ಅಡ್ಡ ಪಲ್ಲಕ್ಕಿ ವಿವಾದಕ್ಕೆ ರಾತ್ರೋರಾತ್ರಿ ತೆರೆ
ಬೆಂಗಳೂರು, ಅ.2 : ಕಳೆದ ಒಂದು ವಾರದಿಂದ ಭಾರೀ ಚರ್ಚೆಗೆ ಕಾರಣವಾಗಿದ್ದ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ವಿವಾದಕ್ಕೆ ಮಂಗಳವಾರ ತಡರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಬರದಂತೆ ಉತ್ಸವ ನಡೆಸಲು ಸಿಎಂ ಅನುಮತಿ ನೀಡಿದ್ದಾರೆ.
ಗುಲ್ಬರ್ಗ ಜಿಲ್ಲೆಯ ಜೇವರ್ಗಿಯಲ್ಲಿ ನಡೆಯಬೇಕಿದ್ದ ರಂಭಾಪುರಿ ಜಗದ್ಗುರುಗಳ ದಸರಾ ಮಹೋತ್ಸವ ಹಾಗೂ ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ಅದರ ವಿರುದ್ಧ ಬಂಡೆದ್ದು ಆಯೋಜಿಸಲಾಗಿದ್ದ 'ಶರಣರ ಜೀವನ ದರ್ಶನ ಪ್ರವಚನ' ಕಾರ್ಯಕ್ರಮಕ್ಕೆ ಗುಲ್ಬರ್ಗ ಜಿಲ್ಲಾಧಿಕಾರಿ ಮಂಗಳವಾರ ತಡೆ ನೀಡಿದ್ದರು.

ಅಡ್ಡಪಲ್ಲಕ್ಕಿ ಉತ್ಸವಕ್ಕೆ ತಡೆ ಹೇರಿದ್ದನ್ನು ವಿರೋಧಿಸಿ ವೀರಶೈವ ಪಂಚಪೀಠಗಳಲ್ಲಿ ಒಂದಾದ ಕೇದಾರ ಪೀಠದ ಅಧ್ಯಕ್ಷ ಭೀಮಾಶಂಕರ ಶಿವಾಚಾರ್ಯ ಸ್ವಾಮೀಜಿಗಳು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನಿವಾಸದ ಎದುರು ಮಂಗಳವಾರ ರಾತ್ರೋರಾತ್ರಿ ಪ್ರತಿಭಟನೆ ನಡೆಸಿದರು.
ಹಲವು ಸುತ್ತುಗಳ ಮಾತುಕತೆ, ಸಂಧಾನದ ಬಳಿಕ ಉತ್ಸವ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮತಿ ನೀಡಿದ್ದಾರೆ. ಆದರೆ, ಯಾವುದೇ ರೀತಿಯ ಅಹಿತಕರ ಘಟನೆ ನಡೆದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ವಿವಾದವೇನು : ರಂಭಾಪುರಿ ಮಠಾಧೀಶರು ಪ್ರತಿವರ್ಷ ಒಂದೊಂದು ಜಿಲ್ಲೆಯಲ್ಲಿ ದಸರಾ ಹಾಗೂ ಅಡ್ಡಪಲ್ಲಕ್ಕಿ ಉತ್ಸವ ನಡೆಸುತ್ತಾರೆ. ಈ ವರ್ಷ ಗುಲ್ಬರ್ಗ ಜಿಲ್ಲೆಯ ಜೇವರ್ಗಿಯಲ್ಲಿ ಅ.5ರಿಂದ 14ರವರೆಗೆ ಉತ್ಸವ ನಡೆಸುವುದಾಗಿ ಘೋಷಿಸಿದ್ದರು.
ಆದರೆ, ದಸರಾ ಉತ್ಸವದಲ್ಲಿ ಸ್ವಾಮಿಗಳ ಅಡ್ಡ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಆಗ, ಭಕ್ತರು ಸ್ವಾಮೀಜಿಯವರನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗುತ್ತಾರೆ. ಈ ಕ್ರಿಯೆ ಅಮಾನವೀಯ ಎಂದು ಹರಿಹರದ ಪಂಚಮಸಾಲಿ ಪೀಠದ ಜಗದ್ಗುರು ಸಿದ್ಧಲಿಂಗ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದರು.
