Ranya Rao Gold Smuggling: ರನ್ಯಾ ರಾವ್ ಚಿನ್ನ ಸಾಗಣೆ ಕೇಸ್, ಮತ್ತೊಂದು ಬಂಧನ
ಬೆಂಗಳೂರು, ಮಾರ್ಚ್ 10: ನಟಿ, ಐಪಿಎಸ್ ಅಧಿಕಾರಿ ಪುತ್ರಿ ರನ್ಯಾ ರಾವ್ ಚಿನ್ನ ಅಕ್ರಮ ಕಳ್ಳ ಸಾಗಣೆ ಪ್ರಕರಣ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಕೇಸ್‌ನಲ್ಲಿ ಈಗ ಸಿಬಿಐ ಸಹ ತನಿಖೆ ಕೈಗೊಂಡಿದ್ದು, ಅಕ್ರಮ ಹಣ ವರ್ಗಾವಣೆ ಹಿನ್ನಲೆಯಲ್ಲಿ ಇಡಿ ಸಹ ತನಿಖೆಯನ್ನು ಕೈಗೊಳ್ಳುವ ಸಾಧ್ಯತೆ ಇದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಬಂಧಿಸಲಾಗಿತ್ತು, ಈಗ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಬಂಧಿಸಲಾಗಿದೆ.
ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ನಟಿ ರನ್ಯಾ ರಾವ್ ಮೂಲಕ ಚಿನ್ನವನ್ನು ತರಿಸುತ್ತಿದ್ದ ಆರೋಪಿಯನ್ನು ಸೋಮವಾರ ಬೆಂಗಳೂರು ನಗರದಲ್ಲಿ ಬಂಧಿಸಿದ್ದಾರೆ. ಇಂದು ಬೆಳಗ್ಗೆಯಿಂದ ವಿಚಾರಣೆ ನಡೆಸಿ, ಮಧ್ಯಾಹ್ನ ಆರೋಪಿ ತರುಣ್ ರಾಜ್ ಬಂಧಿಸಿದ್ದಾರೆ.

ಬಂಧಿತ ಆರೋಪಿ ತರುಣ್ ರಾಜ್ ಬೆಂಗಳೂರು ನಗರದ ಉದ್ಯಮಿಯೊಬ್ಬರ ಪುತ್ರ. ದುಬೈನಿಂದ ರನ್ಯಾ ರಾವ್ ಮೂಲಕ ಬಂಧಿತ ಆರೋಪಿ ಚಿನ್ನ ತರಿಸುತ್ತಿದ್ದ ಎಂಬುದು ಆರೋಪವಾಗಿದೆ. ತರುಣ್ ರಾಜ್ ಫೈವ್ ಸ್ಟಾರ್ ಹೋಟೆಲ್ ಮಾಲೀಕನ ತಮ್ಮನ ಮಗ ಎಂಬ ಮಾಹಿತಿ ಸಿಕ್ಕಿದೆ.
ಮಾಣಿಕ್ಯ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ರನ್ಯಾ ರಾವ್ ದುಬೈನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದರು. ಕೋರ್ಟ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಡಿಆರ್‌ಐ ಅಧಿಕಾರಿಗಳು ಪುನಃ ಕೋರ್ಟ್ ಮೊರೆ ಹೋಗಿ, ಮೂರು ದಿನಗಳ ಕಾಲ ಅವರನ್ನು ವಶಕ್ಕೆ ಪಡೆದುಕೊಂಡಿದೆ. ಈ ಕಸ್ಟಡಿ ಅವಧಿ ಸೋಮವಾರ ಅಂತ್ಯವಾಗಲಿದೆ.
ಶನಿವಾರ ಸಿಬಿಐ ರನ್ಯಾ ರಾವ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದೆ. ಡಿಆರ್‌ಐ ಅಧಿಕಾರಿಗಳ ಜೊತೆ ಸಿಬಿಐ ತನಿಖೆ ಕೈಗೊಂಡಿದ್ದು, ಮುಂಬೈ ಮತ್ತು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇಂತಹ ಹೊತ್ತಿನಲ್ಲಿಯೇ ಪ್ರಕರಣಕ್ಕೆ ಸಂಬಂಧಿಸಿದಂತೆ ತರುಣ್ ರಾಜ್ ಎನ್ನುವ ಆರೋಪಿ ಬಂಧಿಸಲಾಗಿದೆ.
14 ಕೆಜಿ ಚಿನ್ನ ವಶಕ್ಕೆ: ಮಾರ್ಚ್ 3ರಂದು ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ರನ್ಯಾ ರಾವ್ ಬಂಧಿಸಲಾಗಿತ್ತು. ಆಕೆಯ ಬಳಿ ಇದ್ದ 12.56 ಕೋಟಿ ರೂ. ಮೌಲ್ಯದ 14.2 ಕೆಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಆಕೆಯನ್ನು ಡಿಆರ್‌ಐ ಅಧಿಕಾರಿಗಳು ವಿಚಾರಣೆ ನಡೆಸಿ, ಬಂಧಿಸಿದ್ದರು.
ಬಳಿಕ ರನ್ಯಾ ರಾವ್ ಇರುವ ಬೆಂಗಳೂರು ನಗರದ ಲ್ಯಾವೆಲ್ಲೆ ರಸ್ತೆಯ ಫ್ಲ್ಯಾಟ್ ಮೇಲೆ ದಾಳಿ ಮಾಡಲಾಗಿತ್ತು. ಆಗ ಡಿಆರ್‌ಐ ಅಧಿಕಾರಿಗಳು 17.29 ಕೋಟಿ ರೂ. ಮೌಲ್ಯದ ಚಿನ್ನದ ಬಿಸ್ಕತ್, ಹಣವನ್ನು ಜಪ್ತಿ ಮಾಡಿದ್ದರು.
ಚಿನ್ನ ಕಳ್ಳಸಾಗಣೆ ಬಗ್ಗೆ ರನ್ಯಾ ರಾವ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಈ ಪ್ರಕರಣದ ಕುರಿತು ರಾಜಕೀಯ ಚರ್ಚೆಗಳು ಪ್ರಾರಂಭವಾಗಿದ್ದು, ಆಕೆಯ ಹಿಂದೆ ಪ್ರಭಾವಿ ಸಚಿವರ ಕೈವಾಡವಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪವನ್ನು ಮಾಡುತ್ತಿದೆ.












Click it and Unblock the Notifications