ರಾಹುಲ್ ಗಾಂಧಿ ಯುಪಿಎಗೆ ಹೊಸ ಸೂಪರ್ ಮ್ಯಾನ್
ಬೆಂಗಳೂರು, ಫೆ.27- 'ದೇಶದ ಅರ್ಥ ವ್ಯವಸ್ಥೆ ದಯನೀಯ ಸ್ಥಿತಿಯಲ್ಲಿದೆ. ಆರ್ಥಿಕತೆಯ ಎಲ್ಲ ರಂಗಗಳೂ ಶೋಚನೀಯವಾಗಿವೆ' ಎಂದು ಮಾಜಿ ಹಣಕಾಸು ಸಚಿವ ಯಶವಂತ ಸಿನ್ಹಾ ಅವರು ಖೇದ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಬಿಜೆಪಿಯ ಹಿರಿಯ ನಾಯಕ ಯಶವಂತ ಸಿನ್ಹಾ ಅವರು 'UPA ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ಆರಂಭದ ದಿನದಿಂದಲೂ ಕಾರ್ಯರಹಿತವಾಗಿದೆ. NDA ಸರಕಾರವು 2004ರಲ್ಲಿ ಅಧಿಕಾರ ಬಿಟ್ಟಾಗ ದೇಶದ ಅರ್ಥ ವ್ಯವಸ್ಥೆ ಸುಸ್ಥಿತಿಯಲ್ಲಿತ್ತು. ನಂತರದ ದಿನಗಳಲ್ಲಿ UPA 1 ಮತ್ತು 2 ಎರಡೂ ಆಡಳಿತಾವಧಿಗಳು ಹಗರಣಗಳ ಸರಮಾಲೆಯನ್ನೇ ಪೋಣಿಸಿದೆ' ಎಂದು ವಿಷಾದಿಸಿದರು.

UPA ಮೈತ್ರಿಯ ಪ್ರಧಾನ ಪಕ್ಷವಾದ ಕಾಂಗ್ರೆಸ್ಸನ್ನು ತರಾಟೆಗೆ ತೆಗೆದುಕೊಂಡ ಸಿನ್ಹಾ ಅವರು ರಾಹುಲ್ ಗಾಂಧಿ ಅವರು ಯುಪಿಎಗೆ ಹೊಸ ಸೂಪರ್ ಮ್ಯಾನ್ ಆಗಿ ಕಾಣಿಸುತ್ತಿದ್ದಾರೆ. ಸಂಪುಟವು ಸದಾ ರಾಹುಲ್ ನಿರ್ಣಯಗಳನ್ನು ಅವಲಂಬಿಸಿರುತ್ತದೆ. ಭಾರತ ಸರಕಾರಕ್ಕೆ ರಾಹುಲ್ ಮಾತು ಕೇಳುವುದನ್ನು ಬಿಟ್ಟರೆ ಬೇರೆ ದಾರಿಯೇ ಇಲ್ಲವಾಗಿದೆ. ಮನಮೋಹನ್ ಸಿಂಗ್ ಅವರು ತಮ್ಮದೇ ಪಕ್ಷದ ನಾಯಕರಾಗಿಲ್ಲದಿರುವಾಗ ಭಾರತದ ನಾಯಕರಾಗುವುದಾದರೂ ಎಂತು? ಎಂದು ಅವರು ವ್ಯಂಗ್ಯವಾಡಿದರು.
ಆಧಾರ್ ಕಾರ್ಡ್ ಜನತೆಗೆ ಏನನ್ನೂ ಮಾಡಲಿಲ್ಲ. ಆದರೆ ಆಧಾರ್ ಜನಕನಿಗೆ ಭಾರಿ ಅದೃಷ್ಟವನ್ನೇ ತಂದಿತು. ಕೊನೆಗೆ, ಆಧಾರ್ ನಂದನ್ ನಿಲೇಕಣಿಗೆ ಕಾಂಗ್ರೆಸ್ ಟಿಕೆಟ್ ಪ್ರಾಪ್ತಿಯಾಗಿದೆ. ಆತನಿಗೆ ಒಳ್ಳೆಯದಾಗಲಿ ಎಂದು ಸಿನ್ಹಾ ಹಾರೈಸಿದರು.












Click it and Unblock the Notifications