ಅ.1ರಿಂದ 21ರವರೆಗೆ ಜೇವರ್ಗಿಯಲ್ಲಿ 'ಶರಣರ ಜೀವನ ದರ್ಶನ ಪ್ರವಚನ' ಹೆಸರಿನ ಪರ್ಯಾಯ ಧಾರ್ಮಿಕ ಕಾರ್ಯಕ್ರಮ ನಡೆಸುವುದಾಗಿ ಘೋಷಿಸಿದರು. ಈ ಹಂತದಲ್ಲಿ ಆರಂಭವಾದ ವಿವಾದ ಹೇಳಿಕೆ-ಪ್ರತಿ ಹೇಳಿಕೆ, ಸಣ್ಣ ಪುಟ್ಟ ಪ್ರತಿಭಟನೆ ರೂಪದಲ್ಲಿ ಮುಂದುವರೆದಿತ್ತು.
ಆದರೆ, ಮಂಗಳವಾರ ವಿವಾದ ತೀವ್ರ ಸ್ವರೂಪ ಪಡೆಯಿತು. ಸುಲಫಲ ಮಠದ ಮಹಾಂತ ಶಿವಾಚಾರ್ಯರ ನೇತೃತ್ವದಲ್ಲಿ ಬಸವ ಬಳಗದವರು ಜಿಲ್ಲಾಧಿಕಾರಿ ಎನ್.ವಿ.ಪ್ರಸಾದ್ ಅವರನ್ನು ಭೇಟಿಯಾಗಿ ಅಡ್ಡ ಪಲ್ಲಕ್ಕಿ ಉತ್ಸವ ನಿಷೇಧಿಸುವಂತೆ ಒತ್ತಾಯಿಸಿದರು.
ಅಡ್ಡಪಲ್ಲಕ್ಕಿ ಉತ್ಸವ ನಡೆಯಲು ಬಿಡುವುದಿಲ್ಲವಾದರೆ, ಶರಣರ ಜೀವನ ಕುರಿತಾದ ಪ್ರವಚನಕ್ಕೂ ಅವಕಾಶ ನೀಡಬೇಡಿ ಎಂದು ರಂಭಾಪುರಿ ಪೀಠದ ಕಡೆಯವರು ಜಿಲ್ಲಾಧಿಕಾರಿಯವರಲ್ಲಿ ವಾದಿಸಿದರು. ಈ ಹಿನ್ನೆಲೆಯಲ್ಲಿ ಎರಡೂ ಕಾರ್ಯಕ್ರಮಗಳನ್ನು ತಡೆ ನೀಡಿ ಜಿಲ್ಲಾಧಿಕಾರಿ ಆದೇಶಿಸಿದ್ದರು.
ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಸಿಎಂ ಸಿದ್ದರಾಮಯ್ಯ ನಿವಾಸದ ಮುಂದೆ ಕೇದಾರ ಪೀಠದ ಮಠಾಧೀಶ ಭೀಮಶಂಕರ ಶಿವಾಚಾರ್ಯ ಸ್ವಾಮೀಜಿಗಳು ತಮ್ಮ 50ಕ್ಕೂ ಹೆಚ್ಚು ಅನುಯಾಯಿಗಳೊಂದಿಗೆ ದಸರಾ ಉತ್ಸವ ನಡೆಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಪ್ರಾರಂಭಿಸಿದರು.
ರಾತ್ರಿ 12 ಗಂಟೆಯಾದರೂ ಧರಣಿ ಮುಂದುವರೆಯಿತು. ಕೊನೆಗೂ ಪ್ರತಿಭಟನಾಕಾರರ ಮನವೊಲಿಸಿದ ಮುಖ್ಯಮಂತ್ರಿಗಳು, ರಂಭಾಪುರಿ ಶ್ರೀಗಳ ದಸರಾ ದರ್ಬಾರ್ ಮತ್ತು ಶರಣರ ಜೀವನ ದರ್ಶನ ಪ್ರವಚನ ನಡೆಸಲು ಅನುಮತಿ ನೀಡಿ, ವಿವಾದ ಬಗೆಹರಿಸಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಜಿಲ್ಲಾಧಿಕಾರಿಗೆ ಆದೇಶ ನೀಡಿದ್ದಾರೆ.












Click it and Unblock the Notifications