ಶುಕ್ರವಾರ ಬೆಂಗಳೂರಿಗೆ ರಾಹುಲ್ ಗಾಂಧಿ, ಕೋರ್ಟ್‌ಗೆ ಖುದ್ದು ಹಾಜರಿ
ಬೆಂಗಳೂರು, ಜೂನ್ 06; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಬೆಂಗಳೂರು ನಗರದಕ್ಕೆ ಆಗಮಿಸಲಿದ್ದಾರೆ. ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಖುದ್ದಾಗಿ ರಾಹುಲ್ ಗಾಂಧಿ ಆಗಮಿಸಬೇಕು ಎಂದು ಬೆಂಗಳೂರು ಕೋರ್ಟ್ ಆದೇಶಿಸಿದೆ.
ಕರ್ನಾಟಕ ಬಿಜೆಪಿ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್ ಗಾಂಧಿ ಖುದ್ದಾಗಿ ಕೋರ್ಟ್‌ಗೆ ಹಾಜರಾಗಬೇಕಿದೆ. ಜೂನ್ 1ರಂದು ಖುದ್ದಾಗಿ ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗಿರಲಿಲ್ಲ.

ಲೋಕಸಭೆ ಚುನಾವಣೆ ಕಾರ್ಯದ ಹಿನ್ನಲೆಯಲ್ಲಿ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕು ಎಂದು ಅವರು ವಕೀಲರ ಮೂಲಕ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಆದ್ದರಿಂದ ವಿಚಾರಣೆಯನ್ನು ಜೂನ್ 7ಕ್ಕೆ ಮುಂದೂಡಿಕೆ ಮಾಡಲಾಗಿತ್ತು.
ಕೋರ್ಟ್‌ಗೆ ಹಾಜರು: ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ಶುಕ್ರವಾರ ನಡೆಯಲಿರುವ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ರಾಹುಲ್ ಗಾಂಧಿ ಖುದ್ದಾಗಿ ಹಾಜರಾಗಲಿದ್ದಾರೆ.
ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಹ ಆರೋಪಿಗಳು. ಉಭಯ ನಾಯಕರು ಜೂನ್ 1ರಂದು ಕೋರ್ಟ್‌ಗೆ ಖುದ್ದು ಹಾಜರಾಗಿದ್ದರು. ರಾಹುಲ್ ಗಾಂಧಿ 4ನೇ ಆರೋಪಿ.
ಈ ಪ್ರಕರಣದಲ್ಲಿ ಜೂನ್ 1ರಂದು ಖುದ್ದಾಗಿ ಹಾಜರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ಗೆ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ರಾಹುಲ್ ಗಾಂಧಿ ಜೂನ್ 7ರಂದು ಖುದ್ದಾಗಿ ಹಾಜರಾಗಬೇಕು ಎಂದು ಕೋರ್ಟ್ ಆದೇಶ ನೀಡಿತ್ತು.
ಏನಿದು ಕೇಸ್?; 2023ರ ವಿಧಾನಸಭೆ ಚುನಾವಣೆಗೂ ಮೊದಲು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿತ್ತು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು. 2023ರ ಮೇ 5ರಂದು ಕಾಂಗ್ರೆಸ್ ಪತ್ರಿಕೆಗಳಲ್ಲಿ ಜಾಹೀರಾತು ಒಂದನ್ನು ನೀಡಿತ್ತು.
ಬಿಜೆಪಿಯನ್ನು ಭ್ರಷ್ಟ ಎಂದು ಹೇಳಿತ್ತು. 40 ಪರ್ಸೆಂಟ್ ಕಮೀಷನ್ ಆರೋಪವನ್ನು ಹೊರಡಿಸಿತ್ತು. ಈ ಜಾಹೀರಾತು ಮುಂದಿಟ್ಟುಕೊಂಡು ಕರ್ನಾಟಕ ಬಿಜೆಪಿ ಮಾನನಷ್ಟ ಮೊಕದ್ದಮೆ ದಾಖಲು ಮಾಡಿತ್ತು.
ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಕೇಶವ ಪ್ರಸಾದ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದ ಖಾಸಗಿ ದೂರಿನ ವಿಚಾರಣೆ ನಡೆಯುತ್ತಿದೆ. 2024ರ ಮಾರ್ಚ್ 11ರಂದು ಕೋರ್ಟ್ ಕಾಂಗ್ರೆಸ್ ನಾಯಕರಿಗೆ ಸಮನ್ಸ್ ಜಾರಿಗೊಳಿಸಿತ್ತು.
ಆಗ ಪ್ರಕರಣದಲ್ಲಿ 4ನೇ ಆರೋಪಿಯಾದ ರಾಹುಲ್ ಗಾಂಧಿ ವಕೀಲರ ಮೂಲಕ ಕೋರ್ಟ್‌ಗೆ ಲೋಕಸಭೆ ಚುನಾವಣೆಯ ಕಾರಣ ಖುದ್ದು ಹಾಜರಾಗಲು ಸಾಧ್ಯವಿಲ್ಲ. ಜೂನ್‌ಗೆ ವಿಚಾರಣೆ ಮುಂದೂಡಬೇಕು ಎಂದು ಮನವಿ ಸಲ್ಲಿಸಿದ್ದರು.
ಜೂನ್ 1ಕ್ಕೆ ವಿಚಾರಣೆ ನಿಗದಿಗೊಳಿಸಲಾಗಿತ್ತು. ಪ್ರಕರಣದಲ್ಲಿ ಇತರ ಆರೋಪಿಗಳಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಜೂನ್ 1ರಂದು ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗಿ ಪ್ರಕರಣದಲ್ಲಿ ಜಾಮೀನು ಪಡೆದಿದ್ದರು.
ಆದರೆ ಜೂನ್ 1ರಂದು ರಾಹುಲ್ ಗಾಂಧಿ ವಕೀಲರ ಮೂಲಕ ಪುನಃ ಖುದ್ದು ಹಾಜರಾಗಲು ಸಾಧ್ಯವಿಲ್ಲ. ಜೂನ್ 7ಕ್ಕೆ ವಿಚಾರಣೆ ಮುಂದೂಡಬೇಕು ಎಂದು ಮನವ ಮಾಡಿದ್ದರು. ಕೋರ್ಟ್ ಅರ್ಜಿ ಪುರಸ್ಕರಿಸಿ ಜೂನ್ 7ರ ಶುಕ್ರವಾರಕ್ಕೆ ವಿಚಾರಣೆ ಮುಂದೂಡಿಕೆ ಮಾಡಿತ್ತು. ಅಂದು ರಾಹುಲ್ ಗಾಂಧಿ ಖುದ್ದಾಗಿ ಹಾಜರಾಗಬೇಕು ಎಂದು ಆದೇಶಿಸಿತ್ತು.
ಲೋಕಸಭೆ ಚುನಾವಣೆ 2024ರಲ್ಲಿ ವಯನಾಡಯ ಮತ್ತು ರಾಯ್ ಬರೇಲಿಯಲ್ಲಿ ಗೆಲುವು ಸಾಧಿಸಿರುವ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಆಡಳಿತ ಇರುವ ಕರ್ನಾಟಕದ ಬೆಂಗಳೂರಿಗೆ ಶುಕ್ರವಾರ ಕೋರ್ಟ್‌ಗೆ ಖುದ್ದು ಹಾಜರಾಗಲು ಆಗಮಿಸುತ್ತಿದ್ದಾರೆ.
ಖುದ್ದಾಗಿ ಕೋರ್ಟ್ ಮುಂದೆ ಹಾಜರಾಗಿ ರಾಹುಲ್ ಗಾಂಧಿ ಪ್ರಕರಣದಲ್ಲಿ ಜಾಮೀನು ಪಡೆಯಲಿದ್ದಾರೆ. ಕೋರ್ಟ್ ಶುಕ್ರವಾರ ಅರ್ಜಿಯ ವಿಚಾರಣೆಯನ್ನು ಮತ್ತೆ ಮುಂದೂಡಿಕೆ ಮಾಡುವ ನಿರೀಕ್ಷೆ ಇದೆ.












Click it and Unblock the Notifications