Vande Bharat; ಕರ್ನಾಟಕದ ಈ ವಂದೇ ಭಾರತ್ ರೈಲು ವೇಳಾಪಟ್ಟಿ ಬದಲು
ಬೆಂಗಳೂರು, ಡಿಸೆಂಬರ್ 20; ಪ್ರಯಾಣಿಕರ ಬೇಡಿಕೆಯಂತೆ ಕರ್ನಾಟಕದ 3ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. ಈ ರೈಲು ಬೆಂಗಳೂರು ನಗರದ ಯಶವಂತಪುರ ಮತ್ತು ಹೈದರಾಬಾದ್ ಸಮೀಪದ ಕಾಚಿಗುಡ ನಡುವೆ ಸಂಚಾರ ನಡೆಸುತ್ತಿದೆ.
ಭಾರತೀಯ ರೈಲ್ವೆ ಟೆಕ್ಕಿಗಳನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಬೆಂಗಳೂರು-ಕಾಚಿಗುಡ ನಡುವೆ ವಂದೇ ಭಾರತ್ ರೈಲು ಸಂಚಾರವನ್ನು ಸೆಪ್ಟೆಂಬರ್‌ನಲ್ಲಿ ಆರಂಭಿಸಿತ್ತು. ಎರಡು ಪ್ರಮುಖ ಐಟಿ ಹಬ್‌ಗಳಾದ ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಈ ರೈಲು ಸಂಪರ್ಕ ಕಲ್ಪಿಸುತ್ತದೆ.

ಸೆಪ್ಟೆಂಬರ್ 24ರಂದು ಪ್ರಧಾನಿ ನರೇಂದ್ರ ಮೋದಿ ಒಟ್ಟು 9 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದರು. ಇದರಲ್ಲಿ ಯಶವಂತಪುರ-ಕಾಚಿಗುಡ ರೈಲು ಸಹ ಸೇರಿತ್ತು. ಪ್ರಯಾಣಿಕರಿಂದಲೂ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ವೇಳಾಪಟ್ಟಿ ಪರಿಷ್ಕರಣೆ ಮಾಡಬೇಕು ಎಂಬ ಬೇಡಿಕೆ ಕೇಳಿ ಬಂದಿತ್ತು.
ಡಿಸೆಂಬರ್ 21ರಿಂದ ಜಾರಿ; ಭಾರತೀಯ ರೈಲ್ವೆ ಯಶವಂತಪುರ-ಕಾಚಿಗುಡ ನಡುವಿನ ವಂದೇ ಭಾರತ್ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದೆ. ಹೊಸ ವೇಳಾಪಟ್ಟಿ ಡಿಸೆಂಬರ್ 21ರ ಗುರುವಾರದಿಂದ ಜಾರಿಗೆ ಬರಲಿದೆ.
ಪರಿಷ್ಕೃತ ವೇಳಾಪಟ್ಟಿಯಂತೆ ರೈಲು ನಂಬರ್ 20703 ಕಾಚಿಗುಡ-ಯಶವಂತಪುರ ವಂದೇ ಭಾರತ್ ರೈಲು ಮುಂಜಾನೆ 5.45ಕ್ಕೆ ಹೊರಡಲಿದೆ. 6.55ಕ್ಕೆ ಮೆಹಬೂಬ್ ನಗರ, 8.30ಕ್ಕೆ ಕರ್ನೂಲ್ ಸಿಟಿ, 10.32ಕ್ಕೆ ಅನಂತಪುರ, 11.15ಕ್ಕೆ ಧರ್ಮಾವರಂಗೆ ಆಗಮಿಸಲಿದೆ. ಬಳಿಕ 2 ಗಂಟೆಗೆ ಯಶವಂತಪುಕ್ಕೆ ತಲುಪುತ್ತದೆ.
ರೈಲು ನಂಬರ್ 20704 ಯಶವಂತಪುರ-ಕಾಚಿಗುಡ ರೈಲು ರಾತ್ರಿ 11 ಗಂಟೆಗೆ ಕಾಚಿಗುಡಕ್ಕೆ ತಲುಪಲಿದೆ. ಯಶವಂತಪುರದಿಂದ ಮಧ್ಯಾಹ್ನ 2.45ಕ್ಕೆ ಹೊರಡುವ ರೈಲು, ಧರ್ಮಾವರಂಗೆ 04.40, ಅನಂತರಪುರ 05.06, ಕರ್ನೂಲ್ ಸಿಟಿ 7.20, ಮೆಹಬೂಬ್ ನಗರ 09.05 ಆಗಮಿಸಲಿದೆ.
