ಆರ್. ಆರ್. ನಗರ ಉಪ ಚುನಾವಣೆ; ಬಿಬಿಎಂಪಿ ಆಯುಕ್ತರ ಸಭೆ
ಬೆಂಗಳೂರು, ಸೆಪ್ಟೆಂಬರ್ 30: ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಕ್ಷೇತ್ರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರುತ್ತದೆ. ಚುನಾವಣಾ ನೀತಿ ಸಂಹಿತೆ ಕ್ಷೇತ್ರದ ವ್ಯಾಪ್ತಿಯಲ್ಲಿ ಈಗಾಗಲೇ ಜಾರಿಗೆ ಬಂದಿದೆ.
ಬುಧವಾರ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕುರಿತು ರಾಜಕೀಯ ಪಕ್ಷಗಳ ಜೊತೆ ಸಭೆ ನಡೆಸಿದರು.
ಸೆಪ್ಟೆಂಬರ್ 29ರ ಮಂಗಳವಾರದಿಂದ ಮಾದರಿ ನೀತಿ ಸಂಹಿತೆ ಕ್ಷೇತ್ರದಲ್ಲಿ ಜಾರಿಯಾಗಿದೆ. ಬಿಬಿಎಂಪಿ ಆಯುಕ್ತರೇ ಚುನಾವಣಾಧಿಕಾರಿಗಳಾಗಿದ್ದಾರೆ. ಮಾದರಿ ನೀತಿ ಸಂಹಿತೆ ಕುರಿತು ರಾಜಕೀಯ ಪಕ್ಷಗಳ ಮುಖಂಡರ ಜೊತೆ ಚುನಾವಣಾಧಿಕಾರಿಗಳು ಸಭೆ ನಡೆಸಿದರು.

ಕ್ಷೇತ್ರದ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಮಾರ್ಗಸೂಚಿ ಗಳನ್ನು ಪಾಲನೆ ಮಾಡುವಂತೆ ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಲಾಯಿತು. ಸಭೆಯಲ್ಲಿ ಪಾಲಿಕೆ ವಿಶೇಷ ಆಯುಕ್ತರು (ಆಡಳಿತ) ಜೆ. ಮಂಜುನಾಥ್ ಸಹ ಇದ್ದರು.
ಆರ್. ಆರ್. ನಗರ ಕ್ಷೇತ್ರದ ಉಪ ಚುನಾವಣೆಗೆ ಅಕ್ಟೋಬರ್ 9ರಂದು ಅಧಿಸೂಚನೆ ಪ್ರಕಟವಾಗಲಿದೆ. ಅಕ್ಟೋಬರ್ 16 ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾಗಿದೆ. ಅಕ್ಟೋಬರ್ 17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನವೆಂಬರ್ 3ರಂದು ಮತದಾನ ನಡೆಯಲಿದ್ದು, ನವೆಂಬರ್ 10ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications