ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 50 mm ಮಳೆ ದಾಖಲು
ಬೆಂಗಳೂರು, ಮೇ 2 : ಉತ್ತರ ಭಾರತದಲ್ಲಿ ಬಿಸಿಲಿನ ತಾಪಕ್ಕೆ ಜನರು ಕಂಗೆಟ್ಟಿದ್ದರೆ, ದಕ್ಷಿಣ ಭಾರತದಲ್ಲಿ ಮಳೆಯ ಆರ್ಭಟಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಕರ್ನಾಟಕ ಸೇರಿದಂತೆ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಮಳೆರಾಯನ ನರ್ತನ ಜೋರಾಗಿದೆ. ಅದರಲ್ಲೂ ಭಾನುವಾರ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಮಳೆರಾಯ ಆರ್ಭಟ ಜೋರಾಗಿದ್ದು, ಜನರು ಮಳೆಯ ಹೊಡೆತಕ್ಕೆ ಅಕ್ಷರಶಃ ಹೈರಾಣಾಗಿದ್ದಾರೆ.
ಭಾನುವಾರ ಸಂಜೆ ಸುಮಾರಿಗೆ ಆರಂಭವಾದ ಮಳೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಗಾಳಿ ಸಮೇತ ಆಲಿಕಲ್ಲು ಮಳೆಯಾಗಿದೆ. ಬಿಟ್ಟು ಬಿಡದೇ ನಿರಂತರವಾಗಿ ಮಳೆ ಸುರಿದಿದ್ದು, ಕೆಲಸ ಮುಗಿಸಿ ವಾಪಾಸ್ ಮನೆಗಳಿಗೆ ತೆರಳುವವರಿಗೆ ಮಳೆ ಅಡ್ಡಿಯುಂಟು ಮಾಡಿತ್ತು. ಇನ್ನು ಮಳೆಯ ಅಬ್ಬರಕ್ಕೆ ನಗರದ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ಜನರು ಸಂಚಾರ ನಡೆಸಲು ಪರದಾಟ ನಡೆಸುವಂತಾಗಿತ್ತು.
ಭಾನುವಾರ ಒಂದೇ ದಿನದಲ್ಲಿ ಬೆಂಗಳೂರಿನಲ್ಲಿ 54 ಮಿಲಿ ಮೀಟರ್ ಮಳೆಯಾಗಿದೆ. ಇನ್ನು ಹೆಚ್‌ಎಎಲ್‌ನಲ್ಲಿ 34 ಮಿಲಿ ಮೀಟರ್ ಮಳೆಯಾಗಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ಉಳಿದಂತೆ ನಗರದ ಹೊರ ವಲಯದಲ್ಲೂ ಭಾರೀ ಮಳೆಯಾಗಿದ್ದು, ಆನೇಕಲ್‌ನಲ್ಲಿರುವ ಹಲವು ಗ್ರಾಮಗಳಲ್ಲೂ 40 ಮಿಲಿ ಮೀಟರ್ ಗಿಂತಲೂ ಹೆಚ್ಚು ಮಳೆ ಸುರಿದಿದೆ.

ನಗರದ ಕೋಡಿಗೆಹಳ್ಳಿ, ರಾಜಾಜಿನಗರ, ಉತ್ತರಹಳ್ಳಿ, ಹೆಚ್‌ಎಸ್‌ಆರ್ ಲೇಜೌಟ್, ತಾವರೆಕೆರೆ, ಸರ್ಜಾಪುರ, ಬೊಮ್ಮನಹಳ್ಳಿ, ಕೆಂಗೇರಿ, ಚಂದಾಪುರ, ಹೆಚ್ಎಎಲ್ ಏರ್‌ಪೋರ್ಟ್, ಶೀಗೇಹಳ್ಳಿ, ನಾಗರಬಾವಿ, ಬಸವನಗುಡಿ, ದೊಮ್ಮಲೂರು, ಸೋಮನಹಳ್ಳಿ, ಆರ್ ಆರ್ ನಗರ ಸೆರಿದಂತೆ ನಗರದ ಹಲವು ಕಡೆ 30 ಮಿಲಿ ಮೀಟರ್‌ಗಿಂತಲೂ ಹೆಚ್ಚು ಮಳೆಯಾಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.
ನಗರದ ಬಹುತೇಕ ಭಾಗದಲ್ಲಿ ಮಳೆರಾಯ ಅಬ್ಬರಿಸಿದ್ದು, ಹಲವು ಕಡೆ ಸಂಚಾರ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿದ್ದವು, ರಸ್ತೆ ಜಲಾವೃತಗೊಂಡಿದ್ದವು. ಸಂಜೆ ಆರಂಭವಾದ ಮಳೆ ಇಂದು ಮುಂಜಾನೆ 5.30 ಕ್ಕೆ ನಿಂತಿದ್ದು, ಬೇಸಿಗೆ ಸಮಯದಲ್ಲೂ ಮಳೆ ಸುರಿದಿರುವುದು ಸಮಾಧಾನ ತಂದರೆ ಮತ್ತೊಂದೆಡೆ ಸಾಕಷ್ಟು ಅವಾಂತರಗಳಿಗೆ ಕಾರಣವಾಯಿತು.

ಸದ್ಯ ಇನ್ನು ಮೂರ್ನಾಲ್ಕು ದಿನಗಳ ಕಾಲ ಮಳೆ ಇದೇ ರೀತಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಸೂಚನೆ ನೀಡಿದೆ.












Click it and Unblock the Notifications