Waqf Controversy: ವಕ್ಫ್ ಮಂಡಳಿಯ ಎಲ್ಲ ಜಮೀನುಗಳು ನೋಂದಣಿ ಸ್ಥಗಿತ: ಬಿಜೆಪಿ ಪತ್ರ
ಬೆಂಗಳೂರು, ನವೆಂಬರ್ 04: ಕರ್ನಾಟಕದಲ್ಲಿ ಇಂದು ಸೋಮವಾರ (ನವೆಂಬರ್ 4) ರಂದು ವಕ್ಫ್ ಆಸ್ತಿ ಕಬಳಿಕೆ, ರೈತರ ಜಮೀನು ಪಹಣಿಯಲ್ಲಿ ವಕ್ಫ್ ಉಲ್ಲೇಖ ವಿರುದ್ಧ ಬಿಜೆಪಿ ಪ್ರತಿಭಟನೆ ಆರಂಭಿಸಿದೆ. ಇದೀಗ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಕೇಂದ್ರ ಸಚಿವರು ಹಾಗೂ ವಕ್ಫ್ ಜಂಟಿ ಸಮಿತಿಗೆ ಪತ್ರ ಬರೆದಿದ್ದಾರೆ.
ಸೋಮವಾರ ಪತ್ರ ಬರೆದು, ಅದರ ಪ್ರತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಪತ್ರದಲ್ಲಿ ಅವರು ''ಕರ್ನಾಟಕದ ವಕ್ಫ್ ಮಂಡಳಿಗೆ ಸಂಬಂಧಿಸಿದ ಎಲ್ಲ ಬಗೆಯ ಜಮೀನು ನೋಂದಣಿಯನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಬೇಕೆಂದು'' ಕೋರಿದ್ದಾರೆ.

ಕೇಂದ್ರ ಸಚಿವರಿಗೆ ಪತ್ರ: ಆರ್.ಅಶೋಕ್ ವಿವರಿಸಿದ್ದೇನು?
ರೈತರ ಜಮೀನು ಹಾಗೂ ಹಿಂದೂ ಸಂಸ್ಥೆಗಳಿಗೆ ಸಂಬಂಧಿಸಿದ ಜಮೀನುಗಳನ್ನು ವಕ್ಫ್ ಮಂಡಳಿ ಕಬಳಿಸುತ್ತಿರುವ ಕುರಿತು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಹಾಗೂ ವಕ್ಫ್ ತಿದ್ದುಪಡಿ ಮಸೂದೆಯ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರಿಗೆ ಪತ್ರ ಬರೆದು ನೋಂದಣಿ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರದಲ್ಲಿ ವಕ್ಫ್ ತಿದ್ದುಪಡಿ ಮಸೂದೆ ತರಲು ಜಂಟಿ ಸಂಸದೀಯ ಸಮಿತಿ ರಚಿಸಲಾಗಿದೆ. ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ದಕ್ಷತೆ ಹಾಗೂ ಪಾರದರ್ಶಕತೆ ತರಲು ಈ ಸಮಿತಿ ಶ್ರಮಿಸುತ್ತಿದೆ. ಆದರೆ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಮತ್ತು ವಕ್ಫ್ ಮಂಡಳಿಯು ಕಂದಾಯ ದಾಖಲೆಗಳನ್ನು ತಿದ್ದುವ ಹಾಗೂ ರೈತರ ಜಮೀನುಗಳ ಮಾಲೀಕತ್ವ ವರ್ಗಾಯಿಸಿಕೊಳ್ಳುವ ಪ್ರಯತ್ನ ಆರಂಭವಾಗಿದೆ ಅವರು ದೂರಿದ್ದಾರೆ.

