ಬಿಬಿಎಂಪಿ ಮಾಜಿ ಮೇಯರ್ ಶಾಂತಕುಮಾರಿ ಜೆಡಿಎಸ್ ಸೇರಲ್ಲ
ಬೆಂಗಳೂರು, ಅಕ್ಟೋಬರ್ 13 : 'ಬಿಬಿಎಂಪಿಯ ಮಾಜಿ ಮೇಯರ್ ಶಾಂತಕುಮಾರಿ, ಹೆಚ್.ರವೀಂದ್ರ ಅವರು ಜೆಡಿಎಸ್ ಪಕ್ಷಕ್ಕೆ ಸೇರುವುದಿಲ್ಲ' ಎಂದು ಮಾಜಿ ಸಚಿವ ಆರ್.ಅಶೋಕ್ ಸ್ಪಷ್ಟನೆ ನೀಡಿದ್ದಾರೆ. ಇಬ್ಬರು ನಾಯಕರು ಬಿಜೆಪಿ ತೊರೆಯಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಶುಕ್ರವಾರ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅಶೋಕ್, 'ವಿಜಯನಗರದ ಬಿಜೆಪಿ ಮುಖಂಡ ಹೆಚ್.ರವೀಂದ್ರ, ಮಾಜಿ ಮೇಯರ್ ಶಾಂತಕುಮಾರಿ ಪಕ್ಷ ಬಿಡುವುದಿಲ್ಲ' ಎಂದು ಹೇಳಿದರು.

ಹೆಚ್.ರವೀಂದ್ರ ಮತ್ತು ಶಾಂತಕುಮಾರಿ ಅವರು ಸಹ ಮಾಧ್ಯಗಳ ಜೊತೆ ಮಾತನಾಡಿ ಬಿಜೆಪಿ ತೊರೆಯುವುದಿಲ್ಲ ಎಂದು ಹೇಳಿದರು. ಹೆಚ್.ರವೀಂದ್ರ ಅವರು ಗುರುವಾರ ಫೇಸ್‌ಬುಕ್‌ನಲ್ಲಿಯೂ ಪಕ್ಷ ಬಿಡುವುದಿಲ್ಲ ಬಿಜೆಪಿ ತೊರೆಯುವ ಬಗ್ಗೆ ಹಬ್ಬಿರುವುದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದರು.
ಸೋಮವಾರ ವಿವಿಧ ಮಾಧ್ಯಮಗಳಲ್ಲಿ ಶಾಂತಕುಮಾರಿ ಮತ್ತು ಹೆಚ್.ರವೀಂದ್ರ ಅವರು ಜೆಡಿಎಸ್ ಪಕ್ಷಕ್ಕೆ ಸೇರಲಿದ್ದಾರೆ ಎಂಬ ಸುದ್ದಿ ಪ್ರಸಾರವಾಗಿತ್ತು. 2018ರ ಚುನಾವಣೆಗೆ ಇಬ್ಬರಿಗೂ ಬೆಂಗಳೂರು ನಗರ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ನೀಡಲಿದೆ. ಆದ್ದರಿಂದ, ಇಬ್ಬರು ಬಿಜೆಪಿ ತೊರೆದು ಜೆಡಿಎಸ್ ಸೇರಲಿದ್ದಾರೆ ಎಂಬ ವರದಿಗಳು ಬಂದಿತ್ತು.












Click it and Unblock the Notifications