ರಾಜಕಾಲುವೆ ಒತ್ತುವರಿ ತೆರವು: ಬಿಬಿಎಂಪಿ ಕ್ರಮಕ್ಕೆ ಹೈಕೋರ್ಟ್ ತರಾಟೆ
ಬೆಂಗಳೂರು, ಜುಲೈ 23; ರಾಜಕಾಲುವೆಗಳ ಒತ್ತುವರಿ ತೆರವು ಮಾಡುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ಹಿಂದೆ ನೀಡಿದ್ದ ನಿರ್ದೇಶನಗಳನ್ನು ಪಾಲಿಸದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕ್ರಮವನ್ನು ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಅಲ್ಲದೇ, ನ್ಯಾಯಾಲಯದ ಸೂಚನೆಯಂತೆ ಸಮಗ್ರವಾದ ನಿಯಮಗಳನ್ನು ಜಾರಿ ಮಾಡದಿರುವ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ನಗರಾಭಿವೃದ್ಧಿ ಇಲಾಖೆಯ ಹಿರಿಯ ಶ್ರೇಣಿ ಅಧಿಕಾರಿಗೆ ಆಗಸ್ಟ್ 1ರಂದು ಖುದ್ದು ಹಾಜರಾಗುವಂತೆ ನಿರ್ದೆಶನ ನೀಡಿದೆ.

ಕೆರೆ ಮತ್ತು ರಾಜಕಾಲುವೆಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಸಿಟಿಜನ್ ಆಕ್ಷನ್ ಗ್ರೂಪ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಳೆ ಮತ್ತು ನ್ಯಾಯಮೂರ್ತಿ ಎಂ. ಜೆ. ಎಸ್.ಕಮಲ್ ಅವರಿದ್ದ ನ್ಯಾಯಪೀಠ ಅಸಮಾಧಾನ ವ್ಯಕ್ತ ಪಡಿಸಿದೆ.
ಖುದ್ದು ಹಾಜರಿಗೆ ಸೂಚನೆ: ಕೆರೆ ಮತ್ತು ರಾಜಕಾಲುವೆಗಳ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಸಮಗ್ರ ಯೋಜನೆ ರೂಪಿಸುವುದಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವುದಕ್ಕಾಗಿ ಮುಂದಿನ ವಿಚಾರಣೆ ವೇಳೆ ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗಿಂತ ಮೇಲಾಧಿಕಾರಿಗಳು ಖುದ್ದಾಗಿ ಹಾಜರಿರಬೇಕು ಎಂದು ನ್ಯಾಯಾಲಯ ಖಡಕ್ ಸೂಚನೆ ನೀಡಿದೆ.
ರಾಜಕಾಲುವೆಗಳ ಒತ್ತುವರಿ ತೆರವು ಮಾಡುವ ಸಂದರ್ಭದಲ್ಲಿ ಅಡ್ಡಿ ಪಡಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದರೂ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ? ಎಂಬ ಅಂಶವನ್ನು ವಿವರಿಸಲಾಗಿಲ್ಲ ಎಂದು ತಿಳಿಸಿದ ಪೀಠ ವಿಚಾರಣೆಯನ್ನು ಆಗಸ್ಟ್ 1ಕ್ಕೆ ಮುಂದೂಡಿದೆ.
ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆಯೇ? ಅಲ್ಲದೇ, ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ? ಎಂಬುದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಜತೆಗೆ, ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳ ನಿರ್ಮಾಣ ಮಾಡುವ ಸಂದರ್ಭದಲ್ಲಿ ಯಾವುದೇ ಕ್ರಮಕ್ಕೆ ಮುಂದಾಗದೆ ಕೈ ಕಟ್ಟಿ ಕುಳಿತುಕೊಂಡಿದ್ದ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ? ಎಂಬ ಅಂಶವನ್ನು ತಿಳಿಸಿಲ್ಲ ಎಂದು ನ್ಯಾಯಪೀಠ ಕಿಡಿಕಾರಿದೆ.
ಅಲ್ಲದೇ, ಒತ್ತವರಿ ತೆರವಿಗೆ ಸಂಬಂಧಿಸಿದಂತೆ ಬಿಬಿಎಂಪಿ ಈವರೆಗೂ ಕೈಗೊಂಡಿರುವ ಕ್ರಮಗಳು ಕೇವಲ ಭಾಗಶಃ ಆಗಿವೆ. ಆದರೆ, ಸಮಗ್ರ ಯೋಜನೆಯನ್ನು ರೂಪಿಸಿಲ್ಲ ಎಂದು ಪೀಠ ತಿಳಿಸಿದೆ. ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಅಧಿಕಾರಿಗಳು ತಮ್ಮಲ್ಲಿರುವ ಅವಕಾಶಗಳೊಂದೊಗೆ ವೈಜ್ಞಾನಿಕ ಸಲಹೆಗಳನ್ನು ಪಡೆದುಕೊಂಡು ಸಮಗ್ರವಾದ ಯೋಜನೆ ರೂಪಿಸಲಿದೆ ಎಂಬುದಾಗಿ ಈ ಹಿಂದೆ ನ್ಯಾಯಪೀಠ ನಿರ್ದೇಶನ ನೀಡಿತ್ತು. ಆದರೆ, ಪಾಲಿಕೆ ಅಧಿಕಾರಿಗಳು ನಿರೀಕ್ಷೆಯಂತೆ ಯಾವುದೇ ಸಮಗ್ರ ಯೋಜನೆಯನ್ನು ಜಾರಿ ಮಾಡಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ವರದಿ ಸಲ್ಲಿಸಿದ ಬಿಬಿಎಂಪಿ; ಹೈಕೋರ್ಟ್ ನಿರ್ದೇಶನದಂತೆ ಅನುಪಾಲನಾ ವರದಿ ಸಲ್ಲಿಸಿದ್ದ ಬಿಬಿಎಂಪಿ, ಕೆರೆಗಳ ಒತ್ತುವರಿ ತೆರವು ಮಾಡಿದ ತಕ್ಷಣ ತ್ಯಾಜ್ಯವನ್ನು ವಿಲೇವಾರಿ ಮಾಡಿ ಮಳೆ ನೀರಿನ ಸರಾಗವಾಗಿ ಹರಿಯುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಜತೆಗೆ, ರಾಜ ಕಾಲುವೆಗಳ ಬದಿಗಳಲ್ಲಿ ಸೀಮೆಂಟ್‌ನಿಂದ ಮಾಡಿದ ಕಂಬಗಳನ್ನು ಹಾಕಿ ಮುಂದಿನ ದಿನಗಳಲ್ಲಿ ಒತ್ತುವರಿಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಜತೆಗೆ, ಕಂದಾಯ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳ ನೇತೃತ್ವದಲ್ಲಿ ಕಾಲ ಕಾಲಕ್ಕೆ ಸಭೆಗಳನ್ನು ನಡೆಸಲಾಗುವುದು ಮತ್ತು ಒತ್ತುವರಿ ತೆರವು ಮಾಡುವ ಸಂದರ್ಭದಲ್ಲಿ ಅಡ್ಡಿ ಪಡಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ.












Click it and Unblock the Notifications