ್ಡಿಗೆ ನಿರಂತರವಾಗಿ ಬಂದಿರುವ ಕರೆಗಳ ಜಾಡು ಹಿಡಿದು ತನಿಖೆ ನಡೆಸಲಾಗುತ್ತಿದೆ. ಅತ್ತಿಬೆಲೆ ಸಮೀಪದ ಇಂಡ್ಲಬೆಲೆ ಜಮೀನಿನ ವಿಚಾರವಾಗಿ ಕೊಲೆಯಾಗಿರುವ ಅನುಮಾನ ವ್ಯಕ್ತವಾಗಿದೆ. 2.7 ಎಕರೆ ಜಮೀನಿನ ಖರೀದಿ ವಿಚಾರವಾಗಿ ವಿವಾದ ಉಂಟಾಗಿತ್ತು. ಇದೇ ಜಮೀನಿನ ವಿಚಾರವಾಗಿ ರಾಜಶೇಖರರೆಡ್ಡಿ ವಕೀಲರನ್ನು ಸಂಪರ್ಕಿಸಿದ್ದರು. ಬಾಬು ಎಂಬುವರಿಗೆ ಸೇರಿದ ಜಮೀನಿನ ನೋಂದಣಿ ಮಾಡುವ ಕಾರ್ಯ ಬಾಕಿ ಇತ್ತು. ಈ ಹಂತದಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಬೆಂಗಳೂರು ಹೊರ ವಲಯದಲ್ಲಿ ಇತ್ತೀಚೆಗೆ ಪಾತಕಿಗಳ ಅಟ್ಟಹಾಸ ಮೆರೆಯುತ್ತಿರುವ ಘಟನೆಗಳು ಪದೇ ಪದೇ ಮರುಕಳಿಸುತ್ತಿವೆ. ಹಾಡ ಹಗಲೇ ನಡು ರಸ್ತೆಯಲ್ಲಿ ಭೀಕರ ಕೊಲೆಗಳಾಗುತ್ತಿವೆ. ಕೆಲ ದಿನಗಳ ಹಿಂದಷ್ಟೇ ರೌಡಿ ಶೀಟರ್ ಜೆಸಿಬಿ ನಾರಾಯಣನ ದಾಳಿ ಯತ್ನ ನಡೆದಿತ್ತು. ಕೆಲ ದಿನಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿ ಸಮೀಪ ಅರ್ಚನಾರೆಡ್ಡಿ ಎಂಬ ಮಹಿಳೆಯನ್ನು ರಸ್ತೆಯಲ್ಲಿಯೇ ಭೀಕರವಾಗಿ ಹತ್ಯೆ ಮಾಡಿದ್ದರು. ಇದೀಗ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಸಾರ್ವಜನಿಕವಾಗಿ ಹತ್ಯೆ ಮಾಡುವ ಮೂಲಕ ಸಮಾಜದಲ್ಲಿ ಪಾತಕಿಗಳು ಭೀತಿ ಹುಟ್ಟಿಸಿದ್ದಾರೆ. ನಾವು ಮನಸು ಮಾಡಿದರೆ ಪೊಲೀಸರದ್ದು ಏನೂ ನಡೆಯಲ್ಲ ಎನ್ನುವ ಮಟ್ಟಿಗೆ ಭೀತಿ ಸೃಷ್ಟಿಸಿದ್ದಾರೆ. ಈ ಪರಿಯ ಅಪರಾಧ ಕೃತ್ಯಗಳು ವರದಿಯಾಗುತ್ತಿದ್ದರೂ, ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ, ಎಲ್ಲಾ ಮುಗಿದ ಬಳಿಕ ತನಿಖೆ ಭಾಗವಾಗಿ ಎಂಟ್ರಿ ಕೊಡುತ್ತಿದ್ದಾರೆ.












Click it and Unblock the Notifications