ತರಾತುರಿಯಲ್ಲಿ ಜಮೀನು ನೋಂದಣಿ: ನೋಟಿಸ್ ಜಾರಿ
ಈ ರೀತಿ ತರಾತುರಿಯಲ್ಲಿ ಜಮೀನುಗಳನ್ನು ವಕ್ಫ್ ಮಂಡಳಿ ನೋಂದಾಯಿಸಿಕೊಳ್ಳುತ್ತಿರುವ ಪರಿಣಾಮ ಸಾವಿರಾರು ಬಡವರು ಹಾಗೂ ರೈತರು ವಂಶಪಾರಂಪರ್ಯವಾಗಿ ಬಂದ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ 15,000 ಎಕರೆ ಜಮೀನನ್ನು ವಶಪಡಿಸಿಕೊಳ್ಳಲು ನೋಟಿಸ್ ನೀಡಲಾಗಿದೆ ಎಂದು ನೂರಾರು ರೈತರು ಹೇಳಿದ ಬಳಿಕ ಈ ಸಂಗತಿ ಬೆಳಕಿಗೆ ಬಂದಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತಲಾ 10,000 ಎಕರೆ ಜಮೀನನ್ನು ವಕ್ಫ್ ನೋಂದಣಿ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ ಎಂದು ಹೇಳಲಾಗಿದೆ. ಇಷ್ಟೇ ಅಲ್ಲದೆ, ವಕ್ಫ್ ಮಂಡಳಿಯು ದೇವಸ್ಥಾನ, ಮಠ ಹಾಗೂ ಇತರೆ ಹಿಂದೂ ಧಾರ್ಮಿಕ ಸಂಸ್ಥೆಗಳ ಜಮೀನುಗಳನ್ನು ಕೂಡ ತನ್ನದು ಎಂದು ಹೇಳಿಕೊಂಡಿದೆ.
In the wake of the recent atrocities by Karnataka Waqf Board, I have written to Union Home Minister Shri @AmitShah Ji and Chairman of the Joint Parliamentary Committee on Waqf (Amendment) Bill, 2024, Shri Jagadambika Pal Ji, urging them to instruct Chief Secretary of Karnataka to… pic.twitter.com/vfz4nk1unw
— R. Ashoka (@RAshokaBJP) November 4, 2024
ವಕ್ಫ್ ಉಲ್ಲೇಖ ಆಘಾತಕಾರಿ: ಆರ್.ಅಶೋಕ್
ಹಿಂದೂ ಸ್ಮಶಾನ ಕೂಡ ತನ್ನದು ಎಂದು ವಕ್ಫ್ ಉಲ್ಲೇಖಿಸಿರುವುದು ಇನ್ನಷ್ಟು ಆಘಾತದ ಸಂಗತಿ. 13 ನೇ ಶತಮಾನದಷ್ಟು ಇತಿಹಾಸ ಹೊಂದಿರುವ ವಿರಕ್ತ ಮಠಕ್ಕೆ ಸೇರಿದ ಸಿಂಧಗಿಯ 1.28 ಎಕರೆ ಜಮೀನು, ವಿಜಯಪುರದ ಐತಿಹಾಸಿಕ ಸೋಮೇಶ್ವರ ದೇವಾಲಯ, ಕಲಬುರ್ಗಿಯ ಬೀರದೇವರ ಗುಡಿ ಸೇರಿದಂತೆ ಅನೇಕ ಜನಪ್ರಿಯ ಸ್ಥಳಗಳನ್ನು ಕೂಡ ವಕ್ಫ್ ತನ್ನದೆಂದು ಘೋಷಿಸಿಕೊಂಡಿದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
ವಕ್ಫ್ ಬೋರ್ಡ್ ನಡೆಯಿಂದ ಜನರಲ್ಲಿ ಆತಂಕ
ರಾಜ್ಯ ವಕ್ಫ್ ಬೋರ್ಡ್ ನಡೆ ಜನರಲ್ಲಿ ಆತಂಕ ಉಂಟುಮಾಡಿದೆ. ಈ ಸಂಬಂಧ ಹಾವೇರಿಯಲ್ಲಿ ಹಿಂಸಾಚಾರ, ಗಲಭೆ ಕೂಡ ನಡೆದಿದೆ. ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ, ಜಂಟಿ ಸಮಿತಿಯು ಕೂಡಲೇ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯ ಜೊತೆ ಮಾತನಾಡಬೇಕು ಹಾಗೂ ವಕ್ಫ್‌ಗೆ ಸಂಬಂಧಿಸಿದ ಜಮೀನು ನೋಂದಣಿ ಸ್ಥಗಿತಗೊಳಿಸಲು ಸೂಚಿಸಬೇಕೆಂದು ಅವರು ಮನವಿಪತ್ರದ ಮೂಲಕ ಒತ್ತಾಯಿಸಿದ್ದಾರೆ.












Click it and Unblock the Notifications