ರಾಮೇಶ್ವರಂ ಕೆಫೆ ಸ್ಫೋಟ: ಮಾಧ್ಯಮಗಳಿಗೆ ಪೊಲೀಸರ ಕಿವಿಮಾತು
ಬೆಂಗಳೂರು, ಮಾರ್ಚ್ 03: ಬೆಂಗಳೂರಿನ ಸಿಸಿಬಿ ಪೊಲೀಸರು ರಾಮೇಶ್ವರಂ ಕೆಫೆ ಸ್ಫೋಟದ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಮಾಧ್ಯಮಗಳಲ್ಲಿ ತನಿಖೆಯ ಕುರಿತು ಸರಣಿ ವರದಿಗಳು ಬರುತ್ತುವೆ. ಇಂತಹ ಸಂದರ್ಭದಲ್ಲಿ ಬೆಂಗಳೂರು ಪೊಲೀಸರು ಮಾಧ್ಯಮಗಳಿಗೆ ಕಿವಿಮಾತು ಹೇಳಿದ್ದಾರೆ.
ಭಾನುವಾರ ಬೆಂಗಳೂರು ನಗರ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, "ಮಾಧ್ಯಮದ ಮಿತ್ರರಲ್ಲಿ ವಿನಂತಿ, ತನಿಖೆಯ ವಿವರಗಳನ್ನು ಅಥವಾ ಕಪೋಲಕಲ್ಪಿತ ವರದಿಗಳನ್ನು ಬಿತ್ತರಿಸದಿರಿ. ತನಿಖಾ ತಂಡಗಳು ಸ್ವತಂತ್ರವಾಗಿ ಮತ್ತು ವೃತ್ತಿಪರವಾಗಿ ಕೆಲಸ ಮಾಡಲು ಅನುವು ಮಾಡಿಕೊಡಿ" ಎಂದು ತಿಳಿಸಿದ್ದಾರೆ.

ಶನಿವಾರ, "ರಾಮೇಶ್ವರಂ ಕೆಫೆ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಕ್ಷಿಪ್ರ ಗತಿಯಲ್ಲಿ ನಡೆಯುತ್ತಿದೆ. ಘಟನಾ ಸ್ಥಳದಲ್ಲಿ ದೊರೆತ ಕುರುಹುಗಳ ಆಧಾರದ ಮೇಲೆ ಅನೇಕ ಪೊಲೀಸ್ ತಂಡಗಳು ಬೇರೆ ಬೇರೆ ಆಯಾಮಗಳಿಂದ ತನಿಖೆ ಕೈಗೊಳ್ಳುತ್ತಿವೆ. ಇದೊಂದು ಭದ್ರತಾ ವಿಷಯಕ್ಕೆ ಸಂಬಂಧಿಸಿದ ಸೂಕ್ಷ್ಮ ಪ್ರಕರಣವಾಗಿರುವುದರಿಂದ ಮಾಧ್ಯಮದವರು ಸಹಕರಿಸಬೇಕಾಗಿ ಕೋರಿದೆ" ಎಂದು ಮನವಿ ಮಾಡಿದ್ದರು.
"ಪ್ರಕರಣದ ತನಿಖೆಯನ್ನು ಕೇಂದ್ರ ಅಪರಾಧ ದಳಕ್ಕೆ (ಸಿಸಿಬಿ) ವಹಿಸಲಾಗಿದೆ. ಘಟನೆಯಲ್ಲಿನ ಗಾಯಾಳುಗಳು ಗುಣಮುಖರಾಗುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿರುವುದಿಲ್ಲ" ಎಂದು ಸಹ ಮಾಧ್ಯಮಗಳಲ್ಲಿ ಪ್ರಸಾರವಾದ ವರದಿನ್ನು ನೋಡಿದ ಮೇಲೆ ಪೊಲೀಸರು ಸ್ಪಷ್ಟನೆಯನ್ನು ನೀಡಿದ್ದರು.