ಯಶವಂತಪುರ-ಕಾಚಿಗುಡ ರೈಲು ವೇಳಾಪಟ್ಟಿ ಮಾತ್ರ ಬದಲಾವಣೆ ಮಾಡಲಾಗಿದೆ. ಉಳಿದಂತೆ ನಿಲ್ದಾಣಗಳು, ರೈಲಿನ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೊಸ ವೇಳಾಪಟ್ಟಿ ಉಭಯ ನಗರಗಳ ನಡುವೆ ಸಂಚಾರ ನಡೆಸುವ ಟೆಕ್ಕಿಗಳಿಗೆ ಅನುಕೂಲವಾಗಲಿದೆಯೇ? ಕಾದು ನೋಡಬೇಕು.
ಭಾರತೀಯ ರೈಲ್ವೆ ಪ್ರಧಾನಿ ನರೇಂದ್ರ ಮೋದಿಯ ದೂರದೃಷ್ಟಿಯುಂತೆ ದೇಶದಾದ್ಯಂತ ಉತ್ತಮ ಸಂಪರ್ಕವನ್ನು ಕಲ್ಪಿಸಲು ವಂದೇ ಭಾರತ್ ಮಾದರಿ ರೈಲುಗಳನ್ನು ಪರಿಚಯಿಸಿದೆ. ಈ ರೈಲುಗಳು ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುತ್ತವೆ. ಆರಾಮದಾಯಕ ಪ್ರಯಾಣದ ಅನುಭವ ನೀಡುತ್ತದೆ.
ಕರ್ನಾಟಕದಲ್ಲಿ 2022ರ ನವೆಂಬರ್‌ನಲ್ಲಿ ಮೊದಲ ವಂದೇ ಭಾರತ್ ರೈಲು ಸಂಚಾರ ಆರಂಭವಾಯಿತು. ಮೈಸೂರು-ಬೆಂಗಳೂರು ಮತ್ತು ಚೆನ್ನೈ ನಡುವೆ ಈ ರೈಲು ಸಂಚಾರ ನಡೆಸುತ್ತದೆ. ಇದು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲು ಸಹ ಆಗಿತ್ತು.
ಬಳಿಕ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ಸಂಚಾರ ನಡೆಸುವ ರಾಜ್ಯದ 2ನೇ ವಂದೇ ಭಾರತ್ ರೈಲು ಸಂಚಾರಕ್ಕೆ ಚಾಲನೆ ನೀಡಲಾಯಿತು. ಈಗ ಈ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ಸಹ ರೈಲ್ವೇ ಇಲಾಖೆ ಒಪ್ಪಿಗೆ ನೀಡಿದೆ.
ಯಶವಂತಪುರ-ಕಾಚಿಗುಡ ರೈಲು ಕರ್ನಾಟಕಕ್ಕೆ ಆಗಮಿಸುವ 3ನೇ ವಂದೇ ಭಾರತ್ ರೈಲು. ಆದರೆ ಈ ರೈಲು ಕರ್ನಾಟಕದ ನೈಋತ್ಯ ರೈಲ್ವೆ ಆರಂಭಿಸಿರುವ ಸೇವೆಯಲ್ಲ. ದಕ್ಷಿಣ ಮಧ್ಯ ರೈಲ್ವೆ ವಲಯದ ವ್ಯಾಪ್ತಿಗೆ ಸೇರುವ ರೈಲು ಸೇವೆಯಾಗಿದೆ.
ಬೆಂಗಳೂರು ಮತ್ತು ಹೈದರಾಬಾದ್‌ನ ಐಟಿ ಉದ್ಯಮವನ್ನು ಗಮನದಲ್ಲಿಟ್ಟುಕೊಂಡು ಈ ರೈಲು ಸೇವೆ ಆರಂಭಿಸಲಾಗಿದೆ. ಯಶವಂತಪುರ-ಕಾಚಿಗುಡ ನಡುವಿನ ಅಂತರ ಸುಮಾರು 610 ಕಿ. ಮೀ. ಸಾಮಾನ್ಯ ರೈಲುಗಳು 12 ಗಂಟೆ ಸಮಯವನ್ನು ಈ ಮಾರ್ಗದಲ್ಲಿ ಕ್ರಮಿಸಲು ತೆಗೆದುಕೊಳ್ಳುತ್ತದೆ. ವಂದೇ ಭಾರತ್ ರೈಲು 8.30 ತಾಸಿನಲ್ಲಿ ಸಂಚಾರ ನಡೆಸುತ್ತದೆ.












Click it and Unblock the Notifications