Bengaluru Rain: ಬೆಂಗಳೂರಿನಲ್ಲಿ ಬುಧವಾರವೂ ಭಾರೀ ಮಳೆ, ಆರೆಂಜ್ ಅಲರ್ಟ್ ಘೋಷಣೆ
ಬೆಂಗಳೂರು, ಅಕ್ಟೋಬರ್ 16: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ. ಉದ್ಯಾನ ನಗರಿ ಬೆಂಗಳೂರಿನಲ್ಲಿ ಮಂಗಳವಾರ ಸುರಿದ ಮಳೆ ಜನರಿಗೆ ಸಂಕಷ್ಟ ತಂದಿದೆ. ಹಲವು ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಡಿದ್ದಾರೆ. ಬುಧವಾರ ಸಹ ನಗರದಲ್ಲಿ ಮಳೆ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಇಂದು ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಬೆಂಗಳೂರು ನಗರ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆಯು ಅಕ್ಟೋಬರ್ 16 ಮತ್ತು 17 ರಂದು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಮಳೆಯ ತೀವ್ರತೆ ಹೆಚ್ಚಾಗಿರುವುದರಿಂದ ಮುಂಜಾಗೃತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಕ್ಟೋಬರ್ 16 ರಂದು ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಖಾಸಗಿ/ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಡಳಿತ ಆದೇಶವನ್ನು ಹೊರಡಿಸಿದೆ. ಎಲ್ಲಾ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಇಂಜಿನಿಯರಿಂಗ್, ಐಟಿಐಗಳಿಗೆ ರಜೆ ಇರುವುದಿಲ್ಲ.

ಮಂಗಳವಾರ ಮುಂಜಾನೆ ನಗರದಲ್ಲಿ ಆರಂಭವಾದ ಮಳೆ ಸಂಜೆಯ ತನಕ ಸುರಿದಿದೆ. ದಿನವಿಡೀ ಸುರಿದ ಮಳೆಯ ಕಾರಣ ಹಲವು ರಸ್ತೆಗಳು ಜಲಾವೃತಗೊಂಡಿತ್ತು. ಸಂಚಾರ ವ್ಯವಸ್ಥೆ ಮೇಲೆ ಮಳೆ ಪರಿಣಾಮ ಬೀರಿದ್ದು, ಹಲವು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮಾನ್ಯತಾ ಟೆಕ್ ಪಾರ್ಕ್ ರಸ್ತೆ ಜಲಾವೃತವಾಗಿದ್ದು, ಬುಧವಾರ ಐಟಿ-ಬಿಟಿ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ನೀಡಬೇಕು ಎಂದು ಸಲಹೆ ನೀಡಲಾಗಿದೆ.
ಬೆಂಗಳೂರು ನಗರಾಭಿವೃದ್ಧಿ ಖಾತೆ ಸಚಿವ ಡಿ. ಕೆ. ಶಿವಕುಮಾರ್ ಬಿಬಿಎಂಪಿ ಕಂಟ್ರೋಲ್ ರೂಂಗೆ ಮಂಗಳವಾರ ಸಂಜೆ ಭೇಟಿ ನೀಡಿ ಮಳೆಯಿಂದ ಆದ ಅನಾಹುತದ ಕುರಿತು ಮಾಹಿತಿ ಪಡೆದರು. 'ವಾಯುಭಾರ ಕುಸಿತದಿಂದಾಗಿ ಬೆಂಗಳೂರಿನಾದ್ಯಂತ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಬಿಬಿಎಂಪಿ ಕೇಂದ್ರ ಕಚೇರಿಯ ಕಂಟ್ರೋಲ್‌ರೂಂನಲ್ಲಿ ಬೆಂಗಳೂರಿನ ಸಾರ್ವಜನಿಕರ ಕುಂದುಕೊರತೆಗಳನ್ನು ವಿಚಾರಿಸಿದೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
