ಕಾಂಗ್ರೆಸ್ ಹೈಕಮಾಂಡ್‌ಗೆ ನಿಗಮ ಮಂಡಳಿಗಳ ಹಣ ಟಕಾಟಕ್ ವರ್ಗಾವಣೆ: ಆರ್.ಅಶೋಕ್ ಹೇಳಿದ್ದೇನು?
ಬೆಂಗಳೂರು, ಜೂನ್ 02: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ನಡೆದ ಬಗ್ಗೆ ರಾಜ್ಯವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿದೆ. ನಿಗಮದ ಅಧಿಕಾರಿ ಆತ್ಮಹತ್ಯೆಗೆ ಬಿಜೆಪಿ ಖಂಡಿಸಿದೆ. ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ರಾಜ್ಯ ಲೂಟಿ ಮಾಡಿ ಹೈಕಮಾಂಡ್‌ಗೆ ಕಳುಹಿಸುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಭಾನುವಾರ ಈ ಕುರಿತು ಟ್ವೀಟ್ ಮಾಡಿರುವ ಆರ್. ಅಶೋಕ್ ಅವರು, ಕರ್ನಾಟಕವನ್ನು ಲೂಟಿ ಮಾಡುವ ರಾಜ್ಯ ಕಾಂಗ್ರೆಸ್ ಹೈಕಮಾಂಡ್ ಗೆ ಟಕಾಟಕ್ ಅಂತ ಆ ಹಣ ವರ್ಗಾವಣೆ ಮಾಡುತ್ತಿದೆ. ಈ ಸರ್ಕಾರಕ್ಕೆ ಕರ್ನಾಟಕದಲ್ಲಿರುವ ನಿಗಮ ಮಂಡಳಿಗಳೇ ATMಗಳು ಎಂದು ಅವರು ಆರೋಪಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಇದನ್ನು ಗಮನಿಸಿದರೆ, ರಾಜ್ಯದಲ್ಲಿರುವ ಎಲ್ಲಾ ನಿಗಮ ಮಂಡಳಿಗಳನ್ನು ಭ್ರಷ್ಟಾಚಾರಕ್ಕೆ ಬಳಸಿಕೊಂಡಿರುವ ದಟ್ಟವಾದ ಶಂಕೆ ಮೂಡುತ್ತಿದೆ ಎಂದರು.
ದಲಿತರು, ಹಿಂದುಳಿದವರು, ಬಡವರು, ರೈತರು, ಗ್ರಾಮೀಣ ಪ್ರದೇಶಗಳ ಜನರ ಕಲ್ಯಾಣಕ್ಕೆ ವಿನಿಯೋಗವಾಗಬೇಕಿದ್ದ ನಿಗಮ ಮಂಡಳಿಗಳ ಹಣ ಭ್ರಷ್ಟರ ಪಾಲಾಗುತ್ತಿರುವ ವಾಸನೆ ಬರುತ್ತಿದೆ.
ರಾಜ್ಯದ ನಿಗಮ ಮಂಡಳಿಗಳ ಆಡಿಟ್ ನಡೆಸಿ
ಕರ್ನಾಟಕದ ಜನತೆಯಲ್ಲಿ ಮೂಡಿರುವ ಈ ಅನುಮಾನ ನಿವಾರಿಸಲು, ರಾಜ್ಯದ ಎಲ್ಲಾ ನಿಗಮ ಮಂಡಳಿಗಳ ಹಣಕಾಸಿನ ಸ್ಥಿತಿಗತಿ ಬಗ್ಗೆ ಒಂದು ಸಂಪೂರ್ಣ ಆಡಿಟ್ ನಡೆಸಬೇಕು ಎಂದು ಅವರು ಆಗ್ರಹಿಸಿದರು. ನಿಗಮ ಮಂಡಳಿಗಳ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆರ್.ಅಶೋಕ್ ಆಗ್ರಹಿಸಿದರು.

ಸಂಪುಟದಿಂದ ಡಿಕೆಶಿ ಹೊರಗಿಟ್ಟಿದ್ದ ಸಿಎಂ
ಇದೇ ಸಿಎಂ ಸಿದ್ದರಾಮಯ್ಯ ಅವರು 2013ರಲ್ಲಿ ಇವರು ಶುದ್ಧಹಸ್ತರಲ್ಲ ಎಂದು ಡಿಕೆ.ಶಿವಕುಮಾರ್ ಅವರನ್ನೇ ಒಂದು ವರ್ಷ ಸಂಪುಟದಿಂದ ಹೊರಗಿಟ್ಟಿದ್ದರು. ಈಗ ತಮ್ಮ ಎರಡನೇ ಅವಧಿಯಲ್ಲಿ ಭ್ರಷ್ಟಾಚಾರದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿರುವ ಒಬ್ಬ ಸಚಿವನ ರಾಜೀನಾಮೆಯನ್ನೂ ಪಡೆಯಲಾಗದಷ್ಟು ದುರ್ಬಲರಾಗಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಮ್ಮ ಪರಿಸ್ಥಿತಿ ಕಂಡರೆ ಅಯ್ಯೋ ಎಂದು ಕನಿಕರ ಮೂಡುತ್ತಿದೆ. ಭ್ರಷ್ಟ ಸಚಿವರಿಂದ ಬ್ಲಾಕ್ ಮೇಲ್ ಮಾಡಿಸಿಕೊಂಡು ಕುರ್ಚಿ ಉಳಿಸಿಕೊಳ್ಳುವಂತಹ ದುರ್ಗತಿ ನಿಮಗೆ ಬರಬಾರದಿತ್ತು.
ಕರ್ನಾಟಕದ ಅತ್ಯಂತ ದುರ್ಬಲ (ವೀಕ್) ಮುಖ್ಯಮಂತ್ರಿ ಎಂದು ಇತಿಹಾಸದಲ್ಲಿ ಕುಖ್ಯಾತಿ ಪಡೆದುಕೊಳ್ಳುವ ಬದಲು ರಾಜೀನಾಮೆ ಕೊಟ್ಟು ಗೌರವದಿಂದ ನಿವೃತ್ತರಾಗಿ ಎಂದು ಅವರು ಆಗ್ರಹಿಸಿದರು.












Click it and Unblock the Notifications