ಮಾಧ್ಯಮದ ಮಿತ್ರರಲ್ಲಿ ವಿನಂತಿ : ತನಿಖೆಯ ವಿವರಗಳನ್ನು ಅಥವಾ ಕಪೋಲಕಲ್ಪಿತ ವರದಿಗಳನ್ನು ಬಿತ್ತರಿಸದಿರಿ. ತನಿಖಾ ತಂಡಗಳು ಸ್ವತಂತ್ರವಾಗಿ ಮತ್ತು ವೃತ್ತಿಪರವಾಗಿ ಕೆಲಸ ಮಾಡಲು ಅನುವು ಮಾಡಿಕೊಡಿ. https://t.co/glXK21xNQx
— CP Bengaluru ಪೊಲೀಸ್ ಆಯುಕ್ತ ಬೆಂಗಳೂರು (@CPBlr) March 3, 2024
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂಬುದು ಸೇರಿದಂತೆ ಮಾಧ್ಯಮಗಳಲ್ಲಿ ಅದರಲ್ಲೂ ಟಿವಿ ಮಾಧ್ಯಮದಲ್ಲಿ ಹಲವಾರು ಸುದ್ದಿಗಳು ಪ್ರಸಾರವಾಗುತ್ತಿವೆ. ಆದ್ದರಿಂದ ಸಾಮಾಜಿಕ ಜಾಲತಾಣದ ಮೂಲಕ ಪೊಲೀಸರು ಸ್ಪಷ್ಟನೆಗಳನ್ನು ನೀಡುತ್ತಿದ್ದಾರೆ.
ಗೃಹ ಸಚಿವರ ಸಭೆ: ಗೃಹ ಸಚಿವ ಡಾ. ಜಿ. ಪರಮೇಶ್ವರ ಭಾನುವಾರ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಗರದ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದರು. ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಘಟನೆಯ ತನಿಖೆ ಕುರಿತು ಮಾಹಿತಿ ಪಡೆದರು. ಗಂಭೀರ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ತನಿಖೆ ವೇಳೆ ಕೈಗೊಳ್ಳಬೇಕಾದ ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಈ ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ದಯಾನಂದ್, ಗುಪ್ತಚರ ದಳದ ಎಡಿಜಿಪಿ ಶರತ್ ಚಂದ್ರ, ಕಾನೂನು ಸುವ್ಯವಸ್ಥೆಯ ಎಡಿಜಿಪಿ ಹಿತೇಂದ್ರ, ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಹಾಗೂ ಎಲ್ಲಾ ವಿಭಾಗದ ಡಿಸಿಪಿಗಳು ಉಪಸ್ಥಿತರಿದ್ದರು.
ಪ್ರತಿಪಕ್ಷ ಬಿಜೆಪಿ ಈ ಸ್ಫೋಟ ಪ್ರಕರಣದ ಬಗ್ಗೆ ಸರ್ಕಾರವನ್ನು ಟೀಕಿಸುತ್ತಿದೆ. ಉನ್ನತ ಮಟ್ಟದ ತನಿಖೆಗೆ ಆಗ್ರಹಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, "ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ತೀವ್ರತೆಯನ್ನು ಸರ್ಕಾರ ಇನ್ನೂ ಅರಿತುಕೊಂಡಿಲ್ಲ. ಬಾಂಬ್ ಸ್ಫೋಟ ಪ್ರಕರಣಕ್ಕೆ ಉಗ್ರ ಸಂಪರ್ಕವಿದೆ. ಪಾಕಿಸ್ಥಾನ ಪರವಾದ ಘೋಷಣೆ ಮತ್ತು ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ ಕಾಕತಾಳೀಯವಲ್ಲ. ಇದರ ಹಿಂದೆ ವ್ಯವಸ್ಥಿತವಾದ ಸಂಚು ಇದೆ" ಎಂದು ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್. ಅಶೋಕ ಮಾತನಾಡಿ, "ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣ ನಡೆದು ದಿನ ಕಳೆದರೂ, ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಕಾಂಗ್ರೆಸ್ ಪಕ್ಷದ ಮನಸ್ಥಿತಿ ಬದಲಾಗದ ಹೊರತು ಭಯೋತ್ಪಾದನೆಯಂತಹ ಘಟನೆಗಳು ನಿಲ್ಲುವುದಿಲ್ಲ. ಬಾಂಬ್ ಸ್ಫೋಟ ಪ್ರಕರಣವನ್ನು ಸರ್ಕಾರ ಕೂಡಲೇ ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸುತ್ತೇನೆ" ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಮಾತನಾಡಿ, "ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಐಇಡಿ ಬ್ಲಾಸ್ಟ್ ಆಗಿರುವುದನ್ನು ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಸಂಸದರ ವಿಜಯೋತ್ಸವದಲ್ಲಿ ಪಾಕಿಸ್ಥಾನ ಪರವಾದ ಘೋಷಣೆ ಮತ್ತು ಇಂದು ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧ ಇರುವ ಲಕ್ಷಣಗಳು ಕಾಣುತ್ತಿವೆ. ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆಯ ರಾಜಕಾರಣ ರಾಜ್ಯದ ಜನತೆಗೆ ಆತಂಕ ತಂದೊಡ್ಡಿದೆ" ಎಂದು ಹೇಳಿದ್ದರು.












Click it and Unblock the Notifications