ತಾಪಮಾನ ಕುಸಿತ: ನಿರಂತರ ಮಳೆ, ಮೋಡ ಕವಿದ ವಾತಾವರಣ ಮತ್ತು ಗಾಳಿಯ ಪರಿಣಾಮ ಬೆಂಗಳೂರು ನಗರದಲ್ಲಿ ಕನಿಷ್ಠ ಉಷ್ಣಾಂಶ ಕುಸಿತಕಂಡಿದೆ. ನಗರದಲ್ಲಿ ಬುಧವಾರ ಬೆಳಗ್ಗೆ 21 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ಇಂದು ಸಹ ಮಳೆ ಮುಂದುವರಿಯುತ್ತದೆ. ಅಲ್ಲದೇ ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮಂಡ್ಯ, ಮೈಸೂರು ಮತ್ತು ರಾಮನಗರ ಸೇರಿದಂತೆ ಬೆಂಗಳೂರು ಮಹಾನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿಯೂ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಡಿ. ಕೆ. ಶಿವಕುಮಾರ್ ನಗರದಲ್ಲಿ ಮಳೆ ಮುಂದುವರೆಯುವ ಮುನ್ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ಕಡೆ 24*7 ಕಂಟ್ರೋಲ್ ರೂಂಗಳು ಕೆಲಸ ಮಾಡಬೇಕು ಎನ್ನುವ ಸೂಚನೆ ನೀಡಿದ್ದಾರೆ. ಕರ್ನಾಟಕ ಸರ್ಕಾರವೂ ಮುಂಜಾಗ್ರತಾ ಕ್ರಮವಾಗಿ ಬುಧವಾರ ಶಾಲೆಗಳಿಗೆ ರಜೆ ಘೋಷಿಸಿದೆ ಎಂದು ತಿಳಿಸಿದ್ದಾರೆ.
"ಸಾಮಾನ್ಯವಾಗಿ 5 ಎಂಎಂ ಮಳೆ ಬೀಳುತ್ತದೆ. ಆದರೆ 15 ಎಂಎಂ ಮಳೆಯಾಗಿದೆ. ಶೇ 228ರಷ್ಟು ಹೆಚ್ಚುವರಿ ಮಳೆಯಾಗಿರುವುದಾಗಿ ತಿಳಿದುಬಂದಿದೆ. ವಿಶೇಷವಾಗಿ ಯಲಹಂಕ ಪಶ್ಚಿಮ, ಪೂರ್ವ ವಲಯಗಳಲ್ಲಿ ಗರಿಷ್ಠ ಮಳೆಯಾಗಿದೆ. ಮಹದೇವಪುರ, ದಾಸರಹಳ್ಳಿ, ಬೆಂಗಳೂರು ದಕ್ಷಿಣ ಮೊದಲಾದ ಕಡೆ ಹೆಚ್ಚು ಮಳೆಯಾಗಿದೆ" ಎಂದು ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
"142 ಕಡೆ ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ದೂರುಗಳು ಬಂದಿವೆ. ಸುಮಾರು 30 ಮರಗಳು ಬಿದ್ದಿರುವ ಮಾಹಿತಿ ಬಂದಿದೆ. 22 ಕಡೆ ಈಗಾಗಲೇ ದೂರುಗಳನ್ನು ಇತ್ಯರ್ಥಗೊಳಿಸಲಾಗಿದೆ. 35 ಕಡೆ ಕೊಂಬೆಗಳು ಬಿದ್ದು ಟ್ರಾಫಿಕ್ ಸಮಸ್ಯೆ ಆಗಿತ್ತು, ಅವನ್ನೂ ಸರಿಪಡಿಸಿದ್ದೇವೆ" ಎಂದು ಡಿ. ಕೆ. ಶಿವಕುಮಾರ್ ಬಿಬಿಎಂಪಿ ಕಂಟ್ರೋಲ್ ರೂಂನಲ್ಲಿ ತಿಳಿಸಿದ್ದಾರೆ.
"3 ದಿನಗಳ ಕಾಲ ನಾಗರಿಕರು ಜಾಗರೂಕರಾಗಬೇಕು. ವರ್ಣಮಿತ್ರ ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮುನ್ಸೂಚನೆ ನೀಡಲಾಗುತ್ತದೆ. 1533 ಟೋಲ್ ಫ್ರೀ ಸಂಖ್ಯೆ 24ಗಂಟೆಗಳ ಕಾಲ ಸಕ್ರಿಯವಾಗಿರುತ್ತದೆ. ನೇರವಾಗಿ ಕರೆ ಮಾಡಿ ನಾಗರಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾಗಿದೆ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.












Click it and Unblock the Notifications