'ರಾಗಾ' ರ‍್ಯಾಲಿ-ಚುನಾವಣಾ ಸೋಲಿನ ಬಗ್ಗೆ ಆರ್.ಅಶೋಕ್ ಭವಿಷ್ಯ
ಬೆಂಗಳೂರು, ಜನವರಿ 14: ಕಾಂಗ್ರೆಸ್ ನಾಯಕರು ದಕ್ಷಿಣ ಭಾಗದಿಂದ ಜೋಡೋ ಯಾತ್ರೆ ಶುರು ಮಾಡಿದ್ದರು. ನಂತರ ಉತ್ತರ ಭಾಗದ ಮೂರು ರಾಜ್ಯಗಳಲ್ಲಿ ಚುನಾವಣೆಯಲ್ಲಿ ಸೋತರು. ರಾಹುಲ್ ಗಾಂಧಿ ಎಲ್ಲೆಲ್ಲಿ ಪಾದಯಾತ್ರೆ ಮಾಡಿ ನೆಲವನ್ನು ಸ್ಪರ್ಶಿಸುತ್ತಾರೋ ಅಲ್ಲೆಲ್ಲ ಕಾಂಗ್ರೆಸ್ ಅವನತಿ ಕಾಣುತ್ತದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.
ಭಾನುವಾರ ದೇವಸ್ಥಾನ ಸ್ವಚ್ಚತಾ ಕಾರ್ಯದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ದೇಶದಲ್ಲಿ ನ್ಯಾಯಾಂಗವನ್ನು ದಮನ ಮಾಡಿದ ಕಾಂಗ್ರೆಸ್ ನಾಯಕರು ಈಗ ನ್ಯಾಯ ಯಾತ್ರೆ ಮಾಡುತ್ತಿರುವುದು ಢೋಂಗಿತನ. ತುರ್ತು ಪರಿಸ್ಥಿತಿ ಹೇರಿಕೆಯಿಂದ ಪ್ರಜಾಪ್ರಭುತ್ವವನ್ನು ದಮನ ಮಾಡಿದ ಇವರ ಯಾತ್ರೆಗೆ ಮೂರು ಕಾಸಿನ ಬೆಲೆ ಇಲ್ಲ ಎಂದರು.

ಸದ್ಯ ರಾಹುಲ್ ಗಾಂಧಿಯವರು 'ನ್ಯಾಯ ಯಾತ್ರೆ'ಯನ್ನು ಮಾಡುತ್ತಿರುವ ಅವರು ಈ ಹಿಂದೆ ಸರ್ವಾಧಿಕಾರದ ಆಡಳಿತವನ್ನು, ತುರ್ತು ಪರಿಸ್ಥಿತಿಯನ್ನು ದೇಶದಲ್ಲಿ ತಂದಿದ್ದರು. ನ್ಯಾಯಾಂಗವನ್ನು, ಪತ್ರಿಕಾ ರಂಗವನ್ನು ದಮನ ಮಾಡಿದ ಇದೇ ಕಾಂಗ್ರೆಸ್ ನಾಯಕರಿಗೆ ನ್ಯಾಯ ಕೇಳಲು ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದರು.
ಭಾರತೀಯರ ಭಾವನೆಗೆ ಧಕ್ಕೆ
ಕಾಂಗ್ರೆಸ್ ನಾಯಕರು ಅನೇಕ ಅಪರಾಧಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ನೆಹರು ಕಾಲದಿಂದ ರಾಹುಲ್ ಗಾಂಧಿಯವರೆಗೆ ರಾಮ ಮಂದಿರವನ್ನು ವಿರೋಧಿಸಿ ಭಾರತೀಯರ ಭಾವನೆಗೆ ಧಕ್ಕೆ ತಂದಿದ್ದಾರೆ. ಆದ್ದರಿಂದ ಈ ನ್ಯಾಯ ಯಾತ್ರೆ ಢೋಂಗಿ ಯಾತ್ರೆ. ಇದು ಭೂತದ ಬಾಯಲ್ಲಿ ಭಗವದ್ಗೀತೆ ಎನ್ನುವಂತಾಗಿದೆ.
ಪ್ರಜಾಪ್ರಭುತ್ವವನ್ನು ದಮನ ಮಾಡಿ, ಸಂಪತ್ತನ್ನು ಲೂಟಿ ಮಾಡಿದ ಇವರು ನ್ಯಾಯ ಕೇಳಲು ಹೋಗುವುದಕ್ಕೆ ಮೂರು ಕಾಸಿನ ಬೆಲೆ ಇಲ್ಲ. ಲೋಕಸಭಾ ಚುನಾವಣೆಯ ಪೂರ್ವ ಸಮೀಕ್ಷೆಯಲ್ಲಿ ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂಬ ಭವಿಷ್ಯ ಕೇಳಿ ಬಂದಿದೆ. ಹೀಗಾಗಿ ಮಾನ ಉಳಿಸಿಕೊಳ್ಳಲು ಕಾಂಗ್ರೆಸ್ಸಿಗರು ಯಾತ್ರೆ ಮಾಡುತ್ತಾರೆ. ಇದರಿಂದ ಯಾವುದೇ ಲಾಭವಿಲ್ಲ. ಪ್ರಧಾನಿಯ ಮೋದಿ ಗೆಲುವು ಖಂಡಿತು ಎಂದು ಹೇಳಿದರು.
ಸಿಎಂ ಹೇಳಿಕೆ ಖಂಡಿಸಿದ ಆರ್.ಅಶೋಕ್
ರಾಮಮಂದಿರ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಲುವನ್ನು ಖಂಡಿಸುತ್ತೇವೆ. ಅವರು ತೀವ್ರವಾಗಿ ದಾಳಿ ನಡೆಸಿ ಮಾತಾಡುತ್ತಿದ್ದಾರೆ. ಅಲ್ಲಿಗೆ ಏಕೆ ಹೋಗಬೇಕು ಎಂದು ಪ್ರಶ್ನೆ ಮಾಡುತ್ತಾರೆ. ತಿರುಪತಿಗೇ ಏಕೆ ಹೋಗಬೇಕು, ಧರ್ಮಸ್ಥಳಕ್ಕೇ ಏಕೆ ಹೋಗಬೇಕು, ಯಲ್ಲಮ್ಮ ದೇವಸ್ಥಾನಕ್ಕೆ ಏಕೆ ಹೋಗಬೇಕು ಎಂದು ಪ್ರಶ್ನೆ ಮಾಡಬಾರದು.
ಇವೆಲ್ಲವುಗಳ ಸಿದ್ದರಾಮಯ್ಯನವರ ಸಂತೆ ಭಾಷಣ. ಮಸೀದಿಗೆ ಏಕೆ ಹೋಗಬೇಕು, ಟೋಪಿ ಏಕೆ ಹಾಕಬೇಕು, ಮನೆಯಲ್ಲೇ ಪೂಜೆ ಮಾಡಬಹುದು ಎಂದು ಕೂಡ ಪ್ರಶ್ನೆ ಮಾಡಬಾರದು. ಸಿದ್ದರಾಮಯ್ಯ ತಾವು ಕೂಡ ಹಿಂದೂ ಎನ್ನುವುದೇ ಢೋಂಗಿತನ. ರೈತರು ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಪ್ರಜ್ಞೆಯೇ ಇಲ್ಲ. ಆದರೆ ಮುಸ್ಲಿಮರಿಗೆ ಅನುದಾನ ಕೊಡುತ್ತಿದ್ದಾರೆ. ಬೆಣ್ಣೆ ಹೆಚ್ಚುವ ರಾಜಕಾರಣ ಬಿಡದಿದ್ದರೆ ಬಹುಸಂಖ್ಯಾತ ಹಿಂದೂಗಳು ಸರಿಯಾದ ಸುಣ್ಣ ಹಚ್ಚುತ್ತಾರೆ ಎಂದರು.
ವಿ.ಸೋಮಣ್ಣ ಅವರದ್ದು ಏನೂ ಸಮಸ್ಯೆ ಇಲ್ಲ. ಅವರು ಲೋಕಸಭೆ ಚುನಾವಣೆಯಲ್ಲಿ ಶ್ರಮಿಸಲಿದ್ದಾರೆ. ಉಳಿದಿದ್ದನ್ನು ಕೇಂದ್ರದ ನಾಯಕರು ತೀರ್ಮಾನಿಸುತ್ತಾರೆ ಎಂದರು.

ಕೇಸ್ ಮುಚ್ಚಿಹಾಕುವ ಪ್ರಯತ್ನ: ಆರೋಪ
ಹಾವೇರಿ ಜಿಲ್ಲೆಯ ಹಾನಗಲ್ ಅತ್ಯಾಚಾರ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಅಲ್ಲಿನ ರಾಜಕೀಯ ನಾಯಕರು ಭೇಟಿಗೆ ಅವಕಾಶ ಮಾಡಿ ಕೊಡುತ್ತಿಲ್ಲ. ಪೊಲೀಸರ ಮೂಲಕ ಅವರನ್ನು ಬೇರೆ ಕಡೆ ಕಳುಹಿಸಲಾಗಿದೆ. ಈ ಪ್ರಕರಣವನ್ನು ಮುಚ್ಚಿಹಾಕುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ.
ನೈತಿಕ ಪೊಲೀಸ್‌ಗಿರಿ, ದಾದಾಗಿರಿ, ದೌರ್ಜನ್ಯ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆಯೇ ಇಲ್ಲವಾಗಿದೆ. ಬೆಳಗಾವಿಯಲ್ಲಿ ಬೆತ್ತಲೆ ಮಾಡಿದ ಪ್ರಕರಣವೂ ಹೀಗೆಯೇ ಆಗಿದೆ. ಸರ್ಕಾರ ಸತ್ತು ಹೋಗಿದೆ ಎಂದು ಜನರು ಅಂದು ಕೊಂಡಿದ್ದಾರೆ. ಬರಗಾಲ ಹಾಗೂ ಕಾನೂನು ಸುವ್ಯವಸ್ಥೆ ಕುಸಿತದ ವಿರುದ್ಧ ಹೋರಾಟ ಮಾಡುತ್ತೇವೆ. ನಾನು ಎಲ್ಲ ಜಿಲ್ಲೆಗಳಲ್ಲಿ ಓಡಾಡಿ ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಮೋದಿ ಕರೆಯಂತೆ ದೇವಸ್ಥಾನ ಸ್ವಚ್ಛತೆ
ರಾಮ ಮಂದಿರ ಲೋಕಾರ್ಪಣೆ ಅಂಗವಾಗಿ ರಾಜ್ಯದ ಎಲ್ಲಾ ಭಾಗಗಳಲ್ಲಿ ದೇವಾಲಯಗಳಲ್ಲಿ ಶುದ್ಧೀಕರಣ ಕಾರ್ಯ ನಡೆಯುತ್ತಿದೆ. ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಪ್ರಯುಕ್ತ, ಜನವರಿ 14 ರಿಂದ ದೇವಾಲಯಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಅದರಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರ ನೇತೃತ್ವದಲ್ಲಿ ಜಯನಗರ 4 ನೇ ಹಂತದ ಗಣೇಶ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಜನವರಿ 22 ರಂದು ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಲಿದೆ.












Click it and Unblock the Notifications